Mysore
22
moderate rain
Light
Dark

ಲೋಕಸಭೆ ಚುನಾವಣೆ 2024: ಮೈತ್ರಿ ವಿರುದ್ಧ ಡಿಕೆಶಿ ವಾಗ್ದಾಳಿ

ಮಂಡ್ಯ: ಬಿಜೆಪಿ-ಜೆಡಿಎಸ್‌ನವರು ರಾಜ್ಯದ ಜನತೆಗೆ ಏನನ್ನೂ ಮಾಡಲಿಲ್ಲ. ನಿಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ ಬದಲಿಗೆ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಮೈತ್ರಿಯನ್ನು ಜಿಲ್ಲೆಯಿಂದ ಕಿತ್ತೊಗಿಯಿರಿ ಎಂದು ಉಪ ಮುಖ್ಯಮುಂತ್ರಿ ಡಿ.ಕೆ ಶಿವಕುಮಾರ್‌ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ನರಗದಲ್ಲಿ ನಡೆದ ಪ್ರಜಾಧ್ವನಿ 2 ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್‌ ಬಡವರು ಮತ್ತು ರೈತರ ಕಷ್ಟದ ಜೊತೆ ಹೆಜ್ಜೆ ಹಾಕುತ್ತಿದೆ. ಐದು ಗ್ಯಾರಂಟಿ ನೀಡಿ ನಿಮ್ಮ ಬದುಕನ್ನು ಹಸನು ಮಾಡುತ್ತಿದೆ. ಮಂಡ್ಯ ಗೆದ್ರೆ ಇಂಡಿಯಾ ಗೆಲ್ಲುತ್ತೇವೆ ಎನ್ನುವ ವಿಸ್ವಾಸದಿಂದ ರಾಹುಲ್‌ ಗಾಂಧಿ ಜಿಲ್ಲೆಗೆ ಬಂದಿದ್ದಾರೆ ಅವರಿಗೆ ಶಕ್ತಿ ತುಂಬಿರಿ ಎಂದರು.

ಮಂಡ್ಯ ಜಿಲ್ಲಾ ಜನರ ಕಷ್ಟಕ್ಕೂ ಆಗದ ಸುಖಕ್ಕೂ ಆಗದ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಯಾವ ವಿಶೇಷ ಯೋಜನೆಯನ್ನೂ ನೀಡಿಲ್ಲ. ಬಿಜೆಪಿಯ ʻಬಿ ಟೀಮ್‌ʼ ಆಗಿದ್ದ ಜೆಡಿಎಸ್‌ ಇದೀಗ ʻಎ ಟೀಮ್‌ʼ ಆಗಿದೆ ಎಂದು ಮೈತ್ರಿಯನ್ನು ಟೀಕಿಸಿದರು.

ಜಿಲ್ಲೆಗೆ ನೀವೇ ಅಭ್ಯರ್ಥಿಯಾಗಿ ಬಂದಿದ್ದೀರಲ್ಲ ಯಾಕೆ ಸ್ವಾಮಿ, ನಿಮ್ಮನ್ನು ಮುಖ್ಯಮಂತ್ರಿ ಮಾಡಿದ ಜನರು ಇರಲಿಲ್ವ, ನಿಮ್ಮನ್ನು ಶಾಸಕ ಮಾಡಿದ ನಾಯಕ ಇರಲಿಲ್ವ, ಅವರಿಗೆ ಅವಕಾಶ ಕೊಡದೇ ನೀವೇ ಬಂದಿದ್ದಿರಲ್ಲ, ಅವರನ್ನೇಕೆ ತುಳಿಯುತ್ತೀದ್ದೀರ ಎಂದು ಕುಮಾರಸ್ವಾಮಿಯನ್ನು ಪ್ರಶ್ನಿಸಿದರು.

ಕಾಂಗ್ರೆಸ್‌ ಈ ಅವಧಿಯಲ್ಲೇ ರೈತರಿಗೋಸ್ಕರ ಮೇಕೆದಾಟು ಯೋಜನೆ ಮಾಡುವ ಸಂಕಲ್ಪ ಮಾಡಿದೆ. ಐದು ಬೆರಳು ಸೇರಿ ಅಂಗೈಯಾಗಿ ಕೈಗಟ್ಟಿಯಾಯ್ತು, ಹಾಗೆಯೇ ಐದು ಗ್ಯಾರಂಟಿ ಸೇರಿ ಜಿಲ್ಲೆ ಹಾಗೂ ರಾಜ್ಯ ಗಟ್ಟಿಯಾಗಿದೆ. ನಿಮ್ಮ ಜಿಲ್ಲೆಯ ಮಗ ವೆಂಕಟರಮಣೇಗೌಡ(ಸ್ಟಾರ್ ಚಂದ್ರು)ಗೆ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಮಂಡ್ಯದಲ್ಲಿ ಸ್ಪರ್ಧಿಸಿರುವುದು ಸ್ಟಾರ್ ಚಂದ್ರು ಅಲ್ಲ, ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಎನ್ನುವುದನ್ನು ಜಿಲ್ಲೆಯ ಜನ ಗಮನದಲ್ಲಿಟ್ಟುಕೊಳ್ಳಬೇಕು. ಕುಮಾರಸ್ವಾಮಿನ ಜಿಲ್ಲೆಯಿಂದಲ್ಲ ರಾಜ್ಯದಿಂಲೇ ಗೋ ಬ್ಯಾಕ್‌ ಮಾಡಬೇಕು. ಜಿಲ್ಲೆಯ ತಾಯಂದಿರು ಕಾಂಗ್ರೆಸ್‌ ಅಭ್ಯರ್ಥಿಗೆ ಶಕ್ತಿ ತುಂಬಿರಿ ಎಂದರು.