ಮಡಿಕೇರಿ: ಲೋಕೋಪಯೋಗಿ ಇಲಾಖೆ ಮಡಿಕೇರಿ ಉಪ ವಿಭಾಗದ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತದಿಂದ ಕಂಟಕ ಪ್ರಾರಂಭವಾಗಿದೆ.
ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಕೊಡಗು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ತಡೆ ಗೋಡೆ ಕಾಮಗಾರಿಗೆ ಸಂಭಂದಿಸಿದಂತೆ ನಿರ್ವಹಣೆ ಹೊತ್ತಿರುವ ಕಿರಿಯ ಇಂಜಿನಿಯರ್ ಕೆ.ಎಲ್.ದೇವರಾಜು, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವರಾಂ ಹಾಗೂ ಅಂದಿನ ಕಾರ್ಯಪಾಲಕ ಇಂಜಿನಿಯರ್ ಮದನ್ ಮೋಹನ್ ಇವರುಗಳಿಗೆ ಕರ್ನಾಟಕ ಲೋಕಾಯುಕ್ತದ ಬಿಸಿ ತಟ್ಟಿದೆ.
ಸುಮಾರು ಏಳೂವರೆ ಕೋಟಿ ರೂ ವೆಚ್ಚದ ಕಾಮಗಾರಿಯಲ್ಲಿ ಬಹುದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಹಾಗೂ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳು ಸೇರಿ ಹಣ ಕೊಳ್ಳೆ ಹೊಡೆಯುವ ಸಲುವಾಗಿ ಕಳಪೆ ಕಾಮಗಾರಿ ಮಾಡಿದ್ದಾರೆ. ಇದರಿಂದ ಕಾಮಗಾರಿ ಮುಗಿಯುವ ಮುನ್ನವೇ ಕುಸಿಯಲು ಪ್ರಾರಂಭಿಸಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷರು ಹಾಗೂ ಕಾಂಗ್ರೆಸ್ ವಕ್ತಾರರಾದ ತೆನ್ನಿರಾ ಮೈನಾ ರವರು ದಿನಾಂಕ ಜು.೨೧ರಂದು ಕರ್ನಾಟಕ ಲೋಕಾಯುಕ್ತ ರವರಲ್ಲಿ ದೂರು ದಾಖಲಿಸಿದ್ದರು.
ಸದರಿ ದೂರು ಮತ್ತು ಪೂರಕ ದಾಖಲೆಗಳನ್ನು ಪರಿಶೀಲಿಸಿದ ಲೋಕಾಯುಕ್ತ ನ್ಯಾಯಾಲಯ ಪ್ರಕರಣ ಉಪಲೋಕ/ಎಂವೈಎಸ್/೭೪೭೭/೨೦೨೩ರಡಿ ಆ.೧೨ರಂದು ವಿಚಾರಣೆ ಕೈಗೆತ್ತಿಕೊಂಡು ಸೆ.೨೦ರಂದು ಹಾಜರಾಗಲು ನೋಟಿಸ್ ಜಾರಿ ಮಾಡಿದೆ.
ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ ದ ಆರೋಪಗಳನ್ನು ಈ ಅಧಿಕಾರಿಗಳು ಎದುರಿಸುತ್ತಿದ್ದು, ಲೋಕಾಯುಕ್ತ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಮತ್ತಷ್ಟು ಪ್ರಬಲ ವಾಗಿರುವುದರಿಂದ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ ಎಂದು ನ್ಯಾಯಾಂಗ ಪರಿಣಿತರು ವಿಶ್ಲೇಷಿಸಿದ್ದಾರೆ.