ಹನೂರು: ತಾಲ್ಲೂಕಿನ ಹೂಗ್ಯಂ ವಲಯ ವ್ಯಾಪ್ತಿಯ ಗಾಜನೂರು ಗ್ರಾಮದ ಗೋವಿಂದ ಎಂಬುವವರಿಗೆ ಸೇರಿದ ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟು ಲಕ್ಷಾಂತರ ಬೆಳೆ ಬಾಳುವ ಫಸಲನ್ನು ನಾಶ ಮಾಡಿವೆ. ಈ ಹಿನ್ನೆಲೆಯಲ್ಲಿ ನೊಂದ ರೈತನಿಗೆ ಸೂಕ್ತ ಪರಿಹಾರ ಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಒತ್ತಾಯಿಸಿದ್ದಾರೆ.
ಕಳೆದ ತಿಂಗಳು ಹೂಗ್ಯಂ ವಲಯ ವ್ಯಾಪ್ತಿಯ ಮಿಣ್ಯಂ ಸಮೀಪದ ಮಹದೇಶ್ವರ ದೇವಸ್ಥಾನದ ಸಮೀಪ 5 ಹುಲಿಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ಗಸ್ತು ಸಿಬ್ಬಂದಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕಾಡುಪ್ರಾಣಿಗಳು ನಿರಂತರವಾಗಿ ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶ ಮಾಡುತ್ತಿದೆ.
ಗಾಜನೂರಿನ ಗೋವಿಂದ ಎಂಬುವರ ಜಮೀನಿಗೆ ಮಧ್ಯರಾತ್ರಿ 12 ಗಂಟೆಯ ವೇಳೆಯಲ್ಲಿ ಲಗ್ಗೆ ಇಟ್ಟ ಕಾಡಾನೆಗಳು, ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮತ್ತು ಜೋಳದ ಫಸಲನ್ನು ನಾಶ ಮಾಡಿದೆ. ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಕಾಡಾನೆಗಳು ದಾಳಿ ಮಾಡಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕಳೆದ ಒಂದು ವಾರದಿಂದ ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಈ ಸಮಸ್ಯೆಯಾಗುತ್ತಿದ್ದು, ಕಾಯಂ ಅಧಿಕಾರಿಗಳನ್ನು ನೇಮಕ ಮಾಡುವಂತೆ ಅಮ್ಜದ್ ಖಾನ್ ಒತ್ತಾಯಿಸಿದ್ದಾರೆ.