ನವೀನ್ ಡಿಸೋಜ
ಡಿ.೨೧ರಿಂದ ಮಡಿಕೇರಿಯಲ್ಲಿ ೪ನೇ ಆವೃತ್ತಿಯ ಗೌಡ ಪ್ರೀಮಿಯರ್ ಲೀಗ್; ನ.೨೭ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ
ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಜನಾಂಗದ ಯುವಜನರನ್ನು ವೃತ್ತಿಪರ ಕ್ರಿಕೆಟ್ನತ್ತ ಕೊಂಡೊಯ್ಯುವ ಪ್ರಯತ್ನವಾಗಿ ಆರಂಭಗೊಂಡ ಗೌಡ ಪ್ರೀಮಿಯರ್ ಲೀಗ್ (ಜಿಪಿಎಲ್) ಇದೀಗ ನಾಲ್ಕನೇ ಆವೃತ್ತಿಗೆ ಸಜ್ಜಾಗಿದೆ.
ಡಿ.೨೧ರಿಂದ ೨೭ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಾಲ್ಕನೇ ಆವೃತ್ತಿಯ ಲೆದರ್ ಬಾಲ್ ಟಿ-೧೦ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಒಕ್ಕಲಿಗ ಗೌಡ ಜನಾಂಗದ ಎಂಟು ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
೨೦೨೩ರಲ್ಲಿ ಮೊದಲ ಬಾರಿಗೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಪರಿಚಯಿಸುವ ಮೂಲಕ ವೇದಿಕೆ ಹೊಸ ಪ್ರಯತ್ನಕ್ಕೆ ಕೈಹಾಕಿತ್ತು. ಮನರಂಜನಾ ಕ್ರಿಕೆಟ್ನಲ್ಲಿ ಸೀಮಿತ ವಾಗಿದ್ದ ಯುವ ಪ್ರತಿಭೆಗಳಿಗೆ ವೃತ್ತಿಪರ ಕ್ರಿಕೆಟ್ನ ಅನುಭವ ನೀಡುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿತ್ತು. ಕಳೆದ ಮೂರು ಆವೃತ್ತಿಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆ ಈ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಿದೆ.
೨೦೨೬ರ ಸೀಸನ್-೪ರಲ್ಲಿ ದಿ ಎಲೈಟ್, ಜಿ ಕಿಂಗ್ ಸಿದ್ದಲಿಂಗಪುರ, ಕೂರ್ಗ್ ಹಾಕ್ಸ್ ಮಡಿಕೇರಿ, ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ, ಪುತ್ತೂರಿನ ಯುವ ತಂಡ, ಮರಗೋಡು ಹಾಗೂ ಕುಶಾಲನಗರ ತಂಡಗಳು ಕಣಕ್ಕಿಳಿಯಲಿವೆ.
ನ.೨೭ರಂದು ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದ್ದು, ತಂಡಗಳ ರಚನೆಯೊಂದಿಗೆ ಪಂದ್ಯಾವಳಿಯ ಕಾವು ಹೆಚ್ಚಲಿದೆ. ವಿಜೇತ ತಂಡಕ್ಕೆ ಒಂದು ಲಕ್ಷ ರೂ. ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೬೦ ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಗೌಡ ಸಂಸ್ಕೃತಿ ಮತ್ತು ಬಲಿದಾನದ ಪ್ರತೀಕವಾಗಿ ೨೦೨೩ರಲ್ಲಿ ಅಂದಿನ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದ ಟ್ರೋಫಿ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಲಿದೆ. ಇದರೊಂದಿಗೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲು ಉದ್ದೇಶಿಸಲಾಗಿದೆ.
ಜಿಪಿಎಲ್ ಕೇವಲ ಪಂದ್ಯಾವಳಿಯಾಗಿರದೆ, ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಬೆಳೆಸುವ ವೇದಿಕೆಯಾಗಿಯೂ ರೂಪುಗೊಂಡಿದೆ. ಈಗಾಗಲೇ ಈ ಲೀಗ್ ಮೂಲಕ ಹೊರಹೊಮ್ಮಿದ ಗೌಡ ಜನಾಂಗದ ಪುರುಷ ಹಾಗೂ ಮಹಿಳಾ ಆಟಗಾರರು ರಾಜ್ಯಮಟ್ಟದ ಕ್ರಿಕೆಟ್ ತಂಡಗಳಲ್ಲಿ ಗುರುತಿಸಿಕೊಂಡಿರುವುದು ವೇದಿಕೆಯ ಪ್ರಯತ್ನಕ್ಕೆ -ಲ ದೊರೆತಿದೆ. ಕ್ರಿಕೆಟ್ ಮಾತ್ರವಲ್ಲದೆ ವಿವಿಧ ಕ್ರೀಡೆಗಳ ಮೂಲಕ ಸಮುದಾಯದ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ವೇದಿಕೆ, ಗೌಡ ಕುಟುಂಬವಾರು ಮಿನಿ ಒಲಿಂಪಿಕ್ಸ್ನ ಮುಂದಿನ ಆವೃತ್ತಿಗೂ ಸಿದ್ಧತೆ ನಡೆಸಿದೆ. ೨೦೨೬ರ ಮೇ ತಿಂಗಳಲ್ಲಿ ಆಯೋಜಿಸಿದ್ದ ಮಿನಿ ಒಲಿಂಪಿಕ್ಸ್ ಯಶಸ್ವಿಯಾಗಿದ್ದು, ಮುಂದಿನ ಕ್ರೀಡಾಕೂಟವನ್ನು ೨೦೨೭ರ ಏಪ್ರಿಲ್ ೧೬ರಿಂದ ಮೇ ೨ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿಯೂ ರಿಂಕ್ ಹಾಕಿ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಲಿದೆ.
ನೋಂದಣಿಗೆ ನ.೨೫ ಕೊನೆಯ ದಿನ: ನಾಲ್ಕನೇ ಆವೃತ್ತಿಯ ಜಿಪಿಎಲ್ ಲೆದರ್ ಬಾಲ್ ಟಿ-೧೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಸಕ್ತ ಆಟಗಾರರ ನೋಂದಣಿ ಪ್ರಕ್ರಿಯೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಆರಂಭಗೊಂಡಿದೆ. ನವೆಂಬರ್ ೨೫ ನೋಂದಣಿಗೆ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೮೧೦೫೧೬೦೫೪೭, ೯೯೭೨೩೭೬೧೫೧, ೯೬೬೩೨೫೩೦೨೫ ಹಾಗೂ ೭೦೧೯೬೭೧೧೩೦ ಸಂಪರ್ಕಿಸಬಹುದು.
ಸರ್ಕಾರದ ಅನುದಾನ ದೊರಕದಿದ್ದಲ್ಲಿ ಹೋರಾಟ..!: ಕೊಡಗು ಗೌಡ ಯುವ ವೇದಿಕೆ ಕಳೆದ ೨೫ ವರ್ಷಗಳಿಂದಲೂ ಗೌಡ ಜನಾಂಗದ ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಬಾರಿಯಾದರೂ ಸರ್ಕಾರ ಜನಾಂಗದ ಕ್ರೀಡೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ಸಹಕರಿಸಬೇಕು. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳ ಶಾಸಕರು ಈ ಬಗ್ಗೆ ಆಸಕ್ತಿ ವಹಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಗೌಡ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಒತ್ತಾಯಿಸಿದ್ದಾರೆ. ಪ್ರತಿವರ್ಷ ಶಾಸಕರಿಂದ ಅನುದಾನದ ಭರವಸೆ ದೊರೆಯುತ್ತಿದೆಯೇ ಹೊರತು ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ಬಾರಿಯೂ ಅನುದಾನ ನೀಡದಿದ್ದಲ್ಲಿ ಗೌಡ ಜನಾಂಗದ ಕ್ರೀಡೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ʼ ಕೊಡಗು ಗೌಡ ಯುವ ವೇದಿಕೆ ವತಿಯಿಂದ ೪ನೇ ಆವೃತ್ತಿಯ ಗೌಡ ಪ್ರೀಮಿಯರ್ ಲೀಗ್ (ಜಿಪಿಎಲ್) ಲೆದರ್ ಬಾಲ್ ಟಿ-೧೦ ಕ್ರಿಕೆಟ್ ಪಂದ್ಯಾವಳಿ ಡಿ.೨೧ರಿಂದ ೨೭ರವರೆಗೆ ನಡೆಯಲಿದೆ. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಒಕ್ಕಲಿಗ ಗೌಡ ಜನಾಂಗದವರಿಗಾಗಿ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಒಟ್ಟು ೮ ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಪುರುಷರ ಲೆದರ್ ಬಾಲ್ ಕ್ರಿಕೆಟ್ಗೆ ದೊರೆಯುತ್ತಿರುವ ಪ್ರೋತ್ಸಾಹದ ಮಾದರಿಯಲ್ಲಿ ಒಕ್ಕಲಿಗ ಗೌಡ ಮಹಿಳೆಯರಿಗೂ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಚಿಂತನೆ ನಡೆಸಲಾಗುತ್ತಿದೆ.”
ಪುದಿಯನೆರವನ ರಿಷಿತ್ ಮಾದಯ್ಯ, ಪ್ರಧಾನ ಕಾರ್ಯದರ್ಶಿ, ಕೊಡಗು ಗೌಡ ಯುವ ವೇದಿಕೆ




