ಮದ್ದೂರು : ಕಳೆದ ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟದ ನಂತರ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹಿಂದೂಪರ ಸಂಘಟನೆಗಳು ಬುಧವಾರ ಅದ್ಧೂರಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಿದವು.
ಬುಧವಾರ ಭಾರೀ ಬಿಗಿ ಭದ್ರತೆ ನಡುವೆ ಮದ್ದೂರಿನ ಹತ್ತು ಹಾಗೂ ಸುತ್ತಮುತ್ತಲಿನ ಗ್ರಾಮಗಳ 18 ಗಣಪತಿ ಸೇರಿದಂತೆ ಒಟ್ಟು 28 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿ ಹಿಂದೂಪರ ಸಂಘಟನೆಗಳು ಶಕ್ತಿ ಪ್ರದರ್ಶನ ಮಾಡಿದವು.
11.45ಕ್ಕೆ ಮದ್ದೂರು ಪಟ್ಟಣದ ಕಾಶಿ ವಿಶ್ವನಾಥ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಹೊಳೆಬೀದಿ, ಪೇಟೆ ಬೀದಿ, ಟಿಬಿ ಸರ್ಕಲ್, ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೂರು ಕಿಲೋ ಮೀಟರ್ ಸಂಚರಿಸಿ ಕೊಲ್ಲಿ ಸರ್ಕಲ್ ಮೂಲಕ ಆಗಮಿಸಿ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಬೂದಿ ಮುಚ್ಚಿದ ಕೆಂಡದಂತಿದ್ದ ಮದ್ದೂರು ಪಟ್ಟಣದಲ್ಲಿ ನಡೆದ ಗಣಪತಿ ವಿಸರ್ಜನೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಸಹ ಭಾಗವಹಿಸಿ ಬೆಂಬಲ ನೀಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಶಾಸಕ ಚನ್ನಬಸಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಪುಟ್ಟರಾಜು, ಡಾ.ಅಶ್ವತ್ಥ ನಾರಾಯಣ, ನಟಿ ಸುಮಲತಾ ಅಂಬರೀಶ್, ಮಾಜಿ ಶಾಸಕರಾದ ಪ್ರೀತಂಗೌಡ, ಸುರೇಶ್‌ಗೌಡ, ತಮಣ್ಣ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.





