ನವೀನ್ ಡಿಸೋಜ
ಮಡಿಕೇರಿ-ಮಂಗಳೂರು ಹೆದ್ದಾರಿಯ ಈ ಪ್ರದೇಶ ಈಗ ಸುರಕ್ಷಿತ
೧೧ ಸೂಕ್ಷ್ಮ ಪ್ರದೇಶಗಳಲ್ಲಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿ
ಮಡಿಕೇರಿ: ಪ್ರತಿ ವರ್ಷ ಮಳೆಗಾಲದಲ್ಲಿ ಪದೇ ಪದೇ ಗುಡ್ಡ ಕುಸಿತದ ಭೀತಿ ಎದುರಿಸುತ್ತಿದ್ದ ಮಡಿಕೇರಿ-ಮಂಗಳೂರು ಹೆದ್ದಾರಿಯ ಕರ್ತೋಜಿಯಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಾಣವಾಗಿದ್ದು, ಈ ಬಾರಿ ಈ ಪ್ರದೇಶ ವಾಹನ ಸಂಚಾರಕ್ಕೆ ಸುರಕ್ಷಿತವಾಗಿರಲಿದೆ.
೨೦೧೮ರ ಬಳಿಕ ಮೈಸೂರು-ಮಡಿಕೇರಿ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ೨೭೫ರ ಸಂಪಾಜೆ ಘಾಟಿ ರಸ್ತೆಯಲ್ಲಿ ನಿರಂತರ ಭೂಕುಸಿತಗಳು ಸಂಭವಿಸುತ್ತಿದ್ದವು. ಇದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಈ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ
ವನ್ನು ನಿರ್ಬಂಧಿಸಲಾಗುತ್ತಿತ್ತು. ಆದರೆ ಈ ಬಾರಿ ವಾಹನ ಸವಾರರು ನಿರಾತಂಕದಿಂದ ಸಂಚರಿಸಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಮಡಿಕೇರಿಯಿಂದ ಸಂಪಾಜೆವರಿಗಿನ ಒಟ್ಟು ೨೯ ಕಿ.ಮೀ. ಅಂತರದಲ್ಲಿ ಮಳೆಗಾಲದಲ್ಲಿ ಭೂಕುಸಿತ ಅಪಾಯವಿರುವ ೧೯ ಸ್ಥಳಗಳಲ್ಲಿ ಮತ್ತು ಬೋಯಿಕೇರಿ ಬಳಿ ೨ ಸ್ಥಳಗಳಲ್ಲಿ ಸೇರಿದಂತೆ ಒಟ್ಟು ೨೧ಕಡೆ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಒಟ್ಟು ೯೪.೦೮ ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ದೊರೆತು, ಇತ್ತೀಚೆಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಕಾಮಗಾರಿಗೆ ಚಾಲನೆ ನೀಡಿದ್ದರು.
ಒಟ್ಟು ೨೧ ತಡೆಗೋಡೆಗಳ ಪೈಕಿ ೧೨ ತಡೆಗೋಡೆಗಳ ಕಾಮಗಾರಿಯನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಆರಂಭಿಸಲಾಯಿತು ಮಳೆಗಾಲಕ್ಕೂ ಮೊದಲುಭೂಕುಸಿತದ ಅಪಾಯವಿರುವ ಸೂಕ್ಷ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸುವುದು ಇಲಾಖೆಯ ಉದ್ದೇಶವಾಗಿತ್ತು. ಅದರಂತೆ ಇದೀಗ ಕರ್ತೋಜಿಯಲ್ಲಿ ನಿಧಾನಗತಿಯ ಮಣ್ಣಿನ ಚಲನೆಯಿಂದ ರಸ್ತೆ ಕಿತ್ತುಬರುತ್ತಿದ್ದ ಮತ್ತು ರಸ್ತೆಯನ್ನು ಭಾರೀ ಪ್ರಮಾಣದಲ್ಲಿ ಆವರಿಸಿಕೊಳ್ಳುವ ಮಣ್ಣಿದ್ದ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಉಳಿದ ೧೧ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಇನ್ನು ಒಂದೂವರೆ-ಎರಡು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ರಸ್ತೆಯ ಕಡೆಗೆ ವಾಲಿಕೊಂಡಂತಿದ್ದ ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ನಿರ್ಮಿಸಲಾಗಿದ್ದ ತಡೆಗೋಡೆಯನ್ನು ಬಹುತೇಕ ತೆರವುಗೊಳಿಸಿ ಇದೀಗ ಮರು ನಿರ್ಮಾಣ ಮಾಡಲಾಗಿದೆ. ಇದರಿಂದ ಈ ಬಾರಿ ಈ ತಡೆಗೋಡೆಯ ಆತಂಕವೂ ಇಲ್ಲದಾಗಿದ್ದು, ಸಂಪಾಜೆವರೆಗಿನ ರಸ್ತೆ ಬಹುತೇಕ ಸುರಕ್ಷಿತವಾಗಿದೆ. ಹೆಚ್ಚು ಮಳೆಯಿಂದ ಘಾಟಿಯ ಬೇರೆ ಭಾಗಗಳಲ್ಲಿ ಭೂಕುಸಿತ, ಗುಡ್ಡ ಕುಸಿತ ಉಂಟಾದರಷ್ಟೇ ಮತ್ತೆ ಸಮಸ್ಯೆಯಾಗಲಿದೆ.
” ೨೧ ತಡೆಗೋಡೆಗಳ ಪೈಕಿ ಮೊದಲ ಹಂತದಲ್ಲಿ ಭೂಕುಸಿತದ ಅಪಾಯವಿದ್ದ ಕರ್ತೋಜಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಇನ್ನೂ ೧೧ ಸೂಕ್ಷ ಪ್ರದೇಶಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಕಡಿಮೆ ಇದ್ದರೆ ಇನ್ನೂ ಒಂದೂವರೆ ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣವಾಗಲಿದ್ದು, ಬಳಿಕ ಉಳಿದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣವಾಗಲಿದೆ.”
ಹನುಮಂತ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ.




