ಮೈಸೂರು: ಮಕ್ಕಳು ಸುರಕ್ಷಿತವಾಗಿರುವ ಜಾಗದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿರುವ ಚಿತ್ರದುರ್ಗ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಗರ ಪೊಲೀಸ ಆಯುಕ್ತರಿಗೆ ದೂರು ನೀಡಿದರೂ, ಇನ್ನು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಹೇಳಿದ್ದಾರೆ.
ನ.೩೦ರಂದು ಒಡನಾಡಿ ಸೇವಾ ಸಂಸ್ಥೆಯ ಮಡಿಲು ಪುರ್ನವಸತಿ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಮಫ್ತಿಯಲ್ಲಿ ನುಗ್ಗಿರುವ ೧೦ ಮಂದಿ ಚಿತ್ರದುರ್ಗದ ಪೊಲೀಸರು ಸಂಸ್ಥೆಯೊಳಗೆ ಹುಡುಕಾಟ ನಡೆಸಿದ್ದರು. ಈ ಸಂಬಂಧ ಅವರ ಮೇಲೆ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ಕಳುಹಿಸಲಾಗಿತ್ತು. ಇದಕ್ಕೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬುಧವಾರ ಹೀಗೆ ಮಾಡಿದ ಚಿತ್ರದುರ್ಗ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀಡಿದ ದೂರನ್ನು ಪರಿಗಣಿಸಿ, ಎಫ್‌ಐಆರ್ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಠಾಣೆಗೆ ತಿಳಿಸಬೇಕೆಂದು ಕೋರಲಾಗಿದೆ. ಇದನ್ನು ಪರಿಗಣಿಸದೆ ಇದ್ದರೆ, ನಾವೇ ಕೋರ್ಟ್‌ನಲ್ಲಿ ಪಿಸಿಆರ್ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ‘ ಯಾವುದೇ ಪ್ರಕರಣದ ಎಫ್‌ಐಆರ್ ಮಾಡಬೇಕಾದರೂ, ಕಾನೂನು ವಿಧಾನಗಳು ಇರುತ್ತವೆ. ಹಾಗಾಗಿ, ಸೂಕ್ತ ರೀತಿಯಲ್ಲಿ ವಿಚಾರಣೆ ಮತ್ತು ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಠಾಣೆಗೆ ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.