Mysore
23
overcast clouds

Social Media

ಭಾನುವಾರ, 21 ಜೂನ್ 2026
Light
Dark

ಸಸ್ಯಾಹಾರಿಗಳ ದುಃಸ್ವಪ್ನ ಮಕಾವ್ ಮತ್ತು ಹಾಂಗ್‌ಕಾಂಗ್…

ಸಿರಿ ಮೈಸೂರು

ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್‌ಕಾಂಗ್‌ಗೆ ಬಂದಾಗ ಇಲ್ಲಿನ ಟೆಂಪಲ್ ಸ್ಟ್ರೀಟ್ ನೈಟ್ ಮಾರ್ಕೆಟ್, ಫುಡ್ ಸ್ಟ್ರೀಟ್‌ಗಳಿಗೆ ಭೇಟಿ ನೀಡುವುದನ್ನು ಖಂಡಿತ ಮರೆಯಬೇಡಿ.

ಮಾಮೂಲಿ ದಿನಗಳಲ್ಲಿ ಮನೆಯಲ್ಲಿ ಊಟ ಮಾಡುವಾಗ ‘ಅಯ್ಯೋ… ಅದೇ ಅನ್ನ-ಸಾರು ತಿನ್ನಬೇಕಾ?’ ಅಂತ ಬಹಳಷ್ಟು ಬಾರಿ ಅನಿಸಿದ್ದುಂಟು. ನಾನು ಶುದ್ಧ ಸಸ್ಯಾಹಾರಿ. ಜೊತೆಗೆ ಆಹಾರದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಆಸಾಮಿಯಲ್ಲ. ಆ ಸಮಯಕ್ಕೆ ತಿನ್ನಲು ಏನಾದರೊಂದಿದ್ದರೆ ಸಾಕಷ್ಟೆ. ಅಲ್ಲದೇ ಹೊರಗಿನ ಆಹಾರ ನನಗೆ ರುಚಿಸುವುದು ಸ್ವಲ್ಪ ಕಡಿಮೆಯೇ. ನಮ್ಮ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಬೇಕಾದಷ್ಟು ರೀತಿಯ ಸೊಪ್ಪು-ಸದೆಗಳನ್ನು ಉಪಯೋಗಿಸಿ ಮಾಡಿದ ಆಹಾರಗಳು ಸಿಗುತ್ತವೆ. ಯಾರಾದರೂ ಅಂತಹ ಆಹಾರದ ಬಗ್ಗೆ, ತಿನಿಸಿನ ಬಗ್ಗೆ ಕೇಳಿದಾಗ ‘ಅವೆಲ್ಲಾ ತಿಂದು ಏನಾಗ್ಬೇಕಿತ್ತು ಬಿಡಿ’ ಎನ್ನುತ್ತಿದ್ದೆ. ಆದರೆ ನಿಜವಾಗಿಯೂ ನನಗೆ ಅದರ ಬೆಲೆ ತಿಳಿದದ್ದು ಈಗ ಕೆಲ ದಿನಗಳ ಹಿಂದೆ ನಾನು ಚೀನಾ ಭಾಗಕ್ಕೆ ಹೋದಾಗ.

