ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಆರಂಭಕ್ಕೂ ಮುನ್ನ ವಿಚಾರ ಸಂಕಿರಣದ ವಿವಾದ ಸೃಷ್ಟಿಯಾಗಿದೆ.
ಬರುವ ಡಿಸೆಂಬರ್.20ರಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಸರ್ವ ರೀತಿಯಲ್ಲೂ ತಯಾರಿಕೆ ಮಾಡಿಕೊಳ್ಳಲಾಗಿದೆ.
ಈ ಬೆನ್ನಲ್ಲೇ ಮಂಡ್ಯದಲ್ಲಿ ವಿಚಾರ ಸಂಕಿರಣದ ವಿವಾದವೊಂದು ಸೃಷ್ಟಿಯಾಗಿದ್ದು, ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ವಿಚಾರ ಸಂಕಿರಣವನ್ನು ನಡೆಸಬೇಕೆಂದು ಪ್ರಗತಿಪರರು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ.
ಈ ಸಮ್ಮೇಳನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರನ್ನು ನೆನೆಯಬೇಕು. ಇವರಿಗಿಂತ ಹೆಚ್ಚಾಗಿ ಟಿಪ್ಪು ಸುಲ್ತಾನ್ ಅವರನ್ನು ಕೂಡ ನೆನೆಯಬೇಕು ಎಂದು ಪ್ರಗತಿಪರರು ಪಟ್ಟು ಹಿಡಿದಿದ್ದಾರೆ.
ಇದಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಟಿಪ್ಪು ಸುಲ್ತಾನ್ ವಿಚಾರ ಸಂಕಿರಣ ಮಾಡಲು ಮುಂದಾದರೆ ತಡೆಯುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿವೆ.