ಇತಿಹಾಸದಲ್ಲಿಯೇ ಮೊದಲ ಬಾರಿಗೆ ೧೩.೪ ಲಕ್ಷ ಕೋಟಿ ರೂ. ಸಂಪನ್ಮೂಲ ಹೂಡಿಕೆಗೆ ಮೀಸಲು
-ಪ್ರೊ.ಆರ್.ಎಂ.ಚಿಂತಾಮಣಿ
ಕಳೆದ ವಾರ ಕೇಂದ್ರ ಅರ್ಥ ಸಚಿವರು ಎರಡು ಮಹತ್ವದ ದಾಖಲೆಗಳನ್ನು ಮಂಡಿಸಿದ್ದಾರೆ. ಒಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅನಂತ ನಾಗೇಶ್ವರನ್ ಮಾರ್ಗದರ್ಶನದಲ್ಲಿ ಹಣಕಾಸು ಇಲಾಖೆಯಲ್ಲಿ ತಯಾರಾದ ‡2022&2023ರ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ. ಎರಡನೆಯದು ಬಹು ನಿರೀಕ್ಷಿತ 2023&2024ರ ಮುಂಗಡ ಪತ್ರ. ಆರ್ಥಿಕ ಸಮೀಕ್ಷೆಯಲ್ಲಿ ಹಾಲಿ ವರ್ಷದಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಸುಸ್ಥಿರಗೊಳ್ಳುತ್ತಿದೆ ಎಂದು ತೆರಿಗೆ ಸಂಗ್ರಹ ಹಿಂದಿನ ವರ್ಷಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇತರ ದೇಶಗಳೊಡನೆ ಹೋಲಿಸಿದರೆ ನಮ್ಮ ಸ್ಥಿತಿ ಉತ್ತಮವಾಗಿದ್ದು, ಜಿಡಿಪಿ ಬೆಳವಣಿಗೆ ಶೇ.7ರಷ್ಟೆಂದು ಅಂದಾಜಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿನ್ನಡೆ ಇರುವುದರಿಂದ 2023&24 ಸಮೀಕ್ಷೆ ಬಜೆಟ್ಗೆ ಮೂಲವಸ್ತುಗಳನ್ನು ಒದಗಿಸುವುದಲ್ಲದೆ ಮುನ್ನೋಟಗಳನ್ನೂ ಕೊಟ್ಟಿರುತ್ತದೆ. ಅರ್ಥಮಂತ್ರಿಗಳು ಅವುಗಳನ್ನು ಪರಿಗಣಿಸಬಹುದು. ಹೀಗೆ ಇರಬೇಕೆಂದು ಹೇಳುವಂತಿಲ್ಲ.
ಮರುದಿನ ಮಂಡಿಸಿದ ಅಮೃತಕಾಲ ಬಜೆಟ್ ಮಹತ್ವಾಕಾಂಕ್ಷೆಯದಾ ಗಿದ್ದು, ಅಮೃತವನ್ನೇ ಕೊಡುವ ಭರವಸೆಯನ್ನು ಪ್ರಕಟಿಸಿದೆ. ನಿರ್ಮಲಾ ಸೀತಾರಾಮನ್ರವರ ಒಂದೂವರೆ ಗಂಟೆಯ ಬಜೆಟ್ ಭಾಷಣದಲ್ಲಿ ಮೊದಲಿನ 45 ನಿಮಿಷಗಳನ್ನು ಈ ಒಂಭತ್ತು ವರ್ಷಗಳ ಈ ಸರ್ಕಾರದ ಸಾಧನೆಗಳನ್ನು ವಿವರಿಸುವುದಲ್ಲದೆ ಅವುಗಳನ್ನು ಹಿಂದಿನ ಸರ್ಕಾರದೊಡನೆ (ಯುಪಿಎ ಸರ್ಕಾರ) ಹೋಲಿಸುವುದರಲ್ಲೇ ಕಳೆಯಲಾಯಿತು. ನಂತರ ಬಜೆಟ್ ಭಾಗವಾಗಿ ದೊಡ್ಡ ಸಂಖ್ಯೆಯಲ್ಲಿ ನಿಽಗಳನ್ನು ಮತ್ತು ಯೋಜನೆಗಳನ್ನು ಪ್ರಧಾನ ಮಂತ್ರಿಗಳ ಹೆಸರಿನಲ್ಲೇ ಘೋಷಿಸಲಾಯಿತು. ಬಹುತೇಕ ಎಲ್ಲ ಹೆಸರುಗಳು ಸಂಸ್ಕೃತ ಮತ್ತು ಹಿಂದಿಮಯ. ಜನ ಕಲ್ಯಾಣಕ್ಕೆ ಇವೆಲ್ಲವೂ ಎನ್ನುವುದೂ ಸತ್ಯ.
