ಮಂಡ್ಯ: ರಸ್ತೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದ್ದು, ಒತ್ತುವರಿ ತೆರವಿಗೆ ಬಂದ ನಗರಸಭೆ ಅಧಿಕಾರಿಗಳೊಂದಿಗೆ ಮಾಲೀಕರು ವಾಗ್ವಾದಕ್ಕಿಳಿದ ಘಟನೆ ನಡೆದಿದೆ.
ಮಂಡ್ಯದ 21ನೇ ವಾರ್ಡ್‌ನ ಹಾಲಹಳ್ಳಿ 4ನೇ ಕ್ರಾಸ್‌ನಲ್ಲಿ ವಾಸವಿರುವ ನಗರಸಭೆ ಮಾಜಿ ಸದಸ್ಯ ಹಾಗೂ ಜಾ.ದಳ ಮುಖಂಡ ಶಂಕರ್ ಹಾಗೂ ಇತರೆ ನಾಲ್ವರು ರಸ್ತೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಮನೆ ಮಾಲೀಕರಿಗೆ ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಜೆಸಿಬಿಯೊಂದಿಗೆ ಒತ್ತುವರಿ ತೆರವಿಗೆ ಆಗಮಿಸಿದ ನಗರಸಭೆ ಅಧಿಕಾರಿಗಳೊಂದಿಗೆ ಮನೆ ಮಾಲೀಕರು ವಾಗ್ವಾದಕ್ಕಿಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮನೆ ಮಾಲೀಕರು ಕಾರ್ಯಾಚರಣೆಗೆ ಅಡ್ಡಿಪಡಿಸಿ ತೀವ್ರ ವಾಗ್ವಾದಕ್ಕೆ ಇಳಿದ ಪರಿಣಾಮ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಮನೆ ಮಾಲೀಕರು, ನಾವು ಕಳೆದ 20 ವರ್ಷಗಳಿಂದಲೂ ಇಲ್ಲೇ ವಾಸವಾಗಿದ್ದೇವೆ. ನಾವು ಯಾವುದೇ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿಲ್ಲ. ಆದರೂ ನಗರಸಭೆ ಅಧಿಕಾರಿಗಳು ಒತ್ತುವರಿ ಎಂಬ ನೆಪಹೇಳಿ ಮನೆಯನ್ನು ಕೆಡವಲು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಮನೆ ತೆರವು ಮಾಡಲು ನಾವು ಬಿಡುವುದಿಲ್ಲ ಎಂದರು.