ಕಳೆದ ವಾರವಷ್ಟೇ ಒಂದು ವಾರವಿಡೀ ಮಕಾವ್ ಹಾಗೂ ಹಾಂಗ್‌ಕಾಂಗ್‌ನಲ್ಲಿ ಉಳಿದುಕೊಂಡಿದ್ದ ನಾನು, ಅಲ್ಲಿನ ಅನುಭವಗಳ ಬಗ್ಗೆ ಹೇಳಬೇಕೆಂದರೆ ಆಹಾರದಿಂದಲೇ ಶುರು ಮಾಡಬೇಕು. ಅಲ್ಲಿನ ಜನರಿಗೆ ಇಂಗ್ಲಿಷ್ ಬರುವುದೇ ಇಲ್ಲ ಎಂಬ ಕಷ್ಟವನ್ನು ಮೀರಿ ಇನ್ನೂ ಹೆಚ್ಚಾಗಿ ಹುಚ್ಚು ಹಿಡಿಸಿ ಪೇಚಿಗೆ ಸಿಲುಕಿಸಿದ ಸಂಗತಿಯೆಂದರೆ ಸಸ್ಯಾಹಾರಿ ಆಹಾರದ ಕೊರತೆ. ಮಕಾವ್‌ನಲ್ಲಿದ್ದ ಕೆಲ ದಿನಗಳ ಕಾಲ ಬೆಳಿಗ್ಗೆ ಹೋಟೆಲ್ ಬಫೆಯಲ್ಲಿ ಒಂದು ದಿನ ದೋಸೆ, ಒಂದು ದಿನ ಪರೋಟ ಸಿಕ್ಕಿದ್ದು ಬಿಟ್ಟರೆ, ಕಣ್ಣಿಗೆ ಕಾಣುತ್ತಿದ್ದುದೆಲ್ಲಾ ಮಾಂಸಾಹಾರವೇ! ಬೆಳ್ಳಂಬೆಳಿಗ್ಗೆ ಇದನ್ನೆಲ್ಲಾ ತಿಂದು ಹೇಗೆ ಜೀರ್ಣಿಸಿಕೊಳ್ಳುತ್ತಾರಪ್ಪಾ ಎಂಬುದು ಒಂದು ಯೋಚನೆಯಾದರೆ, ಇಲ್ಲಿ ನಾನುತಿನ್ನುವುದೇನೂ ಎಂಬುದು ಮತ್ತೊಂದು ಯೋಚನೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನನ್ನ ಕೈಹಿಡಿದಿದ್ದು ಬ್ರೆಡ್, ಜ್ಯಾಂ. ಬ್ರೆಡ್ ಒಂದನ್ನು ಟೋಸ್ಟ್ ಮಾಡಿಕೊಂಡು ಬೆಣ್ಣೆ, ಜ್ಯಾಂ ಹಾಕಿ ತಿಂದರೆ ಕೆಲವು ಹಣ್ಣು, ತರಕಾರಿಗಳಿಗೆ ಹೊಟ್ಟೆಯಲ್ಲಿ ಜಾಗವಿರುತ್ತಿತ್ತು. ಅಬ್ಬಾ! ಇದ್ದಕ್ಕಿದ್ದಂತೆ ಸಾತ್ವಿಕ ಆಹಾರದ ಒಲವು! ಇವಳಿಗೇನಾಯಿತು ಎಂದು ಕೊಳ್ಳುತ್ತಿತ್ತೇನೋ ನನ್ನ ಹೊಟ್ಟೆ.