ಬಜೆಟ್ ಮುಖ್ಯಾಂಶಗಳು
2023&2024ರಲ್ಲಿ ಸರ್ಕಾರ ಒಟ್ಟು 45,03,097 ಕೋಟಿ ರೂ. ಖರ್ಚು ಮಾಡುವ ಅಂದಾಜಿದೆ. ಇದು ಈ ವರ್ಷದ ಪರಿಷ್ಕೃತ ಅಂದಾಜಿಗಿಂತ 31,5,864 ಕೋಟಿ ರೂ. ಹೆಚ್ಚು. ಇದರಲ್ಲಿ ರಾಜಸ್ವ ಖಾತೆಯಲ್ಲಿ 35,02,136 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ ೧೦,೦೦,೯೬೧ ಕೋಟಿ ರೂ. ಖರ್ಚಾಗಲಿದೆ ಎನ್ನಲಾಗಿದೆ. ಈ ಖರ್ಚಿಗಾಗಿ ತೆರಿಗೆ ಆದಾಯದಿಂದ 26,32,281 ಕೋಟಿ ರೂ. ತೆರಿಗೇತರ ಆದಾಯದಿಂದ 3.01.650 ಕೋಟಿ ರೂ. (ರಾಜಸ್ವ ಖಾತೆ) ಮತ್ತು 17,86,816 ಕೋಟಿ ರೂ. ಸಾಲ ಮತ್ತು ಇತರ ಜವಾಬ್ದಾರಿಗಳೂ ಸೇರಿ ಬಂಡವಾಳ ಖಾತೆಯಿಂದ 18,70,816 ಕೋಟಿ ರೂ. ಸಂಪನ್ನೂಲಗಳನ್ನು ಕ್ರೋಢೀಕರಿಸಲಾಗುವು ದು. ಸಾಲ ಮತ್ತು ಇತರ ಜವಾಬ್ದಾರಿಗಳೇ ಕೋಶೀಯ ಕೊರತೆಯಾಗಿದ್ದು ಅದನ್ನು ನಾಮಿನಲ್ ಜಿಡಿಪಿಯ ಶೇ.5.6ಕ್ಕೆ ಇಳಿಸಲಾಗಿದ್ದು, 2025&-26 ಹೊತ್ತಿಗೆ ಶೇ.4.5 ಮಟ್ಟಕ್ಕೆ ತರಲಾಗುವುದೆಂದು ಮಾರ್ಗಸೂಚಿ ಕೊಟ್ಟಿದ್ದಾರೆ.
ಅರ್ಥಮಂತ್ರಿಗಳೇ ಹೇಳಿದಂತೆ ಎಲ್ಲರ ಒಳಗೊಳ್ಳುವಿಕೆ ಎಲ್ಲ ಪ್ರದೇಶಗಳ ಅಭಿವೃದ್ಧಿ, ಎಲ್ಲ ರಂಗಗಳಲ್ಲೂ ತಂತ್ರಜ್ಞಾನ (ಡಿಜಿಟಲೈಜೇಶನ್) ಅಳವಡಿಕೆ, ಮೂಲ ಸೌಲಭ್ಯಗಳು, ಹಸಿರು ಅಭಿವೃದ್ಧಿ, ಯುವ ಶಕ್ತಿಯ ಸಮರ್ಥ ಬಳಕೆ ಮತ್ತು ಸಾಮರ್ಥ್ಯ ಗುರುತಿಸಿ ಬಳಸುವುದು, ಹೀಗೆ ಏಳು ಆದ್ಯತೆಗಳು ಸರ್ಕಾರದ ಮುಂದೆ ಇದ್ದುದರಿಂದ ಇದು “ಸಪ್ತಋಷಿ ಬಜೆಟ್’ ಇವುಗಳನ್ನು ಸಾಧಿಸಲು ಸರ್ಕಾರ ಈ ವರ್ಷ ಇತಿಹಾಸದಲ್ಲಿಯೇ ಮೊದಲ ಬಾರಿಗೆ 13.4 ಲಕ್ಷ ಕೋಟಿ ರೂ. ಸಂಪನ್ಮೂಲವನ್ನು ಹೂಡಿಕೆಗಾಗಿ ಇಟ್ಟಿದೆ. ಇದರಲ್ಲಿ 10 ಲಕ್ಷ ಕೋಟಿ ರೂ.ಗಳನ್ನು ತಾನು ಹೂಡಿಕೆ ಮಾಡುತ್ತಿದ್ದು ಉಳಿದ 3.4 ಲಕ್ಷ ಕೋಟಿ ರೂ. ರಾಜ್ಯಗಳಿಗೆ ಆಸ್ತಿ ನಿರ್ಮಾಣಕ್ಕಾಗಿ ಅನುದಾನ ಕೊಡಲಿದೆ. ಆದ್ದರಿಂದ ಇದನ್ನು ಹೂಡಿಕೆ ಪ್ರಧಾನ ಬಜೆಟ್ ಅನ್ನಲೂಬಹುದು. ಬಹುತೇಕ ಇದೆಲ್ಲವೂ ಸಾಲದಿಂದಲೇ ನಡೆಯುತ್ತದೆ ಎಂದರೂ ತಪ್ಪಿಲ್ಲ.
