ಚಾಮರಾಜನಗರ : ಆಕ್ಸಿಜನ್ ದುರಂತದ ಸಂತ್ರಸ್ತರಿಗೆ 20 ಲಕ್ಷ ರೂ.ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಜು.15 ರಂದು ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ವಿವಿಧ ಸಂಘಟನೆಗಳ ಮುಖಂಡರ ಹಾಗೂ ಆಕ್ಸಿಜನ್ ದುರಂತದ ಸಂತ್ರಸ್ತರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, 4 ವರ್ಷಗಳ ಹಿಂದೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಚಾಮರಾಜನಗರ ಜಿಲ್ಲೆಯವರಲ್ಲದೆ ಮೈಸೂರು, ಮಂಡ್ಯ ಜಿಲ್ಲೆಯವರು ಸೇರಿದಂತೆ 36 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯ ತನಕ ದುರಂತದ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡಬೇಕು. ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿ ನಿರಂತರ ಹೋರಾಟ ನಡೆದಿದೆ. ಆದರೆ, ಸರ್ಕಾರ ದಿವ್ಯ ನಿರ್ಲಕ್ಷ ವಹಿಸಿದೆ ಎಂದರು.
ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಜೊತೆಯಾಗಿ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿದೆ. ಮೃತರ 36 ಕುಟುಂಬದವರು ಚಾಮರಾಜನಗರ ಬಂದ್‌ನಲ್ಲಿ ಭಾಗವಹಿಸಿ ಸಹಕರಿಸಬೇಕು. ಬಂದ್ ನಡೆಸುವುದು ಒಂದು ಹಂತವಾದರೆ. ಮತ್ತೊಂದು ಹಂತದಲ್ಲಿ ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಯಳಂದೂರು ಬಂದ್ ಮಾಡಿಸೋಣ. ವಿಧಾನಮಂಡಲ ಅಧಿವೇಶನದ ವೇಳೆಗೆ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್ ಮಾತನಾಡಿ, ನಗರದಲ್ಲಿ ಶನಿವಾರ ನಡೆದ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸುವ ಸಮಾವೇಶದಲ್ಲಿ ಆಕ್ಸಿಜನ್ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಬೆಂಬಲ ನೀಡಬೇಕೆಂದು ಕೋರಲಾಯಿತು. ಎಲ್ಲ ಮಸೀದಿಗಳ ಮುಖಂಡರು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಎಸ್‌ಡಿಪಿಐ ಜತೆಗೆ ಜಿಲ್ಲಾ ಮುಸ್ಲಿಂ ಒಕ್ಕೂಟ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ ಎಂದರು.
ನಿಜಧ್ವನಿ ಗೋವಿಂದರಾಜು ಮಾತನಾಡಿ, ಚಾಮರಾಜನಗರದಲ್ಲಿ ಈವರೆಗೆ ನಡೆದಿರುವ ಬಂದ್‌ಗಳು ಯಶಸ್ವಿಯಾಗಿವೆ. ಜು.೧೫ ರಂದು ಕರೆ ನೀಡುವ ಸ್ವಯಂಪ್ರೇರಿತ ಬಂದ್‌ಗೆ ಬೆಂಬಲ ನೀಡುವಂತೆ ನಗರದ ವರ್ತಕರು, ಬಸ್ ಮಾಲೀಕರು, ಅಟೋ ಚಾಲಕರು, ಗಿರಿವಿ ಅಂಗಡಿಗಳ, ಲಾರಿ ಮಾಲೀಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮನವಿ ಸಲ್ಲಿಸಬೇಕಿದೆ ಎಂದರು.
ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿ, ಸಂಘಟನೆಗಳ ಮುಖಂಡರಿಗಿಂತ ಸಂತ್ರಸ್ತರು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡುವುದು ಒಳಿತು. ಸಂತ್ರಸ್ತರ ಸಂಬಂಽಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯಸಿಎಲ್ ಅಧ್ಯಕ್ಷ ಪುಣಜನೂರು ದೊರೆಸ್ವಾಮಿ ಅವರು, ಆಕ್ಸಿಜನ್ ದುರಂತದ ಬಗ್ಗೆ ತನಿಖೆ ನಡೆಸಲು ನೇಮಿಸಿರುವ ನ್ಯಾಯಮೂರ್ತಿ ಕುನ್ಹಾ ಆಯೋಗದಿಂದ ಮಾಹಿತಿ ಕೇಳಿದರೆ ನೀಡುತ್ತಿಲ್ಲ. ಇದನ್ನು ಬಹಿರಂಗ ಮಾಡುವಂತಿಲ್ಲ ಎನ್ನುತ್ತಿದ್ದಾರೆ. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಈ ಬಗ್ಗೆ ಮಾತನಾಡುತ್ತಲೇ ಇಲ್ಲ ಎಂದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಮುಖಂಡರಾದ ನಮ್ಮನೆ ಪ್ರಶಾಂತ್, ಸುರೇಶ್ ವಾಜಪೇಯಿ, ಪತ್ರಕರ್ತರಾದ ಎ.ಡಿ.ಸಿಲ್ವಾ, ದಸಂಸ ಮುಖಂಡರಾದ ದೊಡ್ಡಿಂದುವಾಡಿ ಸಿದ್ದರಾಜು, ಬೆಳ್ಳಿಯಪ್ಪ, ನಗರಸಭೆ ಸದಸ್ಯ ಮಹಮ್ಮದ್ ಅಮಿಕ್, ಸಂತ್ರಸ್ತರಾದ ಸವಿತಾ, ನಾಗರತ್ನ ಇತರರಿದ್ದರು.



