ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ಇಂದು ಎರಡನೇ ವರ್ಷದ ಶ್ರೀ ಬಸವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಶ್ರೀ ಬಸವ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಶ್ರೀ ಬಸವೇಶ್ವರ ಜಯಂತಿ ಮೆರವಣಿಗೆಗೆ ಚಾಮರಾಜನಗರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಶ್ರೀ ಚನ್ನಬಸವಸ್ವಾಮಿಗಳು ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಶ್ರೀ ಬಸವೇಶ್ವರ ಮೂರ್ತಿಯ ಮೆರವಣಿಗೆಯಲ್ಲಿ ಅಕ್ಕಪಕ್ಕದ ಊರಿನ ೫೦ಕ್ಕೂ ಹೆಚ್ಚು ನಂದಿಕಂಬಗಳು ಭಾಗಿಯಾಗಿದ್ದವು. ಇಂದು ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಮೆರವಣಿಗೆಯು ಊರ ತುಂಬೆಲ್ಲಾ ಸಾಗಿತು.
ಇನ್ನೂ ಬಸವ ಜಯಂತಿ ಅಂಗವಾಗಿ ಇಂದು ಸಂಜೆ ಎಲ್ಲಾ ಭಕ್ತರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಳಿಕ ನಡೆದ ಶಿವಕಥೆಯಲ್ಲಿ ನೂರಾರು ಭಕ್ತರು ಭಾಗಿಯಾಗಿ ಬಸವೇಶ್ವರರ ಕೃಪೆಗೆ ಪಾತ್ರರಾದರು.