ಪ್ರತಿದಿನ ನಮ್ಮಲ್ಲಿ ಅವಲಕ್ಕಿ, ಪೂರಿ, ಸಾಗು, ದೋಸೆ, ಇಡ್ಲಿ, ಪಲ್ಯ, ಗೊಜ್ಜು, ವಾಂಗೀಬಾತು, ಉಪ್ಪಿಟ್ಟಿನಂತಹ ಅದ್ಭುತ ಆಹಾರವನ್ನು ಸವಿಯುತ್ತಿದ್ದ ನಾಲಿಗೆ, ಅಲ್ಲಿದ್ದಷ್ಟೂ ದಿನಗಳ ಮಟ್ಟಿಗೆ ಹಣ್ಣು, ತರಕಾರಿಯನ್ನೇ ನಂಬಿ ಬದುಕುತ್ತಿತ್ತು. ಅಲ್ಲಿನ ಇನ್ನೊಂದು ಕಷ್ಟವೆಂದರೆ ಕೆಲವು ಕಡೆ ತರಕಾರಿ ಸಲಾಡ್‌ಗೂ ಮೊಟ್ಟೆ ಹಾಕಿರುತ್ತಿದ್ದರು. ಒಂದು ರೀತಿ ಯೋಚಿಸಿ ನೋಡಿದರೆ ಆಭಾಗದಲ್ಲಿ ಸಸ್ಯಾಹಾರಿಗಳು ಭಾರತದಷ್ಟಿಲ್ಲ. ಆದ್ದರಿಂದನಮ್ಮಲ್ಲಿರುವಂತೆ ರಸ್ತೆಗೊಂದು ವೆಜ್ ಹೋಟೆಲ್ ತೆರೆದು ಏನೂ ಸುಖವಿಲ್ಲ. ಆದರೆ ಅಲ್ಲಿಗೆ ಹೋಗುವ ಸಸ್ಯಾಹಾರಿಗಳಿಗೆ ಮಾತ್ರ ಪರದಾಟ ಕಟ್ಟಿಟ್ಟ ಬುತ್ತಿ. ಈ ರೀತಿ ಸಾತ್ವಿಕ ಆಹಾರ, ಎಂಟಿಆರ್‌ನಿಂದ ತಂದ ‘ರೆಡಿ ಟು ಈಟ್’ ಆಹಾರದ ಪೊಟ್ಟಣಗಳನ್ನು ತಿನ್ನುತ್ತಾ ಕಾಲ ಹಾಕುತ್ತಿದ್ದ ನಡುವೆಯೇ ದೂರದೂರಿನಲ್ಲಿ ನಮ್ಮೂರಿನ ಅನ್ನ, ಸಾರು ಹುಡುಕುವ ನನ್ನ ಪ್ರಯತ್ನ ನಡೆದೇ ಇತ್ತು. ಅದರ ಫಲವಾಗಿ ಸಿಕ್ಕ ಸಸ್ಯಾಹಾರಿ ಹೋಟೆಲ್ ವುಡ್‌ಲ್ಯಾಂಡ್ಸ್. ಮಕಾವ್‌ನಲ್ಲಿದ್ದ ಇವರ ಹೋಟೆಲ್‌ಗೆ ತೆರಳಿ ಪಾನಿಪೂರಿ, ಗೋಬಿ ಮಂಚೂರಿ, ಟೊಮೆಟೋ ಬಾತ್, ಮೊಸರನ್ನ ಸವಿದಾಗ ಆದ ತೃಪ್ತಿ ಅಷ್ಟಿಷ್ಟಲ್ಲ. ಆಗಿನ್ನೂ ನಮ್ಮೂರನ್ನು ಬಿಟ್ಟು ಎರಡು ಮೂರು ದಿನಗಳಾಗಿದ್ದವಷ್ಟೇ… ಆದರೆ ನಮ್ಮಲ್ಲಿನ ಊಟ ಮಾಡಿ ಅದೆಷ್ಟೋ ದಿನಗಳಾಗಿವೆ ಎನಿಸುತ್ತಿತ್ತು.

