Mysore
27
broken clouds
Light
Dark

ಶೇ.10 ಮೀಸಲಾತಿಯಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆ : ನಟ ಚೇತನ್‌ ಅಹಿಂಸಾ ಅಸಮಾಧಾನ

ಚಿತ್ರನಟ ಚೇತನದ ಅಹಿಂಸಾ ಅಸಮಾಧಾನ

ಚಾಮರಾಜನಗರ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.೧೦ ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದೆ. ಆದ್ದರಿಂದ ಇದರ ವಿರುದ್ದ ಶೋಷಿತರು ಹೋರಾಟ ನಡೆಸಬೇಕಾಗಿದೆ ಎಂದು ಚೇತನ್ ಅಹಿಂಸಾ ಸಲಹೆ ನೀಡಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಬಹುಜನ್ ವಾಲೆಂಟಿಯರ್ ಫೋರ್ಸ್ ಜಿಲ್ಲಾ ಘಟಕದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೬ನೇ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮೀಸಲಾತಿ ಪ್ರಾತಿನಿಧ್ಯವೋ-ಆರ್ಥಿಕ ಸಬಲೀಕರಣವೋ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
೮ ಲಕ್ಷ ರೂ. ಆದಾಯದೊಳಗಿನವರು ಶೇ.೧೦ ಮೀಸಲಾತಿಗೆ ಅರ್ಹರು ಎಂದು ಹೇಳಲಾಗಿದೆ. ಈ ಮಾನದಂಡ ಸರಿಯೇ ಎಂದು ಪ್ರಶ್ನಿಸಿದ ಅವರು, ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣಕ್ಕೆ ಆರ್ಥಿಕ ನೀತಿಗಳನ್ನು ರೂಪಿಸಲಿ. ಅದನ್ನು ಬಿಟ್ಟು ಮೀಸಲಾತಿ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿಯು ಪ್ರಾತಿನಿಧ್ಯವೇ ಹೊರತು ಆರ್ಥಿಕ ಸಬಲೀಕರಣ ಅಲ್ಲವೇ ಅಲ್ಲ. ಶೋಷಿತ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ರಾಜಕೀಯ, ಭೌಗೋಳಿಕವಾಗಿ ಪ್ರಾಧ್ಯಾನ್ಯತೆ ನೀಡುವ ಪ್ರಯತ್ನವೇ ಮೀಸಲಾತಿ ಎಂದು ತಿಳಿಸಿದರು.
ಪ್ರಸನ್ನಾನಂದ ಶ್ರೀಗಳ ಹೋರಾಟ ಹಾಗೂ ನಾಗಮೋಹನ್ ದಾಸ್ ವರದಿಯಂತೆ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡಿದೆ ಹೊರತು ರಾಜಕೀಯ ಲಾಭವಿಲ್ಲ. ಒಕ್ಕಲಿಗರು ಮೀಸಲಾತಿ ಹೆಚ್ಚಿಸಿ ಎಂದು ಹೋರಾಟಕ್ಕೆ ಸಜ್ಜಾಗಿರುವುದು ಸಮಂಜಸವಾಗಿದೆ. ಪಂಚಮಸಾಲಿಗಳು ೨ಎಗೆ ಸೇರಿಸಬೇಕು ಎಂದು ಹೋರಾಟ ಮಾಡುವುದು ಸ್ವಾರ್ಥದಿಂದ ಕೂಡಿದೆ ಎಂದು ತಿಳಿಸಿದರು.
ನ್ಯಾ.ಸದಾಶಿವ ಆಯೋಗದ ಶಿಫಾರಸ್ಸಿನಂತೆ ಒಳಮೀಸಲಾತಿ ನ್ಯಾಯಯುತವಾಗಿದೆ. ಸರೋಜಿನಿ ಮಹಿಷಿ ವರದಿಯಂತೆ ಕನ್ನಡಗರಿಗೆ ಉದ್ಯೋಗಾವಕಾಶ ನೀಡಬೇಕು. ಶಿಕ್ಷಣ, ಉದ್ಯೋಗದಲ್ಲಿ ಶೋಷಿತರಿಗೆ ಸಂಪೂರ್ಣ ನ್ಯಾಯ ಸಿಗುವ ತನಕ ಮೀಸಲಾತಿ ಇರಲೇಬೇಕು. ಜನಸಂಖ್ಯೆ ಆಧಾರವಾಗಿ ಮತ್ತು ಖಾಸಗಿ ರಂಗದಲ್ಲೂ ಮೀಸಲಾತಿ ನೀಡುವುದು ನ್ಯಾಯವಾಗಿದೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