ಹನೂರು: ಚಾಮರಾಜನಗರದಿಂದ ತಮಿಳುನಾಡಿನ ಕಡೆ ಬಿಳಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾಗಿರುವ ಘಟನೆ ಮಲೆಮಾದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಚಾಮರಾಜನಗರದ ಪಟ್ಟಣದ ನಿವಾಸಿ ಇರ್ಫಾನ್ ಗಾಯಗೊಂಡ ಚಾಲಕನಾಗಿದ್ದಾನೆ. ಈತ ಮಲೆ ಮಾದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಪರಾರಿಯಾಗಿದ್ದಾನೆ.
ಘಟನೆಯ ವಿವರ : ಚಾಮರಾಜನಗರದಿಂದ ತಮಿಳುನಾಡಿಗೆ ಬಿಳಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಆನೆ ತಲೆ ದಿಂಬದ ಎರಡನೇ ತೀವ್ರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿಲಾರಿ ಪಲ್ಟಿಯಾಗಿ ಚಾಲಕ ಗಾಯಗೊಂಡಿದ್ದಾನೆ.ಈ ಘಟನೆ ಗುರುವಾರ ಮುಂಜಾನೆ ಜರುಗಿದೆ. ಲಾರಿ ಪಲ್ಟಿಯಾದ ಪರಿಣಾಮ ಮಲೆ ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲ ಮಾರ್ಗದ ಸಂಪರ್ಕ ಸುಮಾರು 6 ಗಂಟೆಗಳ ಕಾಲ ಸ್ಥಗಿತಗೊಂಡಿದೆ. ಇದೀಗ ಸ್ಥಳಕ್ಕೆ ಮಲೆಮಹದೇಶ್ವರ ಪೊಲೀಸರು ಭೇಟಿ ನೀಡಿ ಜೆಸಿಬಿ ಸಹಾಯದಿಂದ ವಾಹನವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಉಸ್ತುವಾರಿ ಸಚಿವರ ಮಾತಿಗೂ ಕಿಮ್ಮತ್ತಿಲ್ಲ : ಕಳೆದ ತಿಂಗಳು ಮಲೆ ಮಾದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣನವರು ಗೂಡ್ಸ್ ಲಾರಿಗಳು ಮಲೆ ಮಾದೇಶ್ವರ ಬೆಟ್ಟದ ಮೂಲಕ ಸಂಚರಿಸುತ್ತಿರುವುದರಿಂದ ಭಕ್ತರಿಗೆ ತೀವ್ರ ತೊಂದರೆಯಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆಸೂಚನೆ ನೀಡಿದ್ದರು,ಆದರೂ ಸಹ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಬುಧವಾರ ನೀಲಗಿರಿ ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಲ್ ರೋಡ್ ಸಮೀಪ ಪಲ್ಟಿ ಯಾದ ಘಟನೆ ಮಾಸುವ ಮುನ್ನ, ಗುರುವಾರ ಮುಂಜಾನೆ ಬಿಳಿಕಲ್ಲು ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇನ್ನು ಮುಂದೆ ಅಪಘಾತ ಅವಘಡಗಳು ಸಂಭವಿಸುವ ಮುನ್ನ ಪೊಲೀಸ್ ಇಲಾಖೆ ಹಾಗೂ ಆರ್ ಟಿ. ಒ ಅಧಿಕಾರಿಗಳು ಕ್ರಮ ಕೈಗೊಂಡು ಇನ್ನಷ್ಟು ಜೀವವನ್ನು ಉಳಿಸಬೇಕಿದೆ?
ಮೂರು ತಿಂಗಳಲ್ಲಿ ಎಂಟು ಅಪಘಾತ : ಬಣ್ಣಾರಿ ದಿಂಬಂ ನಲ್ಲಿ ಅಧಿಕ ಬಾರದ 10 ಚಕ್ರದ ವಾಹನ ಹಾಗೂ ಸಂಜೆ 6 ಗಂಟೆ ನಂತರ ಎಲ್ಲ ಗೂಡ್ಸ್ ವಾಹನಗಳಿಗೆ ನಿರ್ಬಂಧ ಹೇರಿರುವುದರಿಂದ ಲಾರಿಗಳು ಹನೂರು ಮಾರ್ಗವಾಗಿ ನಾಲ ರೋಡ್ ಮೂಲಕ ತಮಿಳುನಾಡಿಗೆ ತಲುಪುತ್ತಿವೆ, ಇನ್ನು ಕೆಲವು ಲಾರಿಗಳು ಮಲೆ ಮಾದೇಶ್ವರ ಬೆಟ್ಟದ ಮೂಲಕ ತಮಿಳುನಾಡಿಗೆ ತಲುಪುತ್ತಿದೆ, ಕಳೆದ ಮೂರು ತಿಂಗಳ ಅವಧಿಯಲ್ಲಿ 8 ಅಪಘಾತಗಳು ಜರುಗಿದ್ದು ಜೋಳದ ಪೀಡ್ಸ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ, ಇನ್ನು ಮಲೆ ಮಾದೇಶ್ವರ ಬೆಟ್ಟದ ಭಕ್ತರು ಸೇರಿದಂತೆ ಲಾರಿ ಚಾಲಕರುಗಳು ಹಲವರು ಗಾಯಗೊಂಡಿದ್ದಾರೆ. ಇನ್ನು ಕೆಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ, ಇನ್ನು ಮುಂದಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.