Mysore
23
overcast clouds

Social Media

ಶುಕ್ರವಾರ, 22 ಮೇ 2026
Light
Dark

ದರೋಡೆಗೆ ಪ್ರಶಸ್ತವಾಯಿತೇ ಬೈಪಾಸ್?

ಹೇಮಂತ್‌ಕುಮಾರ್

ಮಂಡ್ಯ: ಭೀಕರ ಅಪಘಾತಗಳ ಹೆಚ್ಚಳದಿಂದ ಕುಖ್ಯಾತಿ ಪಡೆದಿದ್ದ ಬೆಂಗಳೂರು-ಮೈಸೂರು ಹೆದ್ದಾರಿ-ಸರ್ವಿಸ್ ರಸ್ತೆಯು ಈಗ ದರೋಡೆಕೋರರ ತಾಣವಾಗಿ ಬದಲಾಗುತ್ತಿರುವುದು ಕಾರು, ಬೈಕ್ ಚಾಲಕರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾ ಪೊಲೀಸರು ಅಪಘಾತ ಪ್ರಕರಣಗಳನ್ನು ನಿಭಾಯಿಸುವಲ್ಲಿ ಮತ್ತು ಹೈವೇಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ವಾಹನ ಚಾಲಕರಿಗೆ ಶಿಕ್ಷಣ ನೀಡಲಾಗುತ್ತಿದ್ದರೂ, ಈಗ ಅವರು ದರೋಡೆ ಪ್ರಕರಣಗಳನ್ನು ತಡೆಯಲು ಮತ್ತು ಇಂತಹ ಪ್ರಕರಣಗಳು ಪುನರಾವರ್ತನೆ ಯಾಗದಂತೆ ಕ್ರಮ ತೆಗೆದುಕೊಳ್ಳಲು ಒತ್ತಡ ಹೆಚ್ಚಾಗುತ್ತಿದೆ.

೨೦೨೩ರ ಮಾರ್ಚ್‌ನಲ್ಲಿ ವಾಹನ ಸಂಚಾರಕ್ಕೆ ಹೆದ್ದಾರಿ ಮುಕ್ತವಾದಾಗಿನಿಂದ, ಹಲವಾರು ದರೋಡೆ ಪ್ರಕರಣಗಳು ವರದಿಯಾಗಿವೆ. ಮೊದಲ ದರೋಡೆ ಪ್ರಕರಣ ೨೦೨೩ರ ಫೆ.೬ರಂದು ಮಂಡ್ಯದ ಮಲ್ಲಯ್ಯನ ದೊಡ್ಡಿ ಬೋರೆ ಬಳಿ ನಡೆದಿತ್ತು. ಮೈಸೂರಿನ ದಂಪತಿಯ ಬೆಲೆಬಾಳುವ ವಸ್ತುಗಳನ್ನು ದೋಚಲಾಗಿತ್ತು. ೩.೮೧ ಲಕ್ಷ ರೂ. ಮೌಲ್ಯದ ನಗದು ದರೋಡೆ ಮಾಡಲಾಗಿತ್ತು. ಅದೇ ತಿಂಗಳು ೨೭ ರಂದು ಬೆಂಗಳೂರಿನ ಕುಟುಂಬವೊಂದರ ಮೂವರು ಸದಸ್ಯರ ಬೆಲೆಬಾಳುವ ವಸ್ತುಗಳು ಮತ್ತು ೨.೫೫ ಲಕ್ಷ ರೂ. ನಗದು ದೋಚಲಾಗಿತ್ತು. ಜೂ.೧೨ ರಂದು ವರದಿಯಾಗಿದ್ದ ಮೂರನೇ ಪ್ರಕರಣದಲ್ಲಿ ಮೈಸೂರು ಮೂಲದ ಗಾರ್ಮೆಂಟ್ಸ್ ವ್ಯಾಪಾರಿ ಯೊಬ್ಬರ ಆಭರಣ ಮತ್ತು ೩.೨೦ ಲಕ್ಷ ರೂ. ನಗದು ದೋಚಲಾಗಿತ್ತು. ೨೦೨೪ರ ಜುಲೈ ೧ರಂದು ಮದ್ದೂರಿನ ಬಳಿ ಹೈವೇಯಲ್ಲಿರುವ ಐಶ್ವರ್ಯ ಇಂಟರ್‌ನ್ಯಾಷನಲ್ ಸ್ಕೂಲ್ ಬಳಿ ಮತ್ತೊಂದು ಘಟನೆ ನಡೆದಿತ್ತು.