ನಿವ್ವಳ ರಾಜಸ್ವ ಕೊರತೆಯೇ ೪,೯೯,೮೬೭ ರೂ. ಇರುವಾಗ ಇನ್ನು ಹೂಡಿಕೆಗಳಿಗಾಗಿ ಸರ್ಕಾರದ ಉಳಿತಾಯಗಳನ್ನು ಹೂಡಿಕೆಗಳಿಗಾಗಿ ನಿರೀಕ್ಷಿಸುವುದು ತಪ್ಪಾದೀತು. ರಾಜಸ್ವ ಖಾತೆ ಉಳಿತಾಯದಲ್ಲಿ ಇರುವಂತೆ ಕ್ರಮಗಳನ್ನು ಕೈಗೊಳ್ಳಬೇಕೆಂಬ 2023ರ ಕೋಶೀಯ ಶಿಸ್ತು ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಉದ್ದೇಶವನ್ನು ಸರ್ಕಾರಗಳು ಮರೆತಂತಿದೆ.
ತೆರಿಗೆಗಳ ವಿಷಯಕ್ಕೆ ಬಂದರೆ ಚಿನ್ನ, ಬೆಳ್ಳಿ ಮತ್ತು ವಜ್ರಗಳ ಆಯಾತ ಸುಂಕ ಹೆಚ್ಚಿಸಲಾಗಿದೆ. ಸಿಗರೇಟು ಮೇಲಿನ ತೆರಿಗೆ ಹೆಚ್ಚಾಗಿದೆ. ಕೆಲವು ಅವಶ್ಯಕ ಕೈಗಾರಿಕಾ ಕಚ್ಚಾ ವಸ್ತುಗಳ ಆಯಾತ ಸುಂಕ ಕಡಿತವಾಗಿದೆ. ಕಂಪೆನಿ ಆದಾಯ ತೆರಿಗೆಯಲ್ಲಿ ಹಲವು ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. ಸಹಕಾರ ಸಂಘಗಳಿಗೆ ಹಲವು ತೆರಿಗೆ ರಿಯಾಯಿತಿಗಳನ್ನು ಕೊಡಲಾಗಿದ್ದು, ಸಾಲ ಮತ್ತು ಗ್ಯಾರಂಟಿ ವಿಷಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಮತ್ತು ಸ್ಟಾರ್ಟ್ ಅಪ್ಗಳಿಗೆ ಹೆಚ್ಚು ಸವಲತ್ತುಗಳನ್ನು ಘೋಷಿಸಲಾಗಿದೆ. ವ್ಯಕ್ತಿ ಆದಾಯ ತೆರಿಗೆ ವಿಷಯದಲ್ಲಿ ಹಳೆಯ ವಿಧಾನವನ್ನು ಬದಲಾಯಿಸಿದೇ ಹೊಸ ವಿಧಾನದಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ೩ ಲಕ್ಷಕ್ಕೆ ಹೆಚ್ಚಿಸಿದ್ದಲ್ಲದೆ ೫೦,೦೦೦ ರೂ. ಸ್ಟ್ರಾಂಡರ್ಡ್ ಡಿಡಕ್ಷನ್ ಸೌಲಭ್ಯವನ್ನು (ನೌಕರರು ಮತ್ತು ಪೆನ್ಷನ್ದಾರರಿಗೆ) ಒದಗಿಸಲಾಗಿದೆ. ಹೀಗೆ ವರ್ಷದಲ್ಲಿ ಅಂದಾಜು ೩೭,೦೦೦ ಕೋಟಿ ರೂ. ನೇರ ತೆರಿಗೆಗಳಲ್ಲಿ ಮತ್ತು ೧೦೦೦ ಕೋಟಿ ರೂ. ಒಟ್ಟು ೩೮,೦೦೦ ಕೋಟಿ ರೂ. ವಿನಾಯಿತಿಗಳು ಮತ್ತು ತೆರಿಗೆ ಹೆಚ್ಚಿಸಿದ್ದರಿಂದ ಬರುವ ಹೆಚ್ಚಿನ 3೦೦೦ ಹೆಚ್ಚು ಆದಾಯಗಳ ಪರಿಣಾಮವಾಗಿ ನಿವ್ವಳ 25,000ಕೋಟಿ ರೂ. ತೆರಿಗೆ ನಷ್ಟವಾಗಲಿದೆ.
