ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ ದರವನ್ನು ಮತ್ತೆ 35 ಮೂಲಾಂಕಗಳಷ್ಟು ಏರಿಕೆ ಮಾಡಿದ್ದು ಶೇಕಡ 6.25ಕ್ಕೆ ತಲುಪಿದೆ. ಇದರೊಂದಿಗೆ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲ ಮತ್ತೆ ಏರಿಕೆಯಾಗಲಿದೆ. ಈ ಹಿಂದೆ ನಾಲ್ಕು ಬಾರಿ ಆರ್ಬಿಐ ರೆಪೋ ದರ ಏರಿಸಿರುವ ಆರ್‌ಬಿ ಐ ಈಗ ಸತತ ಐದನೇ ಬಾರಿಗೆ ಬಡ್ಡಿ ದರ ಏರಿಸಿದೆ.
ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. 2022ರ ಏಪ್ರಿಲ್ ತನಕ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದ ಆರ್ಬಿಐ ಮೇ ತಿಂಗಳಿನಲ್ಲಿ ರೆಪೋ ದರವನ್ನು ಶೇ.೦.40ರಷ್ಟು ಏರಿಕೆ ಮಾಡಿತ್ತು. ಜೂನ್ ತಿಂಗಳಿನಲ್ಲಿಶೇ. 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್ನಲ್ಲಿ ಮತ್ತೆ 50 ಮೂಲಾಂಕದಷ್ಟು ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿತ್ತು.
ರೆಪೋ ದರ ಎಂದರೇನು?
ಆರ್ಬಿಐ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.
ಡಿಸೆಂಬರ್ 5ರಿಂದ 7ರವರೆಗೆ ಹಣಕಾಸು ನೀತಿ ನಿರೂಪಣಾ ಸಮಿತಿಯ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಆರ್ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ.
ಹೆಚ್ಚಲಿದೆ ಇಎಂಐ ಹೊರೆ
ಆರ್ಬಿಐ ರೆಪೋ ದರಗಳನ್ನು ಏರಿಕೆ ಮಾಡಿರುವುದರಿಂದ ಗೃಹ ಸಾಲ, ಕಾರಿನ ಸಾಲ ಸೆರಿದಂತೆ ಇತರ ಸಾಲಗಳ ಇಎಂಐ ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದೆ. ಆರ್ಬಿಐ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳೂ ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತವೆ. ಇದರಿಂದ ಸಾಲಗಳ ಮಾಸಿಕ ಕಂತು ಹೆಚ್ಚಲಿದೆ.