ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಜಮೀನಿನಲ್ಲಿದ್ದ ರೈತನೋರ್ವನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಅಂಕಪ್ಪ ಸ್ವಾಮಿ (75) ಗಾಯಗೊಂಡ ರೈತನಾಗಿದ್ದಾನೆ.
ಘಟನೆಯ ವಿವರ: ರೈತ ಅಂಕಪ್ಪ ಸ್ವಾಮಿರವರ ಜಮೀನಿನಲ್ಲಿ ಬೆಳೆದಿರುವ ಹಲಸಿನ ಹಣ್ಣನ್ನು ಕಾಡಾನೆ ತಿನ್ನಲು ಬಂದಿದೆ. ಈ ವೇಳೆ ರೈತ ಕಾಡಾನೆಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಆನೆ ರೈತನ ಮೇಲೆ ದಾಳಿ ಮಾಡಿ ಎತ್ತಿ ಬಿಸಾಡಿದೆ. ಈ ವೇಳೆ ರೈತನ ಕಾಲು ಹಾಗೂ ಕತ್ತಿನ ಮೂಳೆ ಮುರಿದಿದೆ. ತಕ್ಷಣ ಕುಟುಂಬಸ್ಥರು ಖಾಸಗಿ ವಾಹನದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಚಿರತೆ ದಾಳಿ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆ ಕ್ಷೇತ್ರಕ್ಕೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಈ ಘಟನೆ ಮಾಸುವ ಒಂದು ದಿನದ ಅಂತರದಲ್ಲಿ ಕಾಡಾನೆ ದಾಳಿ ನಡೆಸಿರುವುದು ರೈತರ, ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಜಮೀನಿನಲ್ಲಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಗಾಯಗೊಂಡಿರುವ ರೈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸಾ ವೆಚ್ಚವನ್ನು ಇಲಾಖೆ ವತಿಯಿಂದಲೇ ಭರಿಸಲಾಗುವುದು ಹಾಗೂ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಡಿಸಿಎಫ್ ಭಾಸ್ಕರ್ ಹೇಳಿದ್ದಾರೆ.





