ಮೈಸೂರು : ವಿಶ್ವವಿಖ್ಯಾ ಮೈಸೂರು ದಸರಾ 2022 ರ ಅಂಗವಾಗಿ ನಾಡಿ ಗಮನ ಸೆಳೆಯುವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಿವಿಧ ಬಾಷೆಗಳ ಕವಿಗಳು ಭಾಗವಹಿಸುವ ಕವಿಗೋಷ್ಠಿಯಲ್ಲಿ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳ ಕವಿತೆಗಳಿಗೆ ಈ ವರ್ಷ ಅವಕಾಶ ನೀಡಲಾಗಿದೆ. ಆದರೆ ಈ ಬಾರಿ ಕರಾವಳಿಯ ಬಹುಮುಖ್ಯವಾದ ಭಾಷೆಯಾದ ಬ್ಯಾರಿ ಭಾಷೆಯನ್ನು ಕಡೆಗಣಿಸಲಾಗಿದೆ. ಬ್ಯಾರಿ ಭಾಷೆಯ ಯಾವೊಬ್ಬ ಕವಿಗಳಿಗೂ ಅವಕಾಶ ನೀಡಿಲ್ಲ ಎಂದು ಕವಿಗಳು ಹಾಗೂ ಬ್ಯಾರೀಸ್ ವೆಲ್ ಫೇರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಬಿ.ಎಂ.ಹನೀಫ್ ಮತ್ತು ಟಿ.ಕೆ.ಷರೀಫ್ ಅವರು ಸರ್ಕಾರದ ನಡೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಬ್ಯಾರಿ ಭಾಷೆಯನ್ನು ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುತ್ತಾರೆ. ನೂರಾರು ಕವಿಗಳು ಈ ಭಾಷೆಯಲ್ಲಿ ಕವಿತೆಗಳನ್ನು ರಚಿಸುತ್ತಿದ್ದಾರೆ. ಬ್ಯಾರಿ ಭಾಷೆಯ ಬೆಳವಣಿಗೆಗೆ ರಾಜ್ಯ ಸರಕಾರವೇ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನೂ ರಚಿಸಿದೆ. ಹೀಗಿರುವಾಗ ನಾಡಿನ ಪ್ರತಿಷ್ಠಿತ ದಸರಾ ಉತ್ಸವದ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಈ ರೀತಿಯ ಅವಮಾನ ಮಾಡಿರುವುದು ಖಂಡಿತಾ ಸರಿಯಲ್ಲ.ಕನ್ನಡ ಸಾಹಿತ್ಯಕ್ಕೆ ಬ್ಯಾರಿ ಮಾತೃಭಾಷೆಯ ಹತ್ತಾರು ಲೇಖಕರು ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದ ಮಹತ್ವದ ಮುಸ್ಲಿಂ ಹಿನ್ನೆಲೆಯ ಲೇಖಕರಲ್ಲಿ ಹೆಚ್ಚಿನವರು ಬ್ಯಾರಿ ಭಾಷಿಕರು. ದಸರಾ ಕವಿಗೋಷ್ಠಿ ಉಪಸಮಿತಿಗೆ ಇದ್ಯಾವುದೂ ಗೊತ್ತಿಲ್ಲವೇ? ಅಥವಾ ಗೊತ್ತಿದ್ದೂ ತಾರತಮ್ಯ ನೀತಿ ಅನುಸರಿಸಿದೆಯೆ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಈಗ ಅಧ್ಯಕ್ಷರೂ ಇಲ್ಲದೆ, ಪೂರ್ಣಾವಧಿ ರಿಜಿಸ್ಟ್ರಾರ್ ಕೂಡಾ ಇಲ್ಲದೆ ಅಕಾಡೆಮಿಯ ಚಟುವಟಿಕೆಗಳು ಕುಂಠಿತಗೊಂಡಿವೆ. ಇದ್ದ ಅಧ್ಯಕ್ಷರನ್ನು ಸರಕಾರ ಹಠಾತ್ತಾಗಿ ವಜಾ ಮಾಡಿ ಹಲವು ತಿಂಗಳಾದವು. ಹೊಸ ಅಧ್ಯಕ್ಷರ ನೇಮಕದ ಬಗ್ಗೆಯೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ಲಕ್ಷ್ಯ ಮನೋಭಾವ ಹೊಂದಿದೆ. ಬ್ಯಾರಿ ಭಾಷೆಯ ಕುರಿತ ಈ ತಾರತಮ್ಯವನ್ನು ನಾವು ಕಟುವಾಗಿ ಖಂಡಿಸಿದ್ದಾರೆ.