5 ಕೋಟಿಗಿಂತಲೂ ಹೆಚ್ಚು ಆದಾಯ ಹೊಂದಿರುವ ಶ್ರೀಮಂತ ತೆರಿಗೆದಾರರ ಮೇಲೆ ಹಾಕಲಾಗಿದ್ದ ಶೇ.37 ಸರ್ಜಾರ್ಜನ್ನು ಶೇ.25‡ ಇಳಿಸಲಾಗಿದ್ದು, ಅದರ ಒಟ್ಟು ತೆರಿಗೆಯಲ್ಲಿ ಶೇ.೫ರಷ್ಟು ಉಳಿತಾಯವಾಗಲಿದೆ. ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆಯ ಉಳಿತಾಯ ಮಿತಿಯನ್ನು ದುಪ್ಪಟ್ಟು ಮಾಡಲಾಗಿದೆ. ಅಲ್ಲದೆ ಹೊಸ ಮಹಿಳಾ ಉಳಿತಾಯ ಯೋಜನೆ ಆರಂಭಿಸಲಾಗಿದೆ. ಇದು ಒಂದು ಅರ್ಥದಲ್ಲಿ ಸರ್ಕಾರದ ಖರ್ಚಿಗೆ ಅವರ ಕರಾರುಗಳ ಮೇಲೆ ಹಣ ಒದಗಿಸಿದಂತಾಗುತ್ತದೆ.
ಹೂಡಿಕೆಗಳು ಅರ್ಥಪೂರ್ಣವಾಗಬೇಕಲ್ಲವೆ?
ಇಷ್ಟೊಂದು ದೊಡ್ಡ ಮೊತ್ತವನ್ನು ಹೂಡಿಕೆಗಳಿಗಾಗಿ ಸರ್ಕಾರವು ಒದಗಿಸುತ್ತಿರುವುದರಿಂದ ಆದ್ಯತೆಯ ಮೇರೆಗೆ ತುತ್ತು ಅವಶ್ಯವಿರುವ ಯೋಜನೆಗಳಿಗೆ ಹಣ ಉಪಯೋಗವಾಗಿ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಕೆಲಸ ಪೂರ್ಣವಾಗಿ ಆಸ್ತಿಗಳು ಸಮಾಜದ ಉಪಯೋಗಕ್ಕೆ ಒದಗಿಸಲ್ಪಡಬೇಕು ಸುಸ್ಥಿರವಾಗಿ ದೀರ್ಘಕಾಲ ಬಾಳಿಕೆ ಬರುವಂತೆ ನಿರ್ವಹಣೆಯಾಗಬೇಕು. ಉದಾಹರಣೆಗೆ ರೈಲ್ವೆಗೆ ೨.೪ ಲಕ್ಷ ಕೋಟಿ ರೂ. ಮತ್ತು ರಸ್ತೆ ಕಾಮಗಾರಿಗೆ ೧.೮ ಲಕ್ಷ ಕೋಟಿ ರೂ. ಒದಗಿಸಲಾಗಿದೆ. ಹಿರಿಯ ರೈಲ್ವೆ ಅಽಕಾರಿಗಳ ಪ್ರಕಾರ ಹಣವನ್ನು ಪಡೆಯುವುದು ಮುಖ್ಯವಲ್ಲ, ಅದರ ಸದ್ಬಳಕೆಯಾಗಬೇಕು ಹಿಂದಿನ ಅನುಭವದಂತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗ ವುದು, ಭೂಮಿ ವಶಪಡಿಸಿಕೊಳ್ಳುವಲ್ಲೇ ತೊಂದರೆ, ಬೆಲೆ ಏರಿಕೆಯಿಂದ ವೆಚ್ಚಗಳು ಬೆಳೆದು ಒದಗಿಸಿದ ಹಣ ಸಾಲದೇ ಅರ್ಧಕ್ಕೆ ನಿಂತಿರುವುದು ಮುಂತಾದ ಕಾರಣಗಳಿಂದ ಹೂಡಿಕೆಗಳು ಅರ್ಥ ಕಳೆದುಕೊಂಡ ಉದಾಹರಣೆಗಳು ಸಾಕಷ್ಟು ಇವೆ.
