Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ದಸರೆ ಪಂಜಿನ ಕವಾಯತಿನ ವಿಶೇಷ ಆಕರ್ಷಣೆ ಡ್ರೋನ್‌ ಶೋ

ಮೈಸೂರು: ಆಕಾಶದಲ್ಲಿ ಹಾರಾಡುತ್ತಾ ನಾನಾ ಬಗೆಯ ಕಲಾಕೃತಿಗಳನ್ನು ರಚಿಸುವ ಡ್ರೋನ್‌ ಶೋ ಈ ಬಾರಿಯ ದಸರೆ ಪಂಜಿನ ಕವಾಯತಿನ ವಿಶೇಷ ಆಕರ್ಷಣೆಯಾಗಲಿದೆ.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಪೂರ್ವ ಭಾವಿ ಪ್ರದರ್ಶನದಲ್ಲಿ ಡ್ರೋನ್ ಶೋ ಎಲ್ಲರ ಗಮನಸೆಳೆಯಿತು. ಸಾವಿರಾರು ಡ್ರೋನ್ ಗಳು ನಿಧಾನಕ್ಕೆ ನೆಲದಿಂದ ಮೇಲಕ್ಕೇರಿ ಆಗಸದಲ್ಲಿ ತಮ್ಮ ಯೋಜಿತ ಚಲನೆಯಿಂದಲೇ ಚಿತ್ತಾಕರ್ಷಕ ಕಲಾಕೃತಿಗಳನ್ನು ರೂಪಿಸುವ ಮೂಲಕ ಗಮನ ಸೆಳೆದವು.

 

ಆರಂಭದಲ್ಲಿಯೇ “ಮೈಸೂರು ದಸರಾʼ ಎಂದು ಆಕಾಶದಲ್ಲಿ ಬೆಳಕಿನ ಅಕ್ಷರ ಲೋಕವನ್ನು ತೆರೆದಿಟ್ಟ ಡ್ರೋನ್‌ ತಂಡ ಬಳಿಕ ಮೈಸೂರು ಅರಮನೆ, ಅಂಬಾರಿ, ಗಂಢಬೇರುಂಡ, ಆನೆಗಳ ಸಾಲು…ಹೀಗೆ ಸುಮಾರು 15 ನಿಮಿಷಗಳ ಮೂಲಕ ಮೈಸೂರು ಮತ್ತು ದಸರೆ ಪರಂಪರೆ ಬಿಂಬಿಸುವ ಮೂಲಕ ನೋಡುಗರ ಗಮನ ಸೆಳೆಯಿತು. ಇದೇ ಮೊದಲ ಬಾರಿಗೆ ಡ್ರೋನ್‌ ಶೋ ಏರ್ಪಡಿಸಿದ್ದ ಕಾರಣ ಜನರು ಈ ದೃಶ್ಯಗಳನ್ನು ತಮ್ಮ ಮೊಬೈಲ್‌ ಗಳಲ್ಲಿ ಸರೆ ಹಿಡಿಯಲು ಪೈಪೋಟಿ ನಡೆಸಿದರು.

ಪ್ರತೀ ವರ್ಷ ಜನರನ್ನು ರಂಜಿಸುತ್ತಿದ್ದ ಬೈಕ್‌ ಸ್ಟಂಟ್ ಇಲ್ಲದಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾದರೂ ಡ್ರೋನ್‌ ಶೋ ಈ ಬೇಸರವನ್ನು ನೀಗಿಸುವಂತಿತ್ತು. ಉಳಿದಂತೆ
ಎದೆ ಝಲ್ಲೆನ್ನುವ ಕಸರತ್ತು, ಬೆಂಕಿಯೊಂದಿಗೆ ಸರಸಾಟ, ಅತ್ಯಾಕರ್ಷಕ ನೃತ್ಯ ವೈಭವ, ಲೇಸರ್ ಬೆಳಕಿನ ನರ್ತನ, ಬಾಣ ಬಿರುಸುಗಳ ಚಿತ್ತಾರ… ಇವೆಲ್ಲವನ್ನೂ ವಿಜಯದಶಮಿಯ ಹಿಂದಿನ ದಿನವೇ ಸಾವಿರಾರು ಜನರು ಕಣ್ತುಂಬಿಕೊಂಡರು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಪ್ರದರ್ಶನ ನೆರೆದ ಸಹಸ್ರಾರು ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಿತು. ಚಿತ್ತಾಕರ್ಷಕ ಪಥ ಸಂಚನಲ ನೆರೆದಿದ್ದ ಪ್ರೇಕ್ಷಕರೆದೆಯಲ್ಲಿ ದೇಶಪ್ರೇಮ ಉಕ್ಕಿಹರಿಯುವಂತೆ ಮಾಡಿದರೆ, ಮೈಸೂರು ಅಶ್ವಾರೋಹಿ ಪೊಲೀಸ್‌ ದಳದ ಟೆಂಟ್‌ ಪೆಗ್ಗಿಂಗ್‌ ಪ್ರದರ್ಶನ ಎಲ್ಲರನ್ನೂ ಉಸಿರು ಬಿಗಿಹಿಡಿಯುವಂತೆ ಮಾಡಿತು. ನೂರಾರು ಕಲಾವಿದರು ನೃತ್ಯ ವೈಭವದ ಮೂಲಕ ಜನರಿಗೆ ಮನರಂಜನೆ ಉಣಬಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆ ಬಳಿಕ ಅಶ್ವಾರೋಹಿ ಪಡೆ, ಕೆಎಸ್ಆರ್ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಎನ್ಸಿಸಿ, ಸೇವಾದಳ ಒಳಗೊಂಡಂತೆ ನಾನಾ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡು ವಂದನೆ ಸಲ್ಲಿಸಿದರು. ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌ ಗೌರವ ವಂದನೆ ಸ್ವೀಕರಿಸಿದರು.

ಅಶ್ವಾರೋಹಿ ಪಡೆ ಸುಮಾರು ಅರ್ಧ ಗಂಟೆ ಕಾಲ ನಡೆಸಿದ ಟೆಂಟ್ ಪೆಗ್ಗಿಂಗ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ವೇಗವಾಗಿ ಕುದುರೆ ಸವಾರಿ ಮಾಡುತ್ತಾ ಬಂದು ಭರ್ಚಿಯಿಂದ ಮೇಲಕ್ಕೆತ್ತುವ ಸಾಹಸಕ್ಕೆ ಎಲ್ಲರೂ ತಲೆದೂಗಿದರು.

ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳು ಪಂಜಿನ ಕವಾಯತು ಪ್ರದರ್ಶಿಸಿದರು. ‘ವೆಲ್‌ ಕಮ್ ’, ‘ಕರ್ನಾಟಕ ಪೊಲೀಸ್’, ‘ವೆಲ್ಕಂ ಟು ಆಲ್’, ‘ಜೈ ಚಾಮುಂಡಿ’ ಆಕೃತಿಗಳನ್ನು ನಿರ್ಮಿಸಿದರು. ಆಕರ್ಷಕ ಬಾಣ ಬಿರುಸುಗಳ ಚಿತ್ತಾರದೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.
ಇಂದು ರಾತ್ರಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಪಂಜಿನ ಕವಾಯತು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!