Mysore
20
overcast clouds
Light
Dark

ವಿರಾಜಪೇಟೆಯಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್‌ ಅಳವಡಿಸಲು ಸ್ಥಳೀಯರ ಆಗ್ರಹ

ವಿರಾಜಪೇಟೆ: ಕೊಡಗು ಜಿಲ್ಲೆಯ ತೋಟಗಳಲ್ಲಿ ಗುಂಪುಗುಂಪಾಗಿ ಬೀಡುಬಿಟ್ಟಿರುವ ಕಾಡಾನೆಗಳಿಗೆ ರೇಡಿಯೋ ಕಾಲರ್‌ ಅಳವಡಿಸಿ ಕಾಡಿಗಟ್ಟುವ ಕಾರ್ಯವಾಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದ್ದಾರೆ.

ಕಾಡಾನೆ ಮಾನವ ಸಂಘರ್ಷ, ವನ್ಯಜೀವಿಗಳ ಉಪಟಳ ಹಾಗೂ ರೈತರ ಸಮಸ್ಯೆ ಕುರಿತು ವಿರಾಜಪೇಟೆಯ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರ ಜೊತೆ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಸ್ಥಳೀಯರು, ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯದಂಚಿನಲ್ಲಿ ನಿರ್ಮಾಣ ಮಾಡಿರುವ ಕಂದಕವನ್ನು ಆಳ ಮತ್ತು ಅಗಲವನ್ನು ವಿಸ್ತರಿಸಬೇಕು. ಕೆಲವು ಭಾಗಗಳಲ್ಲಿ ರೈಲ್ವೆ ಬ್ಯಾರಿಕೇಡ್‌ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿಲ್ಲ. ಅರಣ್ಯದಂಚಿನಲ್ಲಿ ಕಾಡಾನೆಗಳನ್ನು ನಿಯಂತ್ರಣಗೊಳಿಸುವ ಸಲುವಾಗಿ ಅಳವಡಿಸಿರುವ ಸೋಲಾರ್‌ ಬೇಲಿಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಗಡಿ ಭಾಗಗಳಲ್ಲಿನ ಜನ ವಾಸಿಸುವ ಪ್ರದೇಶಗಳಲ್ಲಿ ವೀಕ್ಷಕ ಗೋಪುರ ನಿರ್ಮಿಸಿ ಕೃತಕ ಬುದ್ದಿಮತ್ತೆ ಕ್ಯಾಮರಾಗಳನ್ನು ಅಳವಡಿಸಬೇಕು. ವನ್ಯಜೀವಿ ಉಪಟಳಗಳಿಂದಾಗುವ ಹಾನಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಶೇ.20ರಷ್ಟು ಹೆಚ್ಚಿಸಬೇಕು. ಅರಣ್ಯ ಇಲಾಖೆಯು ಮತ್ತಿಗೋಡು ಅರಣ್ಯ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.