ಕೆ.ವಿ.ಮಲ್ಲೇಶ್
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್, ಅಧ್ಯಕ್ಷ
ಹೊಸತನದ ನಿರಂತರ ಹರಿವಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುನ್ನುಡಿ ಬರೆಯಲಿ
ಮೈಸೂರು ದಸರಾ ಎಂದರೆ ನವರಾತ್ರಿಗಳ ಸಾಂಸ್ಕೃತಿಕ ವೈಭವ; ದಶಮಿ ದಿನದ ಜಂಬೂಸವಾರಿ ಸಂಭ್ರಮ; ಕೊನೆಯಲ್ಲಿ ನಡೆಯುವ ಪಂಜಿನ ಕಾವಾಯತು ಅಷ್ಟೆ ಅಲ್ಲ. ಇದು ಕರ್ನಾಟಕದ ಭವ್ಯ ಇತಿಹಾಸ, ಪರಂಪರೆ,ಕಲೆ, ಸಂಸ್ಕೃತಿ ಮತ್ತು ಜನ ಬದುಕಿನ ಅಸ್ಮಿತೆಯ ಪ್ರತೀಕ. ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಸಾಕ್ಷೀಕರಿಸುವ ಬೆಳಕು-ಬೆಡಗಿನ ‘ ನಾಡಹಬ್ಬ’. ಮೈಸೂರು ಭಾಗದ ಪ್ರವಾಸೋದ್ಯಮದ ಚೈತನ್ಯ ಶಕ್ತಿ; ಆರ್ಥಿಕತೆಯ ಬೆನ್ನೆಲುಬು.
ರಾಜಪ್ರಭುತ್ವದ ಕಾಲದ ದಸರಾ ಆಚರಣೆಗೆ ಅದರದ್ದೇ ಇತಿಹಾಸ, ಪರಂಪರೆ ಇದೆ. ಆ ಎಲ್ಲ ಆಚರಣೆ, ನಂಬಿಕೆ – ಸಂಪ್ರದಾಯಗಳನ್ನು ರಾಜ ವಂಶಸ್ಥರು ಅರಮನೆ ಆವರಣಕ್ಕೆ ಸೀಮಿತವಾಗಿ ಮುಂದುವರಿಸುತ್ತಿದ್ದಾರೆ. ಅರಮನೆಯ ‘ಖಾಸಗಿ’ ತನದ ಆಚೆಗೆ ರಾಜತ್ವದ ದರ್ಬಾರು ಮುಗಿದು, ಪ್ರಜ ಉತ್ಸವವಾಗಿ ದಸರಾ ಆಚರಣೆ ಶುರುವಾಗಿ ಐದು ದಶಕ ಕಳೆದಿದೆ. ೧೯೭೫ ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಆರಂಭಿಸಿದ ಉತ್ಸವ ಕಳೆದ ಎರಡು ದಶಕಗಳಿಂದ ಈಚೆಗೆ ಹತ್ತು ಹಲವು ಬಗೆಯಲ್ಲಿ; ನೂರಾರು ವೈವಿಧ್ಯಗಳನ್ನು ಒಳಗೊಳ್ಳುತ್ತ ವಿಸ್ತರಿಸಿದೆ. ೨೦೦೮ರಲ್ಲಿ ರಾಜ್ಯ ಸರ್ಕಾರ ಉತ್ಸವವನ್ನು ‘ನಾಡ ಹಬ್ಬ’ ಎಂದು ಘೋಷಿಸಿದೆ.
ರಾಜಕೀಯ ಪಕ್ಷದ ಕಾರ್ಯಕರ್ತನಾಗಿ, ಸಾಂಸ್ಕೃತಿಕ ಸಂಘಟನೆಯೊಂದರ ಸ್ಥಾಪಕ ಅಧ್ಯಕ್ಷನಾಗಿ, ಮಹಾನಗರ ಪಾಲಿಕೆ ಸದಸ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷನಾಗಿ, ಹಲವು ಬಾರಿ ದಸರಾ ಉತ್ಸವ ಉಪಸಮಿತಿ ಸದಸ್ಯ/ ಅಧ್ಯಕ್ಷನಾಗಿ ನಲ್ವತ್ತು ವರ್ಷ ಗಳಿಂದ ಮೈಸೂರು ದಸರೆಯನ್ನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ.
