35 ಲಕ್ಷ ರೂ.ಗೆ ಬೇಡಿಕೆ ಇಟ್ಟು ಪಡೆದ ಅಪಹರಣಕಾರರು!
ಮೈಸೂರು: ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಕೇಂದ್ರದಲ್ಲಿ ಕಾರ್ಖಾನೆಯ ಮಾಲಿಕ ಹಾಗೂ ಪುತ್ರನ ಅಪಹರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂರು ತಂಡವನ್ನು ರಚಿಸಿದ್ದಾರೆ.
ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆದ ಅಪಹರಣದ ಕುರಿತು ಹರ್ಷ ಇಂಫಕ್ಟ್ ಕಾರ್ಖಾನೆಯ ಆವರಣದಿಂದ ಮಾಲೀಕ ದೀಪಕ್‌ಕುಮಾರ್ ಕೆಡಿಯಾ ಹಾಗೂ ಅವರ ಪುತ್ರ ಹರ್ಷಕುಮಾರ್ ಕೆಡಿಯಾ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಈ ಸಂಬಂದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಿಸಿಕೊಂಡ ನಂಜನಗೂಡು ಡಿವೈಎಸ್‌ಪಿ ಗೊವೀಂದರಾಜ ಹಾಗೂ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಅಪಹರಣಕಾರರನ್ನು ಪತ್ತೆ ಮಾಡಲು ತಂಡ ರಚಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸೋಮವಾರ ರಾತ್ರಿ ಲಲಿತಾದ್ರಿ ಪುರದ ಬಳಿ ಅಪಹರಣಕ್ಕೊಳಗಾದ ಉದ್ಯಮಿ ದೀಪಕ್ ಹಾಗೂ ಅವರ ಪುತ್ರ ಹರ್ಷ ಅವರನ್ನು ಪತ್ತೆಹಚ್ಚಿ ಕರೆತರಲು ಯಶಸ್ವಿಯಾಗಿದ್ದಾರೆ.
ಇದೀಗ ಉದ್ಯಮಿ ಹಾಗೂ ಆತನ ಮಗನನ್ನು ಅಪಹರಣ ಮಾಡಿದ ಆರೋಪಿಗಳ ಪತ್ತೆಗಾಗಿ ವೃತ್ತ ನಿರೀಕ್ಷಕ ಶಿವನಂಜ ಶೆಟ್ಟರ ನೇತೃತ್ವದಲ್ಲಿ ವಿಶೇಷ ಪೊಲೀಸರ ತಂಡ ರಚಿಸಲಾಗಿದೆ. ಇದರ ಜೊತೆಗೆ ಜಿಲ್ಲೆಯ ಇಬ್ಬರು ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಮತ್ತೆರಡು ತಂಡಗಳನ್ನು ರಚಿಸಲಾಗಿದೆ.
ಆರೋಪಿಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸಿರುವ ಪೊಲೀಸರ ತಂಡ ಬೆಂಗಳೂರು, ಕೇರಳ ಸೇರಿದಂತೆ ವಿವಿದೆಡೆಗೆ ತೆರಳಿದ್ದಾರೆ. ಮತ್ತೊಂದೆಡೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ತಂತ್ರಜ್ಞಾನದ ಮೊರೆಹೋಗಿದ್ದಾರೆ. ಇದಕ್ಕಾಗಿ ಒಂದು ತಂಡ ಶ್ರಮಿಸುತ್ತಿದೆ.
ಈ ಸಂಬಂದ ಕಾರ್ಖಾನೆಯ ಲಾರಿ ಚಾಲಕ ಹಾಗೂ ಘಟನೆಯನ್ನು ಕಣ್ಣಾರೆ ಕಂಡಿದ್ದ ಮಣಿಕಂಠಸ್ವಾಮಿ ಹೇಳಿಕೆ ನೀಡಿದ್ದು, ಸೋಮವಾರ ಮದ್ಯಾಹ್ನ 12.45 ರ ಸಮುಂದಲ್ಲಿ ಉದ್ಯಮಿ ದೀಪಕ್, ಹರ್ಷ, ಸೆಕ್ಯುರಿಟಿ ಗಾರ್ಡ್ ಪ್ರವೀಣ್, ಲೋಡರ್ ಸಂಜಯ್, ಮತ್ತೊಬ್ಬ ಸಂಜಯ್ ಎಂಬವರು ಇದ್ದೆವು.
ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ವ್ಯಕ್ತಿಗಳು ನಮಗೆ ಚಾಕು ತೋರಿಸಿ ನಾಲ್ವರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿದರು. ನಂತರ ಅವರುಗಳು ಮಾರುತಿ ಜೆನ್ ಕಾರಿನಲ್ಲಿ ಮಾಲೀಕರು ಹಾಗೂ ಅವರ ಮಗನನ್ನು ಅಪಹರಿಸಿದರು. ಎಂದು ಹೇಳಿಕೆ ನೀಡಿದ್ದಾರೆ.
35 ಲಕ್ಷ ರೂ.ನೀಡಿದೆ: ಇದೇ ವೇಳೆ ಉದ್ಯಮಿ ದೀಪಕ್ ಪೊಲೀಸರ ಬಳಿ ಹೇಳಿಕೆ ನೀಡಿದ್ದು, ಅಪಹರಣಕಾರರು ನನ್ನ ಬಿಡುಗಡೆಗೆ 35 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನನ್ನ ಕುಟುಂಬದವರಿಗೆ ಮಾಹಿತಿ ನೀಡಿ ಹಣವನ್ನು ತರವಂತೆ ಹೇಳಿದೆ. ನಂತರ ಅವರಿಗೆ ಹಣ ನೀಡಲಾಯಿತು. ನಂತರ ಅವರು ನನ್ನನ್ನು ಲಲಿತಾದ್ರಿಪುರದ ಬಳಿ ಬಿಟ್ಟು ಹೋದರು ಎಂದು ತಿಳಿಸಿದ್ದಾರೆ.