ಚಾಮರಾಜನಗರ: ಪತ್ನಿ ಗರ್ಭಿಣಿಯಾದಳು ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ದೊಳ್ಳಿಪುರ ಗ್ರಾಮದಲ್ಲಿ ನಡೆದಿದೆ.
ಶುಭಾ ಎಂಬುವವರೇ ಪತಿಯಿಂದಲೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಹೇಶ್ ಎಂಬಾತನೇ ಪತ್ನಿಯನ್ನು ಕೊಲೆ ಮಾಡಿದ ಆರೋಪಿ.
ಜೂನ್.30ರಂದು ಪತ್ನಿಯನ್ನು ಎಚ್.ಡಿ.ಫಾರೆಸ್ಟ್‌ನ ಡೊಳ್ಳಿಪುರದಲ್ಲಿ ಹತ್ಯೆ ಮಾಡಿದ್ದ ಹಂತಕ ಮಹೇಶ್, ಪೊಲೀಸರಿಗೆ ಖುದ್ದು ಕರೆ ಮಾಡಿ ಯಾರೋ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದನು.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹೇಶ್‌ನನ್ನು ವಿಚಾರಣೆ ನಡೆಸುತ್ತಾರೆ. ಈ ವೇಳೆ ಮಹೇಶ್ ಮನಬಂದಂತೆ ಮಾತನಾಡುತ್ತಿದ್ದ. ಅಲ್ಲದೇ ಆತನ ಶರ್ಟ್ ಮೇಲೆ ರಕ್ತದ ಕಲೆ ಇರುವುದು ಕಂಡು ಬಂದಿತ್ತು. ಈ ವೇಳೆ ಅನುಮಾನಗೊಂಡ ಪೊಲೀಸರು ಮಹೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಪತ್ನಿಯನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಪತ್ನಿ ಗರ್ಭಿಣಿಯಾಗಿದ್ದಳು. ನನಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ತಾನು ಗರ್ಭಿಣಿ ಎಂಬ ವಿಚಾರವನ್ನು ಹೇಳಿದ್ದಳು. ಅಲ್ಲದೇ ಮಗುವನ್ನು ಉಳಿಸಿಕೊಳ್ಳಲು ಆಕೆ ಸಾಕಷ್ಟು ಯತ್ನಿಸಿದ್ದಳು. ಇದೇ ಕಾರಣಕ್ಕೆ ಕೋಪಗೊಂಡಿದ್ದ ಮಹೇಶ ವ್ಯವಸ್ಥಿತವಾಗಿ ಸಂಚುರೂಪಿಸಿ ತೋಟದ ಮನೆಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬಳಿಕ ಇದರ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಕಥೆ ಕಟ್ಟಿ, ಆರ್ಥಿಕ ಸಮಸ್ಯೆ ಕಾರಣಕ್ಕೆ ಮಕ್ಕಳಾಗುವುದು ಇಷ್ಟವಿಲ್ಲವೆಂದು ಪತ್ನಿಯನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.