ವಿರಾಜಪೇಟೆ : ವಿವಾಹಿತ ಮಹಿಳೆಯ ಜೊತೆ ಸಂಬಂಧವನ್ನಿಟ್ಟುಕೊಂಡಿದ್ದ ಯುವಕನೊಬ್ಬ ಮನನೊಂದು ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ.
ಕೆ.ಬೋಯಿಕೇರಿ ಗ್ರಾಮದ ನಿವಾಸಿ ದಿ. ನಾಗರಾಜು ಎಂಬವರ ಪುತ್ರ, ಸೆಸ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕ ಸಾಗರ್ (30) ಆತ್ಮಹತ್ಯೆ ಮಾಡಿಕೊಂಡವರು.
ವಿವಾಹಿತ ಮಹಿಳೆಯೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದ ಸಾಗರ್, ಗಾಂಧಿನಗರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಸುಮಾರು 8 ವರ್ಷಗಳಿಂದ ಜೀವನ ನಡೆಸುತ್ತಿದ್ದನು.
ಎರಡು ದಿನಗಳಿಂದ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ಬೆಳಿಗ್ಗೆ ಹೊರಗಡೆ ತೆರಳಿದ್ದ ಸಾಗರ್, ಸಂಜೆ 6ರ ವೇಳೆಗೆ ಮತ್ತೆ ವಾಪಸ್ ಮನೆಗೆ ಬಂದಿದ್ದಾನೆ. ಈ ವೇಳೆ ಮಹಿಳೆ ಮನೆಯಲ್ಲಿ ಇಲ್ಲದಿರುವುದನ್ನು ನೋಡಿ ವಿಡಿಯೋ ಚಿತ್ರಣ ಮಾಡಿ ಅಡುಗೆ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಮೃತನ ತಾಯಿ ಎನ್.ಎನ್.ಸರೋಜ ಅವರು ನೀಡಿರುವ ದೂರಿನ ಅನ್ವಯ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಮೃತರ ಶರೀರವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.