ಕೊಡಗು ಮೂಲದ ಇಂಟೀರಿಯರ್ ಡಿಸೈನರ್ ಒಬ್ಬರಿಂದ ೩.೫ ಲಕ್ಷ ರೂ. ಮೌಲ್ಯದ ಚಿನ್ನದ ಸರ ಮತ್ತು ಪೆಂಡೆಂಟ್ ದೋಚಲಾಗಿತ್ತು. ಇದೀಗ ಮೊನ್ನೆ ೨೭ ಲಕ್ಷ ರೂ. ದರೋಡೆ ನಡೆಸಿರುವ ಪ್ರಕರಣ ಸುತ್ತಮುತ್ತಲ ಜನರು ಮತ್ತು ವಾಹನಗಳಲ್ಲಿ ಸಂಚರಿಸುವವರಲ್ಲಿ ಭೀತಿ ಹುಟ್ಟಿಸಿದೆ.

ಈ ಎಲ್ಲ ಪ್ರಕರಣಗಳಲ್ಲಿಯೂ ಗ್ಯಾಂಗ್‌ವೊಂದರ ಸದಸ್ಯರು ಮಧ್ಯರಾತ್ರಿ ವಾಹನ ಚಾಲಕರ ಮೇಲೆ ದಾಳಿ ಮಾಡಿ, ಚಾಕು ತೋರಿಸಿ ಬೆದರಿಸಿ, ಅವರಿಂದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ದುರದೃಷ್ಟವಶಾತ್, ಘಟನೆಗಳು ರಾತ್ರಿ ವೇಳೆ ನಡೆದಿರುವುದರಿಂದ ದರೋಡೆಗೆ ಒಳಗಾದವರು ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೆದ್ದಾರಿಯ ಕೆಲವು ಸ್ಥಳಗಳಲ್ಲಿ ಅಧಿಕಾರಿಗಳು ಇನ್ನೂ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬೀದಿ ದೀಪಗಳನ್ನು ಅಳವಡಿಸದ ಕಾರಣ ದುಷ್ಕರ್ಮಿಗಳು ತಮ್ಮ ಯೋಜನೆಗಳನ್ನು ಯಶಸ್ವಿ ಯಾಗಿಕಾರ್ಯಗತಗೊಳಿಸಿಕೊಂಡಿದ್ದರು. ಪ್ರಸ್ತುತ, ಹೈವೇಯ ಎತ್ತರದ ಭಾಗಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ದರೋಡೆಗೆ ಇನ್ನೊಂದು ಕಾರಣವೆಂದರೆ ವಾಹನ ಚಾಲಕರು ದೂರದ ಪ್ರಯಾಣದ ನಂತರ ವಿಶ್ರಾಂತಿ ಪಡೆಯಲು ಈ ಬೈಪಾಸ್‌ಗಳನ್ನು ಬಳಸುತ್ತಾರೆ.

