Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

2 ದಿನಗಳಲ್ಲಿ 3 ಹುಲಿ ಮರಿಗಳು ಪತ್ತೆ, ರಕ್ಷಣೆ ; ತಾಯಿ ಹುಲಿ ಪತ್ತೆಗೆ ಮುಂದುವರಿದ ಕೂಂಬಿಂಗ್

ಚಾಮರಾಜನಗರ : ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿರುವ ಪುಣಜನೂರು ವನ್ಯಜೀವಿ ವಲಯದಲ್ಲಿ 2 ದಿನಗಳಲ್ಲಿ 3 ಹುಲಿ ಮರಿಗಳು ಪತ್ತೆಯಾಗಿದ್ದು ಅವುಗಳನ್ನು ರಕ್ಷಣೆ ಮಾಡಲಾಗಿದೆ. ಆದರೆ, ಇನ್ನೂ, ತಾಯಿ ಹುಲಿ ಕಾಣಿಸಿಕೊಂಡಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ ಚಾಮರಾಜನಗರ ತಾಲ್ಲೂಕಿನ ಪುಣಜನೂರು-ಬೇಡಗುಳಿ ಸಂಪರ್ಕಿಸುವ ರಸ್ತೆಯಲ್ಲಿ ರಾತ್ರಿ ಗಸ್ತು ಮಾಡುವಾಗ ಬಜೇಬಾವಿ ಅರಣ್ಯ ಪ್ರದೇಶದಲ್ಲಿ 2 ಹುಲಿ ಮರಿಗಳು ಸೋಮವಾರ ಸಹಜವಾಗಿ ಕಾಣಿಸಿಕೊಂಡಿವೆ. ನಂತರ ಸಿಬ್ಬಂದಿ ಕಪ್ಪಿಣ ಕಣಿವೆ ಅರಣ್ಯ ಪ್ರದೇಶದವರೆಗೂ ಗಸ್ತು ಮಾಡಿಕೊಂಡು ಮರಳಿ ಪುಣಜನೂರು ಕಡೆಗೆ ವಾಪಸ್ಸು ಬರುವಾಗ ಅದೇ ಎರಡು ಹುಲಿ ಮರಿಗಳು ಅಲ್ಲೇ ಎದುರಾಗಿವೆ.

ಸಂಶಯ ಬಂದು ಸುತ್ತಲೂ ಪರಿಶೀಲಿಸಿ ನೋಡಿದಾಗ ತಾಯಿ ಹುಲಿ ಇರುವಿಕೆಯ ಬಗ್ಗೆ ಯಾವುದೇ ಸಂಕೇತ ಸಿಬ್ಬಂದಿಗೆ ಕಂಡು ಬರಲಿಲ್ಲ. ಹೀಗಾಗಿ, ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಕ್ಯಾಮೆರಾ ಟ್ರಾಪ್‌ಗಳನ್ನು ಅಳವಡಿಸಿ, ತಾಯಿ ಹುಲಿಯ ಚಲನವಲನಗಳ ಮೇಲೆ ನಿಗಾವಹಿಸಲು ರಾತ್ರಿ ಕಾವಲು ಸಿಬ್ಬಂದಿ ನಿಯೋಜಿಸಲಾಗಿದೆ. ಮಂಗಳವಾರ ಇಲಾಖಾ ಸಿಬ್ಬಂದಿ ತಾಯಿ ಹುಲಿಯನ್ನು ಪತ್ತೆ ಮಾಡಲು ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಮತ್ತೊಂದು ಹುಲಿ ಮರಿ ಪತ್ತೆಯಾಗಿದೆ.

ಇದನ್ನೂ ಓದಿ:-ಮೈಸೂರು | ಶ್ರೀಮಂತರ ಸೋಗಿನಲ್ಲಿ ಪೀಠೋಪಕರಣ ಖರೀದಿಗೆ ಬಂದ ಕುಟುಂಬ : ಮಳಿಗೆ ಮಾಲೀಕನಿಗೆ 99.65 ಲಕ್ಷ ರೂ. ವಂಚನೆ

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ (ಬಿಆರ್ ಟಿ) ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಾದ ಶ್ರೀಪತಿ ಅವರ ಮಾರ್ಗದರ್ಶನದಂತೆ ಮೂರು ಹುಲಿ ಮರಿಗಳನ್ನು ಇಲಾಖಾ ಪಶುವೈದ್ಯರ ಮೇಲುಸ್ತುವಾರಿಯಲ್ಲಿ, ಎನ್ ಟಿಸಿಎ ಮಾರ್ಗಸೂಚಿಯಂತೆ ರಕ್ಷಣೆ ನಿಗಾ ವಹಿಸಲಾಗಿದೆ ಎಂದು ಚಾಮರಾಜನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

Tags:
error: Content is protected !!