Mysore
24
overcast clouds

Social Media

ಬುಧವಾರ, 27 ಮೇ 2026
Light
Dark

ಕಪಿಲಾ ತೀರದಲ್ಲಿ ಮುಂದುವರಿದ ಬಿಸಿ ನೀರಿನ ಸುಲಿಗೆ

ಎಸ್.ಎಸ್.ಭಟ್

ನಂಜನಗೂಡು: ಅಧಿಕಾರಿಗಳ ನೋಟಿಸ್‌ಗೂ ಕ್ಯಾರೆ ಎನ್ನದ ಶ್ರೀಕಂಠೇಶ್ವರ ದೇವಾಲಯದ ಸಿಬ್ಬಂದಿ

ನಂಜನಗೂಡು: ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದ ಕಪಿಲಾ ನದಿ ದಡದಲ್ಲಿ ಬಿಸಿ ನೀರಿನ ಸುಲಿಗೆ ಮುಂದುವರಿಯುತ್ತಲೇ ಇದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಅವರು ಬಿಸಿ ನೀರಿನ ಸುಲಿಗೆ ಮಾಡುತ್ತಿರುವ ದೇವಾಲಯದ ಸಿಬ್ಬಂದಿಗೆ ಎರಡು ಬಾರಿ ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಬಿಸಿ ನೀರಿನ ಸುಲಿಗೆ ಕುರಿತು ಸಮಗ್ರ ವರದಿ ಸಲ್ಲಿಸಲಾಗಿದೆ. ನಾಳೆಯಿಂದಲೇ ಬಿಸಿ ನೀರಿನ ವ್ಯಾಪಾರ ಬಂದ್ ಮಾಡಲಾಗುತ್ತದೆ ಎಂದು ಎರಡು ತಿಂಗ ಳಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಬಿಸಿ ನೀರಿನ ವ್ಯಾಪಾರದ ಸುಲಿಗೆ ಮಾತ್ರ ನಿಂತಿಲ್ಲ.

ಕೆಡಿಪಿ ಸಭೆಯಲ್ಲಿ ಬಿಸಿ ನೀರಿನ ಸುಲಿಗೆ ಕುರಿತು ಪ್ರಸ್ತಾಪಿಸಿದ ಶಾಸಕ ದರ್ಶನ್ ಧ್ರುವ ನಾರಾಯಣ ಈ ಸುಲಿಗೆ ತಪ್ಪಿಸಿ, ತಕ್ಷಣ ದೇವಾಲಯದಿಂದಲೇ ಸೋಲಾರ್ ಸೌಲಭ್ಯದ ಬಿಸಿ ನೀರಿನ ವ್ಯವಸ್ಥೆ ಮಾಡಿ ಎಂದು ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರ ಸಮ್ಮುಖದಲ್ಲೇ ದೇವಾಲಯದ ಇಒ ಕೃಷ್ಣ ಅವರಿಗೆ ತಾಕೀತು ಮಾಡಿ ೨೦ ದಿನಗಳಾದರೂ ಬಿಸಿ ನೀರಿನ ಮಾರಾಟ ಮಾತ್ರ ನಿಂತಿಲ್ಲ. ಬಿಸಿ ನೀರಿಗಾಗಿ ಆಗಮಿಸಿದವರ ಸುಲಿಗೆ ತಪ್ಪಿಲ್ಲ.

ಎರಡು ನೋಟಿಸ್ ಪಡೆದಿದ್ದರೂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿಯೂ ದೇವಾಲಯದ ಜಾಗದಲ್ಲೇ ಬಿಸಿ ನೀರಿನ ಸುಲಿಗೆ ಮುಂದುವರಿಸಿರುವ ದೇವಾಲಯದ ಆ ಸಿಬ್ಬಂದಿಯನ್ನು ಕಾಣದ ಕೈಗಳು ಬೆಂಬಲಿಸುತ್ತಿವೆ ಎಂಬ ಗುಮಾನಿ ಈಗ ನಂಜನಗೂಡಿನ ನಾಗರಿಕರನ್ನು ಕಾಡತೊಡಗಿದೆ.