ರಾತ್ರಿ ವೇಳೆ ಬೈಪಾಸ್‌ಗಳ ಬಳಿ ವಾಹನ ನಿಲ್ಲಿಸದಂತೆ ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ. ಇಲ್ಲಿ ಬೋರ್ಡ್‌ಗಳನ್ನು ಅಳವಡಿಸಲಾಗಿದ್ದರೂ, ವಾಹನ ಚಾಲಕರು ಸೂಚನೆಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ ಎನ್ನುತ್ತಾರೆ ಪೊಲೀಸರು. ಹೆದ್ದಾರಿಯಲ್ಲಿ ದರೋಡೆ ಘಟನೆಗಳ ನಂತರ, ಜಿಲ್ಲಾ ಪೊಲೀಸರು ನಾಲ್ಕು ಹೆದ್ದಾರಿ ಗಸ್ತು ಘಟಕಗಳನ್ನು ನಿಯೋಜಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದಲ್ಲದೆ, ಆಯಾ ಠಾಣೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗೆ ತಮ್ಮ ಮಿತಿಯೊಳಗೆ ಹೈವೇಗೆ ಭೇಟಿ ನೀಡಿ, ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ. ಪೊಲೀಸರು ಈ ಭಾಗದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಿದ್ದಾರೆ. ಹೆದ್ದಾರಿಯ ನಿರ್ಜನ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಪೊಲೀಸರ ಸಲಹೆಯನ್ನು ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

” ಹೈವೇಯಲ್ಲಿ ಸಂಚರಿಸುವ ಯಾವ ಕಾರಿನಲ್ಲಿ ಯಾರು ಹಣ ಇಟ್ಟುಕೊಂಡು ಹೋಗುತ್ತಿದ್ದಾರೆಂಬ ಮಾಹಿತಿ ಬೇರೆಯವರಿಗೆ ಏಕಾಏಕಿ ತಿಳಿದಿರುವುದಿಲ್ಲ. ಹಣತೆಗೆದುಕೊಂಡು ಹೋಗುವವರ ಬಗ್ಗೆ ತಿಳಿದಿರುವವರಿಂದಲೇ ಸಂಚು ನಡೆಯಬಹುದು. ಹಾಗಾಗಿ ಹೆಚ್ಚು ಹಣ ಸಾಗಿಸುವವರು ಎಚ್ಚರಿಕೆ ವಹಿಸಬೇಕು. ಈಗ ಹೈವೇಯಲ್ಲಿ ಸಿಸಿ ಕ್ಯಾಮೆರಾಗಳನ್ನು ಹೆಜ್ಜೆ ಹೆಜ್ಜೆಗೂ ಅಳವಡಿಸಲು ಸಾಧ್ಯವಿಲ್ಲ. ಆದ್ದರಿಂದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬೂತ್‌ಗಳನ್ನು ಸ್ಥಾಪಿಸುವುದು ಉತ್ತಮ.”

-ವಿ.ಸಿ.ಉಮಾಶಂಕರ್, ಜಿಲ್ಲಾಧ್ಯಕ್ಷರು, ಕಕಜವೇ, ಮದ್ದೂರ

” ಶ್ರಮದ ದುಡಿಮೆಯಿಲ್ಲದೆ ಏಕಾಏಕಿ ಲಕ್ಷಾಂತರ ರೂ.ಗಳಿಸಬೇಕೆಂಬ ದುರಾಸೆಯೇ ಈ ದರೋಡೆಗಳಿಗೆ ಪ್ರಮುಖ ಕಾರಣ. ಇಂತಹ ಪ್ರಕರಣಗಳಲ್ಲಿ ಬಹುತೇಕ ಹೊರ ರಾಜ್ಯದವರ ಕೈಚಳಕವಿದ್ದರೂ ನಮ್ಮ ರಾಜ್ಯದವರ ಸಹಕಾರವೂ ಇರುತ್ತದೆ. ಆದ್ದರಿಂದ ಸಿಸಿ ಕ್ಯಾಮೆರಾ ಇಲ್ಲಿ ನೆರವಿಗೆ ಬರುವುದರಿಂದ ಪೊಲೀಸರು ಶಂಕಿತರ ಮೇಲೆ ತೀವ್ರ ನಿಗಾವಹಿಸಬೇಕು.”

-ಎಚ್.ಜಿ.ಪ್ರಭುಲಿಂಗು, ಅಧ್ಯಕ್ಷರು, ತಾಲ್ಲೂಕು ರೈತಸಂಘಟನೆ, ಮದ್ದೂರು

 

 

 

 

 

Tags:
error: Content is protected !!