ಮಕಾವ್ ಬಿಟ್ಟು ಹಾಂಗ್‌ಕಾಂಗ್‌ಗೆ ಬಂದರಾದರೂ ಸಸ್ಯಾಹಾರಿ ಊಟ ಸಿಗುತ್ತದೇನೋ ಎಂದು ತಿಳಿದಿದ್ದೆ. ಆದರೆ ಊಹೂಂ… ಅಲ್ಲೂ ನನ್ನ ಎಣಿಕೆ ಸುಳ್ಳಾಯಿತು. ಅಲ್ಲೂ ಅದೇಹಣ್ಣು-ತರಕಾರಿಯ ಮೊರೆ ಹೋಗೋಣವೆಂದರೆ ಅಲ್ಲಿ ಮತ್ತೊಂದು ಕಷ್ಟ. ಹಾಂಗ್‌ಕಾಂಗ್‌ನ ಹೋಟೆಲ್ ಬುಕಿಂಗ್‌ನಲ್ಲಿ ಬ್ರೇಕ್‌ಫಾಸ್ಟ್ ಸೇರೇ ಇರಲಿಲ್ಲ ನೋಡಿ! ಒಂದು ಖುಷಿಯ ಸಂಗತಿಯೆಂದರೆ ಅಲ್ಲಿಂದ ಐದು ನಿಮಿಷಗಳ ನಡಿಗೆಯ ದೂರದಲ್ಲಿ ಮಕಾವ್‌ನಲ್ಲಿದ್ದ ವುಡ್‌ಲ್ಯಾಂಡ್ಸ್‌ನ ಶಾಖೆ ಇಲ್ಲೂ ಇತ್ತು. ಅಲ್ಲೇ ಹೋಗಿ ಊಟ ಸವಿಯಲು ಯೋಚಿಸಿದರೆ ಅಲ್ಲೂ ಕಾಣಿಸಿದ್ದು ಬೀಗದ ಮುಖವೇ. ಮಾರನೆಯ ದಿನ ಅಲ್ಲಿನ ವುಡ್‌ಲ್ಯಾಂಡ್ಸ್ ಜೊತೆಗೆ ಸಂಗೀತಾ ಎಂಬ ಮತ್ತೊಂದು ಸಸ್ಯಾಹಾರಿ ಹೋಟೆಲ್ ಸಹ ಸಿಕ್ಕಿದ್ದು ಖುಷಿಯ ವಿಚಾರ. ಅಲ್ಲಿ ರುಚಿಯಾದ ಇಡ್ಲಿ, ಉದ್ದಿನ ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತು ಸಿಕ್ಕಿದ್ದು ಒಂದು ಹೊತ್ತಿಗಾಯಿತು. ಮಧ್ಯಾಹ್ನ ರಾತ್ರಿಯ ಊಟಕ್ಕೆ ಫ್ರೆಶ್ ಫ್ರೂಟ್ ಕಪ್‌ಗಳೇ ಸಂಗಾತಿಗಳು.

ಅಪ್ಪಿತಪ್ಪಿ ಸಸ್ಯಾಹಾರ ಸಿಗುವ ಕಡೆ ಏನು ಸಿಗುತ್ತದೆಂದು ಕೇಳಿದರೆ, ಅಲ್ಲಿರುತ್ತಿದ್ದುದೇ ಬೇಯಿಸಿ, ಒಂದು ಆಕಾರದಲ್ಲಿ ಕತ್ತರಿಸಿದ ಆಲೂಗಡ್ಡೆ ಅಥವಾ ಸಲಾಡ್‌ಗೆ ಹಾಕುವಸೊಪ್ಪುಗಳು. ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಎನ್ನುವಂತೆ ನಮ್ಮ ಮನೆಯಲ್ಲಿ ಕುದಿಯುತ್ತಿರುವ ಸಾರನ್ನು ಸವಿಯಲು ಮನ ಹಂಬಲಿಸುತ್ತಲೇ ಇತ್ತು.

‘ಡು ಯು ಹ್ಯಾವ್ ಎನಿಥಿಂಗ್ ಇನ್ ವೆಜ್?’, ‘ನೋ ಎಗ್… ನೋ ಮೀಟ್. ಓನ್ಲಿ ವೆಜ್’ ಎಂಬಿತ್ಯಾದಿ ಮಾತುಗಳು ಒಂದು ವಾರದ ಕಾಲವೂ ಬೆಳಿಗ್ಗೆ-ರಾತ್ರಿ ನನ್ನ ನಾಲಿಗೆಯಲ್ಲಿ ನಲಿಯುತ್ತಿದ್ದವು. ಒಟ್ಟಿನಲ್ಲಿ ಈ ಭಾಗದಲ್ಲಿ ಸಸ್ಯಾಹಾರಿಗಳ ಗೋಳಂತೂ ಹೇಳತೀರದು. ಕೊನೆಗೆ ಭಾರತಕ್ಕೆ ಮರಳಲು ಏರ್‌ಪೋರ್ಟ್‌ಗೆ ಹೋದಾಗ ಅಲ್ಲಿನ ಲಾಂಜ್‌ನಲ್ಲಾದರೂ ಸಸ್ಯಾಹಾರ ಸಿಗತ್ತದಾ ಎಂದು ನೋಡಿದರೆ ಅಲ್ಲೂ ಇಲ್ಲ! ಒಂದೊಂದು ಆಹಾರದ ಮೇಲೂ ಅದರಲ್ಲಿ ಮೊಟ್ಟೆ ಇದೆಯೇ, ನಟ್ಸ್ ಇದೆಯೇ, ಡೇರಿ ಉತ್ಪನ್ನಗಳಿವೆಯೇ ಎಂಬುದರ ಬಗ್ಗೆಸವಿಸ್ತಾರವಾಗಿ ಬರೆದಿತ್ತು. ಅದನ್ನು ಓದುವುದು, ಪಿಎಚ್.ಡಿ.ಅಧ್ಯಯನ ಮಾಡುವುದು ಎರಡೂ ಒಂದೇ ಅನಿಸಿ ಮತ್ತೆ ಹಣ್ಣಿನ ಮೊರೆ ಹೋದೆ.

