ಮಡಿಕೇರಿ: ಮಳೆಗಾಲ ಆರಂಭವಾಯಿತೆಂದರೆ ಸಾಕು ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಮುಖ ಮಾಡುತ್ತಾರೆ. ಇಲ್ಲಿನ ತಂಪಾದ ವಾತಾವರಣ, ಹಚ್ಚಹಸಿರಿನ ಪರಿಸರದೊಂದಿಗೆ ಮಳೆಗೆ ಮೈದುಂಬಿ ಸೌಂದರ್ಯ ಹೆಚ್ಚಿಸಿಕೊಳ್ಳುವ ಜಲಪಾತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಗ್ರಾಮವೊಂದಕ್ಕೆ ತೆರಳುವ ರಸ್ತೆಯಲ್ಲೇ ೨೦ಕ್ಕೂ ಅಧಿಕ ಜಲಪಾತ ಸೃಷ್ಟಿಯಾಗುವ ಕರಿಕೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ.
ಭಾಗಮಂಡಲ – ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹರಿಯುತ್ತಿರುವ ಹತ್ತಾರು ಝರಿಗಳು, ಸುತ್ತಲೂ ಮನಮೋಹಕ ನೈಸರ್ಗಿಕ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಈ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಎಲ್ಲೆಡೆ ಹಸಿರಿನಿಂದ ಕಂಗೊಳಿಸುತ್ತಿದೆ. ಕರಿಕೆ ಜಲಪಾತಗಳು ತುಂಬಿ ಧುಮ್ಮಿಕ್ಕುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಈ ಬಾರಿ ವರುಣ ಮೇ ಅಂತ್ಯದಿಂದಲೇ ಬಿರುಸುಗೊಂಡಿದ್ದು, ಅವಧಿಗೂ ಮುನ್ನವೇ ಉತ್ತಮ ಮಳೆಯಾಗಿದೆ. ಇದರಿಂದ ನೀರಿಲ್ಲದೆ ಕಳೆಗುಂದಿದ್ದ ಜಲ ಕನ್ಯೆಯರು ಮೈದುಂಬಿ ಪರಿಸರ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿವೆ. ಪ್ರಕೃತಿಯ ಹಚ್ಚ ಹಸಿರಿನ ಸುಂದರ ತಾಣ ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ತಲಕಾವೇರಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ೨೦ಕ್ಕೂ ಅಧಿಕ ಜಲಪಾತಗಳು ಹಾಲ್ನೊರೆ ಸೂಸುತ್ತಿವೆ.