ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಹಾಗೂ ಮುಂದೆ ಕೈಗೊಳ್ಳಲಿರುವ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಗಡ್ಕರಿ ಅವರ ನಿವಾಸಕ್ಕೆ ತಮ್ಮ ಆಪ್ತ ಅಧಿಕಾರಿಗಳ ಜತೆ ತೆರಳಿ ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕಾರ್ಯಗತ ಆಗುತ್ತಿರುವ ಹೆದ್ದಾರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈಗಾಗಲೇ ಹಲವಾರು ಯೋಜನೆಗಳ ಬಗ್ಗೆ ಮನವಿ ಮಾಡಿದ್ದು, ಬಹುತೇಕ ಯೋಜನೆಗಳಿಗೆ ಹೆದ್ದಾರಿ ಸಚಿವರಿಂದ ಅನುಮೋದನೆ ದೊರೆತಿದೆ. ಉಳಿದ ಕೆಲವು ಯೋಜನೆಗಳ ಬಗ್ಗೆ ಸಚಿವರು ಹೆದ್ದಾರಿ ಸಚಿವರೊಂದಿಗೆ ಚರ್ಚಿಸಿದರು.
ಇದೇ ವೇಳೆ ಪಾಂಡವಪುರ ಸಕ್ಕರೆ ಕಾರ್ಖಾನೆ ಸಮೀಪದ ಸಿಡಿಎಸ್ ಕಾಲುವೆಯಿಂದ ದರಸಗುಪ್ಪೆ ನೀರು ಸಂಸ್ಕರಣಾ ಘಟಕದವರೆಗೂ ನಾಲ್ಕು ಪಥದ ಹೆದ್ದಾರಿಯ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದರು.