ಕೊನೆಗೆ ಫ್ಲೈಟ್ ಹತ್ತಿದ ನಂತರ ಸಿಕ್ಕ ವೆಜ್ ಆಹಾರದಲ್ಲಿ ನಿಂಬೆಕಾಯಿ ಉಪ್ಪಿನಕಾಯಿ ಕಾಣಿಸಿತು. ಒಂದು ಸ್ವಲ್ಪ ರುಚಿ ನೋಡಿದಾಗ ಆದ ಆನಂದ ಅಷ್ಟಿಷ್ಟಲ್ಲ! ನಮ್ಮಲ್ಲಿ ಬಳಸುವಷ್ಟು ಖಾರ, ನಮ್ಮೂರಿನ ರುಚಿ… ಅಬ್ಬಾ! ಒಂದು ಕ್ಷಣಕ್ಕೆ ಮನೆಗೆ ಮರಳಿ ಬಂದಂತಾಯಿತು. ಪ್ರತಿದಿನವೂ ‘ಡು ಯೂ ಹ್ಯಾವ್ ಎನಿಥಿಂಗ್ ಇನ್ ವೆಜ್?’, ?‘ಕೆನ್ ಯೂ ಮೇಕ್ ಪಿಜ್ಝಾ ಅಂಡ್ ಪಾಸ್ತಾ ವಿಥೌಟ್ ಎಗ್/ಮೀಟ್?’ ಎಂಬಂತಹ ಹತ್ತಾರು ಪ್ರಶ್ನೆಗಳನ್ನು ಅದೆಷ್ಟೋ ಜನರಿಗೆ ಕೇಳಿದ್ದು ನೆನಪಾಗಿ ನಗು ಬರುತ್ತಿತ್ತು. ಆದರೂ ಹೊರದೇಶದಲ್ಲಿ ಯಾವುದೆಲ್ಲಾ ಕಷ್ಟಗಳಿರುತ್ತವೆ ಎಂದು ಕೇಳಿದ್ದೆ. ಸಸ್ಯಾಹಾರಿ ಊಟಕ್ಕಿರುವ ಕಷ್ಟ ಮಾತ್ರ ಗೊತ್ತಿರಲಿಲ್ಲ. ಕೊನೆಗೂ ಕಡಲು ದಾಟಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಎನ್ನುವಂತೆ ಮನೆಗೆ ಬಂದು ಹಂಬಲಿಸಿದ ಸಾರನ್ನ ತಿಂದಾಗಲೇ ಮನಸ್ಸಿಗೆ, ದೇಹಕ್ಕೆ, ಅಂತರಾತ್ಮಕ್ಕೆ ತೃಪ್ತಿ ಸಿಕ್ಕಿದ್ದು.

ಆದರೆ ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್‌ಕಾಂಗ್‌ಗೆ ಬಂದಾಗ ಇಲ್ಲಿನಟೆಂಪಲ್ ಸ್ಟ್ರೀಟ್, ನೈಟ್ ಮಾರ್ಕೆಟ್, ಫುಡ್ ಸ್ಟ್ರೀಟ್‌ಗಳಿಗೆ ಭೇಟಿ ನೀಡುವುದನ್ನು ಖಂಡಿತ ಮರೆಯಬೇಡಿ.

Tags:
error: Content is protected !!