Mysore
23
overcast clouds
Light
Dark

ಭಾರೀ ಮಳೆಗೆ ಮನೆಗಳಿಗೆ ನುಗ್ಗಿದ ಚರಂಡಿ ನೀರು; ದ್ವೀಪದಂತಾದ ಕಂದೇಗಾಲ ಗ್ರಾಮ

ಗುಂಡ್ಲುಪೇಟೆ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ರಸ್ತೆ ಬದಿಯ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ತಾಲ್ಲೂಕಿನ ಪಾರ್ವತಿ ಬೆಟ್ಟದ ಕಂದೇಗಾಲ ಗ್ರಾಮದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು, ಬಡಾವಣೆ ಕೆರೆಯಂತಾಗಿದೆ. ಪರಿಶಿಷ್ಟ ಸಮುದಾಯದ ಬೀದಿಗಳಲ್ಲಿ ನಿರ್ಮಿಸಿರುವ ಚರಂಡಿಯ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ರಾತ್ರಿ ಇಡೀ ಕುಟುಂಬಗಳು ಜಾಗರಣೆ ಮಾಡಿ, ನೀರನ್ನು ಹೊರ ತೆಗೆಯುವಲ್ಲಿ ಹರ ಸಾಹಸ ಪಟ್ಟವು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಇಡೀ ಕುಟುಂಬಗಳು ಜಾಗರಣೆ ಮಾಡುವಂತಾಯಿತು.

ಕೊಡಸೋಗೆ-ಕಂದೇಗಾಲ ಗ್ರಾಮದ ರಸ್ತೆಯು ಭಾರಿ ಮಳೆಯಿಂದಾಗಿ ಹೊಳೆಯಂತಾಗಿತು. ಮಳೆಯ ನೀರಿನ ರಭಸಕ್ಕೆ ಕಸ- ಕಡ್ಡಿ ತ್ಯಾಜ್ಯಗಳನ್ನು ಹೊತ್ತು ತಂದು ಗ್ರಾಮಕ್ಕೆ ಬಿಟ್ಟಿದೆ. ಮಳೆಯ ನೀರು ಸಿದ್ದಪ್ಪಾಜಿ ದೇವಸ್ಥಾನ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ ಮನೆಯಲ್ಲಿನ ದವಸ ಧಾನ್ಯಗಳು, ಟಿವಿ, ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಗ್ರಾಮದ ಕೆಲವು ಜಮೀನುಗಳಲ್ಲಿ ಬಾಳೆಗಿಡ, ವಿವಿಧ ಫಸಲುಗಳು ನಾಶಗೊಂಡಿವೆ.

ಮತ್ತೆ ಮಳೆಯಾದರೆ ಆತಂಕ: ಗ್ರಾಮದ ಸಮೀಪವೇ ಪಾರ್ವತಿ ಬೆಟ್ಟ ಇರುವುದರಿಂದ ಬೆಟ್ಟದ ನೀರು ಇಳಿಜಾರಿಗೆ ಅನುಗುಣವಾಗಿ ಹರಿದುಕೊಂಡು ಬರುವುದರಿಂದ ಸಲೀಸಾಗಿ ಗ್ರಾಮದೊಳಗೆ ನುಗ್ಗುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿರುವುದರಿಂದ ಮತ್ತೆ ಮಳೆ ಬಂದರೆ ಜನರು, ರೈತರಲ್ಲಿ ಒಂದು ಕಡೆ ಖುಷಿಯಾದರೆ, ಮತ್ತೊಂದು ಕಡೆ ಎಲ್ಲಿ ಮನೆಗೆ ನೀರು ನುಗ್ಗುವುದೋ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಚರಂಡಿ ಹೂಳು ತೆಗೆಸಲು ಮನವಿ: ಪಾರ್ವತಿ ಬೆಟ್ಟದ ನೀರು ಗ್ರಾಮಕ್ಕೆ ಹರಿದು ಬರುವುದರಿಂದ ಬೆಟ್ಟದ ರಸ್ತೆ ಬದಿಯಲ್ಲಿ ಚರಂಡಿಯನ್ನು ನಿರ್ಮಿಸುವುದರಿಂದ ನೀರು ಗ್ರಾಮದೊಳಗೆ ನುಗ್ಗದಂತೆ ತಡೆಯಬಹುದಾಗಿದೆ. ಹಾಗೆಯೇ ಕಂದೇಗಾಲ- ಕೊಡಿಸೋಗೆ ಮುಖ್ಯರಸ್ತೆ ಬದಿಯಲ್ಲಿರುವ ಚರಂಡಿಯನ್ನು ಮತ್ತಷ್ಟು ಆಳಕ್ಕೆ ಇಳಿಸಿ ನೀರು ಸಲೀಸಾಗಿ ಕೆರೆ-ಕಟ್ಟೆಗಳಿಗೆ ತಲುಪುವಂತೆ ಮಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಮಳೆಯ ನೀರು ಗ್ರಾಮದೊಳಗೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.