ಚೆಟ್ಟಳ್ಳಿ : ಇಲ್ಲಿನ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಆಯೋಜಿಸಿದ್ದ ಬೆಣ್ಣೆ ಹಣ್ಣಿನ(ಬಟರ್ ಫ್ರೂಟ್) ವೈವಿಧ್ಯತೆಯ ಮೇಳ, ಕ್ಷೇತ್ರೋತ್ಸವ ಮತ್ತು ಪಾಲುದಾರರ ಸಭೆಯಲ್ಲಿ ಕೃಷಿಕರ ಗಮನ ಸೆಳೆದವು.
ವಿದೇಶಿ ಹಣ್ಣಿನ ತಳಿಗಳಾದ ಫೀರೈಟೆ, ಪಿಂಕ್ ಕರ್ಟನ್, ಕ್ಯಾರ್ಮೆನ್ ಹ್ಯಾಸ್, ಡಿಗಾನಿಯಾ, ದೇಶೀಯ 78 ವಿಧದ ಹಣ್ಣುಗಳು ಹಾಗೂ ಕೇಂದ್ರದ ಸಂಶೋಧಿತ ತಳಿಗಳಾದ ಅರ್ಕಾ ಸುಪ್ರೀಂ, ಅರ್ಕಾ ಕೂರ್ಗ್ ರವಿ ಹಾಗೂ ಟಿಕೆಡಿ ಪ್ರದರ್ಶನಗೊಂಡರೆ ಮಹಿಳೆಯರು ತಯಾರಿಸಿದ ಬೆಣ್ಣೆ ಹಣ್ಣಿನ ಸೂಫ್ಲೆ, ಕೇಕ್, ಇಡ್ಲಿ, ಕಾಫಿ, ಸ್ಯಾಂಡ್ವಿಚ್, ಚಟ್ನಿ, ಬ್ರೆಡ್ ಸ್ಪೆಡ್, ಸ್ಟಾಟರ್ ಹೀಗೆ ಹಲವು ಬಗೆಯ ಖಾದ್ಯಗಳು ಪ್ರದರ್ಶನಗೊಂಡವು.
ಪ್ರಗತಿಪರ ಬೆಳೆಗಾರ ಕುಪ್ಪಂಡ ಎ.ಚಿಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗಿನವರು ಕಾಫಿ, ಕರಿಮೆಣಸು ಬೆಳೆಯನ್ನು ಆದಾಯದ ಮೂಲವಾಗಿ ರೂಪಿಸಿಕೊಂಡಿದ್ದರು. ಆದರೆ ಕೊಡಗಿನ ಕಿತ್ತಳೆಗೆ ಹೆಚ್ಚಿನ ಒತ್ತು ನೀಡಿದಿದ್ದರೆ ಕಿತ್ತಳೆ ಬೆಳೆಯನ್ನು ಅಭಿವೃದ್ಧಿಪಡಿಸಬಹುದು ಎಂದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಆರ್.ದಿನೇಶ್ ಮಾತನಾಡಿದರು. ನಿರ್ದೇಶಕ ಡಾ.ಪ್ರಕಾಶ್ ಪಾಟೀಲ್, ಕೆ.ಎ.ಚಿಣ್ಣಪ್ಪ ಹಾಜರಿದ್ದರು. ಬೆಣ್ಣೆಹಣ್ಣಿನ ವಿವಿಧ ತಳಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.