ಕೊರೊನಾ ನಂತರ ೫ ವರ್ಷಗಳ ಹಿಂದೆ ಕಪಿಲಾ ಸ್ನಾನಘಟ್ಟದಲ್ಲಿ ದೇವಾಲಯದ ವತಿಯಿಂದ ಎರಡು ಬಾಯ್ಲರ್‌ಗಳನ್ನು ಸ್ಥಾಪಿಸಿ, ಭಕ್ತರಿಗೆ ೫ ರೂ.ಗಳಿಗೆ ಒಂದು ಬಕೆಟ್ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಿ, ಅಂದಿನಿಂದಲೂ ದೇವಾಲಯ ದಿಂದ ಸಂಬಳ ಪಡೆಯುವ ಸಿಬ್ಬಂಗಳನ್ನೇ ಇಲ್ಲಿಗೆ ನೇಮಿಸಲಾಗಿತ್ತು. ಆದರೆ ದೇವಾಲಯದ ಈ ಸೌಲಭ್ಯ ಕೆಲವೇ ದಿನಗಳಲ್ಲಿ ಸುಲಿಗೆ ರೂಪ ತಾಳಿ ದೇವಾಲಯದ ಪಾಲಿಗೆ ಉಚಿತವಾಗಿ, ಭಕ್ತರ ಜೇಬಿಗೆ ಕನ್ನವಾಗಿ ಪರಿವರ್ತನೆಯಾಗಿ, ಸುಲಿಗೆಕೋರರ ಪಾಲಿಗೆ ದಿನಕ್ಕೆ ೧೦-೨೦ ಸಾವಿರ ರೂ. ಆದಾಯಕ್ಕೆ ದಾರಿಯಾಯಿತು.

ನಿತ್ಯ ಕನಿಷ್ಠ ೨೦೦ ಬಕೆಟ್ ನೀರು, ಭಾನುವಾರ, ಸೋಮವಾರ ಹುಣ್ಣಿಮೆ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ೮೦೦ ಬಕೆಟ್‌ಗಳವರೆಗೆ ಬಿಸಿ ನೀರು ವ್ಯಾಪಾರ ವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು. ಒಂದು ಬಕೆಟ್‌ಗೆ ೫೦ ರೂ. ಆದರೆ, ೧೦೦ ಬಕೆಟ್‌ಗಳಿಗೆ ೫,೦೦೦ ರೂ. ನಿತ್ಯ ಕನಿಷ್ಠ ೨೦೦ ಬಕೆಟ್ ಎಂದರೂ ೧೦,೦೦೦ ರೂ. ದಿನದ ಆದಾಯ. ವಿಶೇಷ ದಿನಗಳಲ್ಲಿ ಅದು ೫ ಪಟ್ಟು ಹೆಚ್ಚಾಗಿ ೪೦ ಸಾವಿರ ರೂ.ವರೆಗೂ ಹೋಗುತ್ತದೆ. ಲೆಕ್ಕಪತ್ರ, ಕೊನೆಗೆ ರಶೀತಿಯೇ ಇಲ್ಲದ ಈ ಅಘೋಷಿತ ಆದಾಯ ಎಲ್ಲಿಗೆ ಹೋಗುತ್ತಿದೆ? ಯಾರ‍್ಯಾರ ಜೇಬು ಸೇರುತ್ತಿದೆ? ಇದರಲ್ಲಿ ಯಾರ‍್ಯಾರು ಪಾಲುದಾರರು ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವವರ‍್ಯಾರು? ದೇವಾಲಯದ ಅಧಿಕಾರಿಗಳೇ ಅಥವಾ ದೇವಾಲಯದ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

” ದೇವಾಲಯದ ಸಿಬ್ಬಂದಿಯೇ ಬಿಸಿ ನೀರಿನ ವ್ಯಾಪಾರದಲ್ಲಿ ಐದು ವರ್ಷಗಳಿಂದ ಕೋಟಿ ಕೋಟಿ ರೂ. ಸುಲಿಗೆ ಮಾಡುತ್ತಿರುವ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗಿ ಎರಡು ತಿಂಗಳಾದರೂ ಸುಲಿಗೆ ಸ್ಥಗಿತವಾಗದಿರಲು ಕಾರಣವೇನು? ಈ ಸುಲಿಗೆಯ ಹಣ ಯಾರ ಜೇಬಿಗೆ ಸೇರುತ್ತಿದೆ ಎಂದು ತನಿಖೆ ನಡೆಸಲು ದೇವಾಲಯದ ಅಭಿವೃದ್ದಿ ಸಮಿತಿಯ ಮುಖ್ಯಸ್ಥರಾದ ಜಿಲ್ಲಾಽಕಾರಿಗಳು ಆದೇಶಿಸಬೇಕು.”

-ನಗರ್ಲೆ ವಿಜಯಕುಮಾರ್, ಸಾಮಾಜಿಕ ಹೋರಾಟಗಾರ

” ಕಾನೂನು ಪದವೀಧರರಾದ ಶಾಸಕ ದರ್ಶನ್ ಮಧ್ಯ ಪ್ರವೇಶಿಸಿ ಕಾನೂನು ಬಾಹಿರವಾದ ಈ ಅಕ್ರಮ ಸುಲಿಗೆಗೆ ಕಾರಣರಾದ ದೇವಾಲಯದ ಸಿಬ್ಬಂದಿಯನ್ನು ಅಮಾನತ್ತಿನಲ್ಲಿಟ್ಟು, ಸುಲಿಗೆ ನಿಲ್ಲಿಸಿ ಭಕ್ತರಿಗೆ ಉಚಿತ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.”

-ಹೊರಳವಾಡಿ ಮಹೇಶ, ವಕೀಲ

 

 

Tags:
error: Content is protected !!