ವರ್ಷದಿಂದ ವರ್ಷಕ್ಕೆ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ದಸರೆಯ ದಿನಗಳಲ್ಲಂತೂ ನಿಯಂತ್ರಣವೇ ಕಷ್ಟಸಾಧ್ಯ ಎನ್ನುವಷ್ಟು ಪ್ರವಾಸಿಗರ ಪ್ರವಾಹ ಹರಿದು ಬರುತ್ತದೆ. ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಪಾರಂಪರಿಕ ಕಟ್ಟಡಗಳು, ಆಹಾರ ವೈವಿಧ್ಯಗಳು, ಯೋಗ ಕೇಂದ್ರಗಳು ,ಇಲ್ಲಿ ಬೆಳೆಯುವ ಮಲ್ಲಿಗೆ, ರಸಬಾಳೆ, ರೇಷ್ಮೆ ಮುಂತಾದ ಎಲ್ಲವೂ ಮೈಸೂರಿನ ಕಂಪನ್ನು ; ದಸರೆಯ ಸೊಬಗನ್ನು ದೇಶ ವಿದೇಶಗಳಲ್ಲಿ ಹಬ್ಬಿಸಿವೆ. ರಾಜ್ಯ, ಹೊರ ರಾಜ್ಯಗಳ ವೈವಿಧ್ಯಮಯ ಕಲಾ ತಂಡಗಳು, ಸಾಧಕ ಕಲಾವಿದರು, ವಿದ್ವಜ್ಜನರು ಆಹ್ವಾನಿತರಾಗಿ ದಸರೆಯ ಮೆರುಗನ್ನು ಹೆಚ್ಚಿಸುತ್ತಿದ್ದಾರೆ.
ಆದರೆ, ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಇಂಥದೊಂದು ಬೃಹತ್ ಉತ್ಸವದ ಸಂಘಟನೆಯಲ್ಲಿ ‘ ಸಂತೆಗೆ ಮೂರು ಮೊಳ ನೇಯುವ’ ಹಳೆಯ ವಿಧಾನವೇ ಮುಂದುವರಿದಿದೆ. ಇದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಶಿಷ್ಟಾಚಾರ ಗೊಂದಲ, ಪಾಸು ಹಂಚಿಕೆಯಲ್ಲಿ ಸಮಸ್ಯೆ, ಸಚಿವರು- ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ, ರಾಜಮನೆತನ ಹಾಗೂ ಸರ್ಕಾರದ ನಡುವೆ ಅನಪೇಕ್ಷಿತ ಭಿನ್ನಾಭಿಪ್ರಾಯಗಳು ಸುದ್ದಿಯಾಗುತ್ತಲೇ ಇರುತ್ತವೆ.
ಸಾಂಸ್ಕೃತಿಕ – ಕಲಾ ತಂಡ, ಕಲಾವಿದರ ಆಯ್ಕೆ, ಸ್ತಬ್ಧ ಚಿತ್ರಗಳ ಹಂಚಿಕೆ , ವೇದಿಕೆ-ಧ್ವನಿ-ಬೆಳಕು,ಬೀದಿ ದೀಪ ಸಹಿತ ಎಲ್ಲ ಕೆಲಸಗಳ ಗುತ್ತಿಗೆಯಲ್ಲಿ ‘ಒಳ ವ್ಯವಹಾರ’ದ ಪಾಲು ಹೆಚ್ಚಿದ್ದು, ಅದಕ್ಕಾಗಿ ‘ದಸರಾ ದಲ್ಲಾಳಿಗಳು’ ಹುಟ್ಟಿಕೊಂಡಿದ್ದಾರೆ ಎಂಬ ಆಕ್ಷೇಪವೂ ಸದ್ದು ಮಾಡಿದ್ದಿದೆ. ದುಡ್ಡಿನ ಕರಾಮತ್ತು ಹೆಚ್ಚಿರುವ ಪರಿಣಾಮ ಉತ್ಸವದಲ್ಲಿ ವೈವಿಧ್ಯತೆಯನ್ನು; ಸಂಭ್ರಮವನ್ನು ತುಂಬಲು ಯತ್ನಿಸಿದರೂ ‘ಏಕತಾನತೆ’ ಎದ್ದುಕಾಣುತ್ತಿದೆ ಎಂಬ ಆಕ್ಷೇಪವನ್ನು ಹಲವರಿಂದ ಕೇಳಿದ್ದೇನೆ.
