ಮಂಡ್ಯ: ಕಬಡ್ಡಿ ಪಂದ್ಯಾವಳಿ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಓರ್ವ ಸಾವನ್ನಪ್ಪಿ, ಮಕ್ಕಳು ಸೇರಿದಂತೆ 13 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಪಾಪಣ್ಣಚಾರಿ(50) ಮೃತಪಟ್ಟ ವ್ಯಕ್ತಿ. ಮಕ್ಕಳು ಸೇರಿದಂತೆ 13 ಮಂದಿ ಗಾಯಗೊಂಡು ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರೀಭೈರವ ಕಪ್ ಹೆಸರಿನಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಪಂದ್ಯಾವಳಿ ನಿಗದಿ ಮಾಡಲಾಗಿತ್ತು. ಶನಿವಾರ ರಾತ್ರಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಬ್ಬಿಣದಿಂದ ಅಳವಡಿಸಲಾಗಿದ್ದ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದಿದೆ. ಕುಸಿತದಿಂದ ಪಾಪಣ್ಣಚಾರಿ ಗ್ಯಾಲರಿ ಕೆಳಗೆ ಸಿಲುಕಿ, ಕೆಲವರನ್ನು ರಕ್ಷಿಸಿ ಬಳಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 13 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಪೃಥ್ವಿಗೌಡ, ಮನೀಶ್‌ಗೌಡ, ಜಗದೀಶ್, ಸೃಜನ್‌ಗೌಡ, ಸಮರ್ಥ, ಮದನ್, ಕೃಷ್ಣ, ಜೀವಿತ, ಮೋಹಿತ್‌ಗೌಡ, ಚಂದ್ರ, ರವಿ, ವಿಶ್ವಾಸ್, ಶಶಿ ಎಂಬುವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಆರು ಮಂದಿ ಮಕ್ಕಳಿದ್ದಾರೆ.
ಸಾವಿರಾರು ಜನರು ಸೇರುವ ಹಿನ್ನೆಲೆಯಲ್ಲಿ ಗ್ಯಾಲರಿ ಅಳವಡಿಸಲಾಗಿತ್ತು. ಕಡಿಮೆ ಸಾಮರ್ಥ್ಯದ ಕಬ್ಬಿಣ ಬಳಕೆ ಮಾಡಲಾಗಿತ್ತು ಎನ್ನಲಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ವೀಕ್ಷಕರು ಕುಳಿತಿದ್ದರಿಂದ ಗ್ಯಾಲರಿ ಕುಸಿತವಾಗಿದೆ. ಕಡಿಮೆ ಸಾಮರ್ಥ್ಯ ಕಬ್ಬಿಣ, ಸರಿಯಾದ ಇಂಟರ್ ಲಾಕ್ ಬಳಸದೆ ಇರುವುದರಿಂದ ಘಟನೆ ಸಂಭವಿಸಿದೆ, ಗ್ಯಾಲರಿ ಅಳವಡಿಕೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಾಲ್ಲೂಕಿನ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





