ನಂಜನಗೂಡಿನ ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮೇಲುಕೋಟೆಯಲ್ಲಿ ಭಾರಿ ಗಾತ್ರದ ಮರದ ಕೊಂಬೆಯೊಂದು ಮುರಿದು ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ಮೇಲುಕೋಟೆಯ ಶ್ರೀ ಯೋಗಾನರಸಿಂಹ ಸ್ವಾಮಿ ದರ್ಶನಕ್ಕೆ ಬೆಟ್ಟ ಹತ್ತುವಾಗ ಈ ದುರ್ಘಟನೆ ನಡೆದಿದೆ. ಇದರಿಂದ ಸಾರ್ವಜನಿಕರು, ಪ್ರವಾಸಿಗರು ಆಘಾತಕ್ಕೀಡಾಗಿದ್ದಾರೆ.
ನಂಜನಗೂಡು ವಿದ್ಯಾರ್ಥಿಗಳಾದ ನಿಶಾಂತ್ ನಾಯಕ್, ವರುಣ್ ಮತ್ತು ಯೋಗೇಶ್ ಹಾಗೂ ಶಿಕ್ಷಕ ಕೇಶವರಾವ್ ಗಾಯಗೊಂಡವರಾಗಿದ್ದಾರೆ. ಇವರು ನಂಜನ ಗೂಡಿನ ಲಯನ್ಸ್ ಶಾಲೆ ವಿದ್ಯಾರ್ಥಿಗಳಾಗಿದ್ದು, ಶನಿವಾರ ಮೇಲುಕೋಟೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮರ ಒಣಗಿದ್ದ ಹಿನ್ನೆಲೆಯಲ್ಲಿ ಕೊಂಬೆ ಕೆಳಗೆ ಬಿದ್ದಿದೆ. ಮಕ್ಕಳು ಬೆಟ್ಟ ಹತ್ತುವಾಗಲೇ ಏಕಾ ಏಕಿ ಮುರಿದು ವಿದ್ಯಾರ್ಥಿಗಳ ಮೇಲೆ ಬಿದ್ದಿದೆ.
ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಮೇಲುಕೋಟೆ ಸರ್ಕಾರಿ ಆಸ್ವತ್ರೆುಂಲ್ಲಿ ಚಿಕಿತ್ಸೆ ನೀಡಲಾಗಿದೆ. ಒಬ್ಬ ವಿದ್ಯಾರ್ಥಿಯ ಕಾಲಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಮತ್ತಿಬ್ಬರಿಗೆ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ವತ್ರೆಗೆ ಕರೆದೊಯ್ಯಲಾಗಿದೆ.
ಪ್ರವಾಸಿತಾಣ ಮೇಲುಕೋಟೆಯ ಸರ್ಕಾರಿ ಆಸ್ವತ್ರೆಯಲ್ಲಿ ಆಂಬ್ಯುಲೆನ್ಸ್ ಇದ್ದರೂ, ಚಾಲಕನಿಲ್ಲದೆ ಗಾಯಾಳುಗಳನ್ನು ಕರೆದೊಯ್ಯಲು ಪರದಾಡಬೇಕಾಯಿತು. ಒಂದು ಗಂಟೆ ಬಳಿಕ ಪಾಂಡವಪುರದಿಂದ ಬಂದ ಆಂಬ್ಯುಲೆನ್ಸ್‌ನಲ್ಲಿ ಗಾಯಾಳುಗಳನ್ನು ಮೈಸೂರಿಗೆ ಕಳುಹಿಸಲಾಯಿತು.
ವಿಷಯ ತಿಳಿದ ನಂಜನಗೂಡು ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ತಕ್ಷಣ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.