ನಮ್ಮವರಿಗೆ- ತಮ್ಮವರಿಗೆ, ಅವರಿಗೆ -ಇವರಿಗೆ ವೇದಿಕೆ ನೀಡಬೇಕೆಂಬ ಮೇಲಾಟದಲ್ಲಿ ಮೂರ್ನಾಲ್ಕು ತಾಸಿನ ಕಾರ್ಯಕ್ರಮಕ್ಕೆ ಹತ್ತಾರು ತಂಡಗಳನ್ನು ತುರುಕುವುದು; ಯಾರೂ ಸರಿಯಾಗಿ ಕಾರ್ಯಕ್ರಮ ನೀಡಲಾಗದಿದ್ದರೂ ಸಂಭಾವನೆ ಕೊಟ್ಟು ಕಳುಹಿಸುವ ‘ಅಸಾಂಸ್ಕೃತಿಕ’ ಚಾಳಿ ಹೆಚ್ಚುತ್ತಿದೆ. ಇದರಿಂದ ಅರಮನೆ ಎದುರಿನ ವೇದಿಕೆಗೆ ಲಕ್ಷಾಂತರ ರೂ.ಸಂಭಾವನೆ ನೀಡಿ ಕರೆಸುವ ಹೆಸರಾಂತ ಸಂಗೀತ ಕಲಾವಿದರಿಗೇ ಅರ್ಧ ತಾಸು ಕಾರ್ಯಕ್ರಮ ನೀಡಲಾಗದಂತಾಗಿದ್ದನ್ನೂ ಕಂಡಿದ್ದೇವೆ.
ಲಕ್ಷಾಂತರ ಜನ ಪಾಲ್ಗೊಳ್ಳುವ; ನೂರಾರು ಕಾರ್ಯಕ್ರಮ ವೈವಿಧ್ಯಗಳು ಮೇಳೈಸುವ ಉತ್ಸವದಲ್ಲಿ ಇಂಥ ಕೆಲವು ಅಪಸವ್ಯಗಳು ಘಟಿಸಿದರೆ ; ಅಡ್ಡ ಮಾತುಗಳು ಕೇಳಿದರೆ ಅದನ್ನು ದೊಡ್ಡದು ಮಾಡಬೇಕಿಲ್ಲ ಎನ್ನುವುದು ನಿಜ. ಹಾಗಂತ ನಿರ್ಲಕ್ಷ್ಯ ವೂ ಸರಿಯಲ್ಲ. ಈ ಹಿನ್ನೆಲೆಯಲ್ಲಿ, ದಸರಾ ಮಹೋತ್ಸವದ ಸುವ್ಯವಸ್ಥಿತ ಆಯೋಜನೆಗಾಗಿ ಹಲವು ಹಿನ್ನೆಲೆಯ ತಜ್ಞರನ್ನೊಳಗೊಂಡ ಪ್ರತ್ಯೇಕ ಪ್ರಾಧಿಕಾರ ಅಥವಾ ಖಾಯಂ ಸಮಿತಿಯೊಂದನ್ನು ರಚಿಸಬೇಕೆಂಬ ಬೇಡಿಕೆ ದಶಕಗಳಿಂದ ವ್ಯಕ್ತವಾಗುತ್ತಲೆ ಇದೆ. ಪ್ರತಿ ವರ್ಷ ಕೊನೆ ಕ್ಷಣದ ಸಿದ್ಧತೆಯಿಂದ ಉದ್ಭವಿಸುವ ಆಡಳಿತಾತ್ಮಕ ಗೊಂದಲಗಳನ್ನು ತಪ್ಪಿಸುವುದೂ ಸಹಿತ ಅನೇಕ ಕಾರಣಕ್ಕೆ ಶಾಶ್ವತ ವ್ಯವಸ್ಥೆಯ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ ಕೂಡ.
