ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂಟಿಸಲಗವೊಂದು ಪ್ರತಿನಿತ್ಯ ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲೂ ಈ ಬಾರಿ ಉತ್ತಮ ಮುಂಗಾರು ಹಾಗೂ ಹಿಂಗಾರು ಮಳೆಯಾಗಿದ್ದು, ರೈತರು ಖುಷಿ ಖುಷಿಯಿಂದ ಕೃಷಿ ಚಟುವಟಿಕೆಗಳತ್ತ ತೊಡಗಿದ್ದಾರೆ.
ಉತ್ತಮ ಹಿಂಗಾರು ಮಳೆಯಾಗಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಮುಸುಕಿನಜೋಳ, ರಾಗಿ, ತರಕಾರಿಗಳು, ಅವರೆ, ಹುರುಳಿ ಹಾಗೂ ಇನ್ನಿತರ ಫಸಲುಗಳನ್ನು ಬೆಳೆದಿದ್ದಾರೆ. ತಾಲ್ಲೂಕಿನಾದ್ಯಂತ ಉತ್ತಮ ಫಸಲು ಬೆಳೆದು ನಿಂತಿವೆ. ಈ ಸಂತೋಷದ ನಡುವೆ ರೈತರಿಗೆ ಒಂಟಿ ಸಲಗದ ಆತಂಕ ಎದುರಾಗಿದೆ.
ರೈತರ ಜಮೀನುಗಳಿಗೆ ನುಗ್ಗಿ ರಾತ್ರೋರಾತ್ರಿ ಫಸಲುಗಳನ್ನು ಒಂಟಿಸಲಗವೊಂದು ನಾಶ ಮಾಡುತ್ತಿದೆ.
ಬೆಳೆ ನಾಶದಿಂದ ತೀವ್ರ ಕಂಗಲಾಗಿರುವ ರೈತರು ರಾತ್ರಿ ವೇಳೆ ನೀರು ಹಾಯಿಸಲು ಜಮೀನಿಗೆ ತೆರಳಲು ಭಯ ಪಡುತ್ತಿದ್ದಾರೆ.
ಅರಣ್ಯದಿಂದ ಪ್ರತಿನಿತ್ಯ ನಾಡಿಗೆ ಬರುತ್ತಿರುವ ಈ ಒಂಟಿಸಲಗದ ದಾಳಿಯಿಂದ ಜನತೆ ಬೇಸತ್ತು ಹೋಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೆಚ್ಚಿನ ಅನಾಹುತ ಆಗುವುದಕ್ಕಿಂತ ಮುಂಚೆ ಅರಣ್ಯ ಇಲಾಖೆ ಅಧಿಕಾರಿಗಳು ಒಂಟಿಸಲಗದ ಹಾವಳಿಯನ್ನು ತಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಹಾಗೂ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.