ಮಂಡ್ಯ: ಇಬ್ಬರು ವಿವಾಹಿತ ಪ್ರೇಮಿಗಳು ಪ್ರೇಮ ಪುರಾಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಮದುವೆಯಾಗಿದ್ದರೂ ಗೃಹಿಣಿ ಗೆಳೆಯನಿಗಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯತಮೆ ಸಾವಿನ ವಿಚಾರ ತಿಳಿದು ಪ್ರಿಯಕರ ಕೂಡ ನೇಣಿಗೆ ಶರಣಾಗಿದ್ದಾರೆ.
ಮದ್ದೂರು ತಾಲ್ಲೂಕಿನ ಯರಗನಹಳ್ಳಿ ಗ್ರಾಮದ ಸೃಷ್ಟಿ ಎಂಬುವವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿಯಾಗಿದ್ದು, ಬನ್ನಹಳ್ಳಿ ಗ್ರಾಮದ ಪ್ರಸನ್ನ ಎಂಬುವವರೇ ನೇಣಿಗೆ ಶರಣಾಗಿರುವ ವ್ಯಕ್ತಿಯಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಪ್ರಸನ್ನ ಸೃಷ್ಟಿಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿ ಮಾಡುತ್ತಿದ್ದ. ಅಂತಿಮವಾಗಿ ಪ್ರಸನ್ನ ಹಾಗೂ ಸ್ಪಂದನಾ ಮದುವೆಯಾದರೆ ಒಂದೂವರೆ ವರ್ಷದ ಹಿಂದೆ ದಿನೇಶ್ ಎಂಬುವವರ ಜೊತೆ ಸೃಷ್ಟಿಯ ಮದುವೆ ಕೂಡ ನಡೆದು ಹೋಗಿತ್ತು.
ಇಬ್ಬರು ಬೇರೆ ಬೇರೆಯವರನ್ನು ಮದುವೆಯಾಗಿದ್ದರೂ ಪ್ರಸನ್ನ ಹಾಗೂ ಸೃಷ್ಟಿ ನಡುವೆ ಪ್ರೀತಿ ಮಾತುಕತೆ ನಡೆಯುತ್ತಿತ್ತು ಎನ್ನಲಾಗಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಸೃಷ್ಟಿ ಹಾಗೂ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಿರುವಾಗಲೇ ಡಿಸೆಂಬರ್.11ರಂದು ಸೃಷ್ಟಿ ಪತಿ ಮನೆಯಿಂದ ನಾಪತ್ತೆಯಾಗಿದ್ದಳು. ನಾಪತ್ತೆ ಬೆನ್ನಲ್ಲೇ ದಿನೇಶ್ ಅವರು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಡಿಸೆಂಬರ್.16ರಂದು ಶಿಂಷಾ ನದಿಯಲ್ಲಿ ಸೃಷ್ಟಿಯ ಶವ ಪತ್ತೆಯಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪ್ರಸನ್ನ ವಿಚಲಿತಗೊಂಡಿದ್ದ ಎನ್ನಲಾಗಿದೆ.
ಸೃಷ್ಟಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುವಾಗಲೇ ಇತ್ತ ಪ್ರಸನ್ನ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.