ಪ್ರತಿ ವರ್ಷ ಉತ್ಸವ ಹೊಸ್ತಿಲಲ್ಲಿರುವಾಗ ಜಿಡಳಿತ, ವಿವಿಧ ಅಽಕಾರಿ ಗಳಿರುವ ಉಪಸಮಿತಿಗಳು ಚುರುಕಾಗುತ್ತವೆ. ಉನ್ನತಾಧಿಕಾರ ಸಮಿತಿ ನೇತೃತ್ವ ವಹಿಸಿದ ಮುಖ್ಯಮಂತ್ರಿಗಳು ಬೆಂಗಳೂರಿನಂದು ಸಭೆ ನಡೆಸಿ, ಸಂಬಂಧಿಸಿದವರಿಗೆ ಒಂದಷ್ಟು ಹೊಣೆ ವಹಿಸಿ ಕಳಿಸುತ್ತಾರೆ. ನಂತರ, ಮುಂದಿನ ಒಂದೆರಡು ತಿಂಗಳು ನಗರ, ಜಿಯಲ್ಲಿ ಕೆಲವು ಇಲಾಖೆಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ‘ದಸರಾ ಬ್ಯುಸಿ’ ಎನ್ನುವ ನೆಪ ತೊಡಕಾಗಿ ಪರಿಣಮಿಸುತ್ತಿದೆ. ಪ್ರತ್ಯೇಕ ಪ್ರಾಧಿಕಾರ ಅಥವಾ ಶಾಶ್ವತ ಸಮಿತಿಯೊಂದನ್ನು ರಚಿಸಿದರೆ, ದಸರೆಯ ಅರ್ಥಪೂರ್ಣ ಕಟ್ಟುವಿಕೆಗೆ ವರ್ಷವಿಡೀ ಕೆಲಸ ಮಾಡಬಹುದು. ಈ ವರ್ಷದ ಉತ್ಸವ ಮುಗಿದ ತಕ್ಷಣ ತಜ್ಞರ ಸಮಿತಿ ಸಭೆ ನಡೆಸಿ, ಲೋಪ ದೋಷಗಳನ್ನು ಚರ್ಚಿಸಿ ಅವು ಮುಂದೆ ಮರುಕಳಿಸದಂತೆ ಎಚ್ಚರ ವಹಿಸಬಹುದು ಮತ್ತು ಮುಂದಿನ ವರ್ಷಕ್ಕೆ ಯೋಜಿತ ರೂಪು ರೇಷೆಗಳನ್ನು ಸಿದ್ಧಪಡಿಸಬಹುದು. ಇದರಿಂದ ಕಲಾವಿದರು, ಕಲಾ ತಂಡಗಳ ಪುನರಾವರ್ತನೆ ತಪ್ಪಿಸಿ, ಹೊಸ ಹೊಸ ಕಲೆ-ಕಲಾವಿದರನ್ನು ಆಯ್ಕೆ ಮಾಡ ಬಹುದು. ಪ್ರವಾಸಿಗರಿಗೆ ಗುಣಾತ್ಮಕ ಸೌಲಭ್ಯ ಕಲ್ಪಿಸಲು , ಜಗತಿಕ ಮಟ್ಟದಲ್ಲಿ ವ್ಯವಸ್ಥಿತ ಪ್ರಚಾರ ನಡೆಸಲು, ಅರಮನೆ ಮಂಡಳಿ, ಜಿಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ರಾಜಮನೆತನದ ನಡುವೆ ಸಮನ್ವಯ ಸಾಧಿಸಲು ನೆರವಾಗಬಹುದು. ಉದ್ಘಾಟನೆ, ಜಂಬೂಸವಾರಿ ದಿನದ ಪುಷ್ಪಾರ್ಚನೆ ಸಹಿತ ಉತ್ಸವದ ಎಲ್ಲ ವೇದಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಿ, ಪಾಲಿಸುವ ಮೂಲಕ ಶಿಷ್ಟಾಚಾರ ಉಲ್ಲಂಘನೆ, ಭದ್ರತೆಯ ಲೋಪ ಮುಂತಾದ ಗೊಂದಲಗಳನ್ನು ನಿವಾರಿಸಬಹುದು. ನನಗೆ ತಿಳಿದ ಮಟ್ಟಿಗೆ ೨೫ ವರ್ಷಗಳ ಹಿಂದೆ ದಸರೆಗೆಂದು ಸರ್ಕಾರ ಕೆಲವು ಲಕ್ಷ ಗಳ ಲೆಕ್ಕದಲ್ಲಿ ಅನುದಾನ ನೀಡುತ್ತಿತ್ತು. ವರ್ಷ ಕಳೆದಂತೆ ಅನುದಾನ ಹೆಚ್ಚಿ, ಈಗ ಐವತ್ತು ಕೋಟಿ ರೂ. ದಾಟಿದೆ. ತಕ್ಕಂತೆ ಖರ್ಚು,ವೆಚ್ಚಗಳು ಹೆಚ್ಚಿವೆ. ಬೇಕೋ ಬೇಡವೋ ಅದ್ಧೂರಿತನ ಮಿತಿ ಮೀರಿದೆ. ಧಾರಾಳತನದ ಹಿಂದೆ ದುರ್ಬಳಕೆಯ ಕರಾಳತೆಯೂ ಅಡಗಿದೆ. ಹಣಕಾಸು ನಿರ್ವಹಣೆಯ ನಿರ್ದಿಷ್ಟ ಹೊಣೆಗಾರಿಯನ್ನು ಪ್ರಾಽಕಾರಕ್ಕೆ ನಿಗದಿಪಡಿಸಿದರೆ ಪ್ರತಿ ವರ್ಷ ಸರ್ಕಾರದಿಂದ ಬರುವ ಕೋಟ್ಯಂತರರೂ. ಹಣವನ್ನು ‘ತೀರಿಸಿ’, ಕೊನೆಗೊಂದು ಲೆಕ್ಕ ನೀಡಿ ಕೈತೊಳೆದುಕೊಳ್ಳುವ ಪರಿಪಾಠಕ್ಕೆ ತೆರೆ ಎಳೆದು, ವ್ಯಾವಹಾರಿಕ ಪಾರದರ್ಶಕತೆ ತರಬಹುದು. ಟಿಕೆಟ್, ಪ್ರಾಯೋಜಕತ್ವ, ಪ್ರವಾಸಿ ಪ್ಯಾಕೇಜ್ಗಳ ಮೂಲಕ ವ್ಯವಸ್ಥಿತವಾಗಿ ಆದಾಯ ಸಂಗ್ರಹಿಸಿದರೆ ಉತ್ಸವ ಸಂಘಟನೆಗೆ ಆರ್ಥಿಕ ಶಕ್ತಿ ಹೆಚ್ಚುತ್ತದೆ.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಶ್ರೀ ಚಾಮುಂಡೇಶ್ವೇರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಗಳನ್ನು ದಸರಾ ಪ್ರಾಧಿಕಾರದ ವ್ಯಾಪ್ತಿಗೆ ತರುವುದು ಸಾಧ್ಯವಾದರೆ ಭವಿಷ್ಯದಲ್ಲಿ ಸರ್ಕಾರದ ಅನುದಾನವಿಲ್ಲದೆ ವ್ಯವಸ್ಥಿತ; ಅರ್ಥ ಪೂರ್ಣವಾಗಿ ಉತ್ಸವವನ್ನು ಸಂಘಟಿಸುವ ಆರ್ಥಿಕ ಸ್ವಾವಲಂಬನೆ ಪ್ರಾಧಿಕಾರಕ್ಕೆ ದೊರೆಯಬಹುದು. ದಸರೆಯ ದಿನಗಳಲ್ಲಷ್ಟೆ ಅಲ್ಲ ವರ್ಷವಿಡೀ ಒಂದಿಂದು ಚಟುವಟಿಕೆ ನಡೆಯುವಂಥ ಸಾಂಸ್ಕೃತಿಕ ತಾಣವನ್ನಾಗಿ ಮೈಸೂರನ್ನು ಅಭಿವೃದ್ಧಿಪಡಿಸಿ ಜಗತಿಕ ಪ್ರವಾಸಿ ನಕ್ಷೆಯಲ್ಲಿ ಶಾಶ್ವತ ಗುರುತನ್ನೂ ಮೂಡಿಸಬಹುದು.