ಸರ್ಕಾರದ ಕಾಮಗಾರಿಗಳೆಂದ ಮೇಲೆ ಆಡಳಿತ ಯಂತ್ರದ ಕೆಂಪು ಪಟ್ಟಿ, ರಾಜಕೀಯ ಮುಖಂಡರ ತಂತ್ರ-ಕುತಂತ್ರಗಳು ಮತ್ತು ಗುತ್ತಿಗೆದಾರರ ದೂರ್ತತನ ಇವೆಲ್ಲ ಒಳಗೆ ಕೆಲಸ ಮಾಡುತ್ತಿರುತ್ತವೆ ಎಂದು ಈ ವಿಷಯದಲ್ಲಿ ಅನುಭವವಿರುವ ತಜ್ಞರೊಬ್ಬರು ಹೇಳುತ್ತಾರೆ. ಇದರ ಮೇಲೆ ಭ್ರಷ್ಟಾಚಾರ ಬೇರೆ. ಇಷ್ಟೆಲ್ಲವನ್ನೂ ಮೀರಿ ಹೂಡಿಕೆ ಹಣ ಆಸ್ತಿಗಳಿಗಾಗಿ ರೂಪಗೊಂಡು ಆದಾಯ ತರಲು ಉಪಯುಕ್ತವಾಗ ಬೇಕಾದರೆ ಎಲ್ಲ ಹಂತಗಳಲ್ಲೂ ಪ್ರಾಮಾಣಿಕ ಮತ್ತು ವೃತ್ತಿಪರ ನಿರ್ವಹಣೆ ಮತ್ತು ಮೇಲ್ವಿಚಾರಣೆ ಅವಶ್ಯಕ.
ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರೂ. ಕೊಟ್ಟಿರುವುದು ಮತ್ತು ಪೂರ್ವೋತರ ರಾಜ್ಯಗಳಲ್ಲಿ ಹಲವು ಕಲ್ಯಾಣ ಯೋಜನೆಗಳನ್ನುಪ್ರಕಟಿಸಿರುವುದು ಅಭಿವೃದ್ಧಿ ಯೋಜನೆಗಳೆಂದು ಹೇಳಿದರೂ ಬರಲಿರುವ ರಾಜ್ಯ ವಿಧಾನ ಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಸಾಲ ಮಾಡಿ ಹೊಲ, ಗದ್ದೆ ಖರೀದಿಸಿದ ರೈತನ ನೀತಿಯಂತಿದೆ ಬಜೆಟ್.
ನಿವ್ವಳ ರಾಜಸ್ವ ಕೊರತೆಯೇ ೪,೯೯,೮೬೭ ರೂ. ಇರುವಾಗ ಇನ್ನು ಹೂಡಿಕೆಗಳಿಗಾಗಿ ಸರ್ಕಾರದ ಉಳಿತಾಯಗಳನ್ನು ಹೂಡಿಕೆಗಳಿಗಾಗಿ ನಿರೀಕ್ಷಿಸುವುದು ತಪ್ಪಾದೀತು. ರಾಜಸ್ವ ಖಾತೆ ಉಳಿತಾಯದಲ್ಲಿ ಇರುವಂತೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ೨೦೨೩ರ ಕೋಶೀಯ ಶಿಸ್ತು ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಉದ್ದೇಶವನ್ನು ಸರ್ಕಾರಗಳು ಮರೆತಂತಿದೆ.