ವಿರಾಜಪೇಟೆ: ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಇಬ್ಬರ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೂಬನಕೊಲ್ಲಿ ಗ್ರಾಮದಲ್ಲಿ ನಡೆದಿದೆ.
ವಾಸುದೇವಯ್ಯ ಹಾಗೂ ಕಾರ್ಮಿಕ ಸಹರ್ ಅಲಿ ಎಂಬುವವರೇ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿರುವ ವ್ಯಕ್ತಿಗಳಾಗಿದ್ದಾರೆ. ಇವರಿಬ್ಬರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಇಬ್ಬರು ತೆರಳುತ್ತಿದ್ದ ಸಂದರ್ಭದಲ್ಲಿ ಹಠಾತ್ತನೆ ಬಂದ ಕಾಡಾನೆಯೊಂದು ಇಬ್ಬರ ಮೇಲೆ ದಾಳಿ ನಡೆಸಿದೆ.
ಈ ವೇಳೆ ಇಬ್ಬರು ಪಾರಾಗಲು ಯತ್ನಿಸಿದರೂ ಬಿಡದ ಆನೆ ಹಿಂಬಾಲಿಸಿಕೊಂಡು ಇಬ್ಬರ ಮೇಲೂ ದಾಳಿ ಮಾಡಿದೆ ಎನ್ನಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಆರೋಗ್ಯ ವಿಚಾರಿಸಿ ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.