ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ವಿಭಿನ್ನ ಹಾಗೂ ವಿಶೇಷ ರೀತಿಯ ಚಿರತೆಯೊಂದು ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜನಪ್ರಿಯ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಭಿನ್ನ ಹಾಗೂ ವಿಶೇಷ ರೀತಿಯ ಚಿರತೆ ಕ್ಯಾಮರಾಗೆ ಸೆರೆಯಾಗಿದ್ದು, ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣದ್ದಾಗಿದೆ.
ಪ್ರವಾಸಿಗರ ಸಫಾರಿ ವೇಳೆ ಈ ಚಿರತೆ ಸೆರೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿರತೆಯ ಫೋಟೋ ಫುಲ್ ವೈರಲ್ ಆಗಿದೆ.
ಚಿರತೆಯ ಎರಡು ಕಣ್ಣುಗಳು ಕೂಡ ಬೇರೆ ಬಣ್ಣದ್ದಾಗಿದ್ದು, ಚಿರತೆಯ ಎಡಗಣ್ಣು ಕಂದು ಬಣ್ಣದ್ದಾಗಿದೆ. ಹಾಗೆಯೇ ಬಲಗಣ್ಣು ನೀಲಿ ಹಸಿರಿನಿಂದ ಕೂಡಿದೆ. ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳನ್ನು ಹೊಂದಿರುವ ಚಿರತೆ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಿರುವ ಬಂಡೀಪುರ ಅರಣ್ಯಕ್ಕೆ ಪ್ರವಾಸಿಗರ ಸಂಖ್ಯೆ ಕೂಡ ಜಾಸ್ತಿಯಾಗಿದ್ದು, ಬಂಡೀಪುರ ಆದಾಯದಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.