ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ ರೈತ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ.
ಪಾಳ್ಯ ಗ್ರಾಮದ ಸರ್ವೆ ನಂ. 779/A2 ರಲ್ಲಿ 1.83 ಎಕರೆ ಜಮೀನು ಹೊಂದಿರುವ ನಿಂಗರಾಜು ಬಿ ಮತ್ತು ಅವರ ತಾಯಿ ಸಿಗಮ್ಮ ಅವರು ಈ ದಾಳಿಯಿಂದ ತೀವ್ರ ನಷ್ಟ ಅನುಭವಿಸಿದ್ದಾರೆ.
ಜಮೀನಿನಲ್ಲಿ ಅರಿಶಿನ ಬೆಳೆಯ ಜೊತೆಗೆ ನಿರಂತರ ಪರಿಶ್ರಮದಿಂದ 5 ರಿಂದ 6 ವರ್ಷಗಳಿಂದ ಬೆಳೆಸಿದ್ದ ಸುಮಾರು 80 ತೆಂಗಿನ ಮರಗಳಿದ್ದವು. ಆದರೆ ಕಳೆದ ಒಂದು ವಾರದಿಂದ ಸತತವಾಗಿ ಕಾಡಾನೆಗಳು ದಾಳಿ ಮಾಡಿ ಸುಮಾರು 75 ತೆಂಗಿನ ಮರಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದು, ಅರಿಶಿನ ಬೆಳೆಯನ್ನು ಹಾಳು ಮಾಡಿವೆ ಎಂದು ರೈತರು ಆರೋಪಿಸಿದ್ದಾರೆ.
ಬೆಳೆ ಹಾನಿ ಸಂಬಂಧ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಕೊಳ್ಳೇಗಾಲ ಮತ್ತು ಕೊತ್ತನೂರು ವಲಯದ ಅಧಿಕಾರಿಗಳು ಪರಸ್ಪರ ಬೊಟ್ಟು ಮಾಡಿ ತೋರಿಸುತ್ತಿದ್ದು, ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತ ಕುಟುಂಬ ದೂರಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಆನೆ ದಾಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ರೈತ ಕುಟುಂಬವು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯನ್ನು ಒತ್ತಾಯಿಸಿದೆ.