ಈಗ ಜನಪ್ರತಿನಿಧಿಗಳು, ಉಪಸಮಿತಿಗಳಿಗೆ ನೇಮಕ ಆಗುವ ವಿವಿಧ ಕ್ಷೇತ್ರಗಳ ಜನರ ಅಭಿಪ್ರಾಯಗಳಿಗಿಂತ ಅಧಿಕಾರಿಗಳ ತೀರ್ಮಾನಗಳೇ ದಸರಾದಲ್ಲಿ ಮೇಲುಗೈ ಪಡೆಯುತ್ತಿವೆ ಎಂಬ ಅಸಮಾಧಾನವಿದೆ. ಎಲ್ಲ ನಿರ್ಧಾರ ಕೈಗೊಂಡ ಬಳಿಕ ನೆಪಕ್ಕೆ ಉಪ ಸಮಿತಿಗಳನ್ನು ರಚಿಸಲಾಗುತ್ತದೆ. ಉದ್ಘಾಟನೆಯಾದ ಬಳಿಕ ಉಪಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿದ ಉದಾಹರಣೆಗಳೂ ಇವೆ. ದಸರೆಯಲ್ಲಿ ‘ಜನರ ಪ್ರಾತಿನಿಧ್ಯ’ ಎನ್ನುವುದು ಒಂದು ಔಪಚಾರಿಕ ಸಭೆ, ಕಾಫಿ-ತಿಂಡಿ, ಎರಡು ಪಾಸು …ಎನ್ನುವ ‘ಸವಲತ್ತಿಗೆ’ ಸೀಮಿತ ಆಗಿದೆ.
ಪ್ರಾಧಿಕಾರವನ್ನು ರಚಿಸಿದ ಮಾತ್ರಕ್ಕೆ ಎಲ್ಲವೂ ಸುಸೂತ್ರ ಆಗಿಬಿಡುತ್ತದೆಯೇ? ಈಗ ಕಂದಾಯ, ಪೊಲೀಸ್,ಕ್ರೀಡೆ, ಶಿಕ್ಷಣ, ಅರಣ್ಯ ,ಕನ್ನಡ ಮತ್ತು ಸಂಸ್ಕತಿ,ಪರಂಪರೆ ಇಲಾಖೆ ಸಹಿತ ಹಲವು ಇಲಾಖೆಗಳು ಮತ್ತು ಮಹಾನಗರ ಪಾಲಿಕೆಯ ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿ ಸಾವಿರಾರು ಸಂಖ್ಯೆಯಲ್ಲಿ ಉತ್ಸವ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಿದ್ದಾಗ ಪ್ರಾಧಿಕಾರ ರಚಿಸಿ, ಒಂದಷ್ಟು ಅಧಿಕಾರಿ ಸಿಬ್ಬಂದಿಯನ್ನು ನೇಮಿಸಿ; ತಜ್ಞರ ಸಮಿತಿ ರಚಿಸಿದರೆ ಅಷ್ಟು ಸೀಮಿತ ಮಾನವ ಸಂಪನ್ಮೂಲದಿಂದ ಇಷ್ಟೊಂದು ದೊಡ್ಡ ಉತ್ಸವ ಸಂಘಟನೆ ಸಾಧ್ಯವೇ? ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ನೆರವು ಬೇಕೇ ಬೇಕು ಎಂದಾದರೆ ಪ್ರಾಧಿಕಾರ ಎನ್ನುವುದು ಹೆಚ್ಚುವರಿ ‘ವೆಚ್ಚ’ವಾಗಿ ಪರಿಣಮಿಸಬಹುದಲ್ಲವೇ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಪ್ರಾಧಿಕಾರ ಮತ್ತು ವಿವಿಧ ಇಲಾಖೆ ನಡುವೆ ಸಂಘರ್ಷ ತಲೆದೋರಬಹುದೆನ್ನುವ ಆತಂಕದಿಂದಲೇ ಸರ್ಕಾರ ಪ್ರಾಧಿಕಾರ ರಚನೆಗೆ ಆಸಕ್ತಿ ತೋರುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಈ ವಿಷಯದಲ್ಲಿ ಕೆಲವು ಸ್ಪಷ್ಟನೆಗಳು ಅವಶ್ಯ. ಪ್ರಾಧಿಕಾರಕ್ಕೆ ಕೇವಲ ಅಧಿಕಾರಿಗಳು, ರಾಜಕಾರಣಿಗಳನ್ನು ನೇಮಕ ಮಾಡದೆ ಮೇಲೆ ಪ್ರಸ್ತಾಪಿಸಿದಂತೆ ನಾಡಿನ ವಿವಿಧ ಕ್ಷೇತ್ರದ ತಜ್ಞರು ; ಅನುಭವಿಗಳನ್ನು ಒಳಗೊಂಡ ‘ಸಾಂಸ್ಕೃತಿಕ ಕಾಳಜಿಯುಳ್ಳವರ’ ಸಮಿತಿ ರಚಿಸಬೇಕು. ಈ ಸಮಿತಿ ನಿರಂತರ ಸಭೆ ನಡೆಸಿ, ಮುಂದಿನ ವರ್ಷದ ಉತ್ಸವದ ರೂಪು ರೇಷೆಗಳನ್ನು ಸಾಕಷ್ಟು ಮೊದಲೇ ಮುಖ್ಯಮಂತ್ರಿ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಸಲ್ಲಿಸಬೇಕು. ಪ್ರಾಧಿಕಾರದ ಪ್ರಾತಿನಿಧ್ಯವನ್ನೂ ಒಳಗೊಂಡ ಉನ್ನತಾಧಿಕಾರ ಸಮಿತಿ ಅಂತಿಮ ತೀರ್ಮಾನ ಕೈಗೊಂಡು, ಅನುಷ್ಠಾನದ ಹೊಣೆಯನ್ನು ಸ್ಥಳೀಯ ಆಡಳಿತಕ್ಕೆ ವಹಿಸಬೇಕು. ಆಗ, ಪ್ರತಿ ವರ್ಷ ಉತ್ಸವಕ್ಕೆ ಯೋಜಿತವಾಗಿ ಹೊಸ ದೃಷ್ಟಿಕೋನವನ್ನು, ವಿಭಿನ್ನ ಆಯಾಮವನ್ನು ನೀಡಬಹುದು. ಜಿಡಳಿತದ ‘ಕಾರ್ಯ ಸ್ಥಗಿತ’ತೆಯಿಂದ ಜನರಿಗೆ ಆಗುವ ಆಡಳಿತಾತ್ಮಕ ತೊಂದರೆಯೂ ತಪ್ಪಬಹುದು.
ಪ್ರಭುತ್ವ ಕಾಲದ ವೈಭವ ಎಷ್ಟೇ ಇದ್ದಿರಲಿ, ಪ್ರಜಾಪ್ರಭುತ್ವ ಕಾಲದ ಉತ್ಸವ ನಾಡಿನ ಎಲ್ಲ ಜನ- ಸಮುದಾಯಗಳ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮವನ್ನು ಸಮೇಳೈಸಿಕೊಂಡು ನಿಜ ಅರ್ಥದಲ್ಲಿ ಜನೋತ್ಸವವಾಗಿ ರೂಪುಗೊಳ್ಳುತ್ತಿದೆ. ಈ ವರ್ಷ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ದಸರೆಗೆ ಹಲವು ಹೊಸತುಗಳನ್ನು ಪರಿಚಯಿಸಿದ್ದಾರೆ. ದಸರಾ ಪ್ರಾಧಿಕಾರ ರಚನೆಯ ಬೇಡಿಕೆ ಈಡೇರಿಸುವ ಮೂಲಕ ಹೊಸತನದ ನಿರಂತರ ಹರಿವಿಗೆ ಮುನ್ನುಡಿ ಬರೆಯಲಿ; ಮುಂದಿನ ವರ್ಷದ ದಸರಾ ಸಿದ್ಧತೆಗೆ ಜುಲೈ-ಆಗಸ್ಟ್ವರೆಗೆ ಕಾಯದೆ ಯೋಜಿತ ಸಿದ್ಧತೆಗೆ ಈಗಲೆ ಮುಂದಡಿ ಇಡಲಿ ಎಂದು ಆಶಿಸುತ್ತೇನೆ.
” ಅಧಿಕಾರಿಗಳ ಜೊತೆ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು, ಇತಿಹಾಸಜ್ಞರು, ಪಾರಂಪರಿಕ ತಜ್ಞರು, ಕಲಾ ಕ್ಷೇತ್ರದ ಕ್ಯುರೇಟರ್ಗಳು,ಪ್ರವಾಸೋದ್ಯಮ ಅನುಭವಿಗಳು, ಹೋಟೆಲ್ ಮಾಲೀಕರು, ಸ್ಥಳೀಯ ಉದ್ಯಮಿಗಳನ್ನು ಒಳಗೊಂಡ ಪರಿಣತರ ತಂಡ ಪ್ರಾಧಿಕಾರದಲ್ಲಿ ಇರುವಂತಾದರೆ ಉತ್ಸವದ ಸಾಂಸ್ಕೃತಿಕ ಘನತೆಯನ್ನು, ಪಾರಂಪರಿಕ ಸೊಗಡನ್ನು ಕಾಯ್ದುಕೊಳ್ಳುವುದು ಸಾಧ್ಯ”




