Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಇರಾನ್ ಮೇಲೆ ಅಮೆರಿಕ ದಾಳಿ ಸಾಮ್ರಾಜ್ಯಶಾಹಿ ಕನ್ನಡಿ:  ಜಾಗತಿಕ ಸ್ಥಿರತೆ ಕದಡುವ ಕೆಲಸ

US attack on Iran is imperialist aggression Act that disrupts global stability

ಆಕಾಶದಲ್ಲಿ ಒಂದು ಮಿಂಚು, ಪತ್ರಿಕೆಯಲ್ಲಿ ಬಂದ ಒಂದು ತಲೆಬರಹ ಅಥವಾ ಸರ್ಕಾರಿ ವಕ್ತಾರರು ಎಚ್ಚರಿಕೆಯಿಂದ ಹೆಣೆದು ನೀಡಿದ ಹೇಳಿಕೆ- ಇಡೀ ವ್ಯವಸ್ಥೆಗಳು, ಸಿದ್ಧಾಂತಗಳು ಮತ್ತು ನಾಗರಿಕತೆಗಳ ವೈಫಲ್ಯವನ್ನು ಸಾರುವ ನಿದರ್ಶನಗಳು ಇತಿಹಾಸದಲ್ಲಿ ಸಾಕಷ್ಟಿವೆ.

ಇತ್ತೀಚೆಗೆ ಅಮೆರಿಕವು ಇರಾನ್‌ನ ಪರಮಾಣು ಬಾಂಬ್ ನಿರ್ಮಾಣ ತಾಣಗಳ ಮೇಲೆ ನಡೆಸಿದ ಬಾಂಬ್ ದಾಳಿಯು ಮಧ್ಯಪ್ರಾಚ್ಯ ಸಂಘರ್ಷಗಳ ದೀರ್ಘ ಸರಣಿಯಲ್ಲಿ ಕೇವಲ ಒಂದು ಘಟನೆಯಲ್ಲ, ಬದಲಿಗೆ ಇದು ದೇಶವೊಂದರ ಸಾಮ್ರಾಜ್ಯಶಾಹಿ ನಿಲುವಿಗೆ ಹಿಡಿದ ಕನ್ನಡಿಯಾಗಿದ್ದು, ಅದರ ದುರ್ಬಲತೆ, ಅದರ ಹತಾಶೆ ಮತ್ತು ಅತ್ಯಂತ ಅಪಾಯಕಾರಿಯಾಗಿ ಯಾವುದೇ ಕಾರ್ಯದಿಂದ ಒದಗುವ ದುಷ್ಪರಿಣಾಮದ ಭಯವಿಲ್ಲದಿರುವುದನ್ನು ಸೂಚಿಸುತ್ತದೆ.

ನೀವೇ ಯೋಚಿಸಿ, ನಾವು ನೋಡಿದ್ದು ಸರ್ಜಿಕಲ್ ಸ್ಟ್ರೈಕ್ ಅಲ್ಲ ಅಥವಾ ಪ್ರತಿಕ್ರಿಯೆಯಾಗಿರಲಿಲ್ಲ. ಬದಲಿಗೆ ಅದೊಂದು ಪೂರ್ವಯೋಜಿತ, ಅನ್ಯಾಯಕಾರಿ ಮತ್ತು ಸ್ಛೋಟಕ ಆಕ್ರಮಣಕಾರಿ ಕೃತ್ಯವಾಗಿತ್ತು. ತಕ್ಷಣದ ಪರಿಣಾಮವಷ್ಟೇ ಅಲ್ಲ, ಇದು ಜಾಗತಿಕ ಸ್ಥಿರತೆಯನ್ನು ಕೂಡ ಕದಡುವ ಕೆಲಸ ಮಾಡಿತು.

ಅಧಿಕಾರದಲ್ಲಿರುವವರು ಈ ಕ್ರಮವು ಅನಿವಾರ್ಯವಾಗಿತ್ತು ಎಂದು ನಾವು ನಂಬಬೇಕೆಂದು ಬಯಸುತ್ತಾರೆ. ಸಾರ್ವಜನಿಕ ಆಕ್ರೋಶವನ್ನು ಶಮನಗೊಳಿಸಲು, ಮಾಧ್ಯಮಗಳ ಕ್ಲಿಷ್ಟಕರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಹಾಗೂ ತಾವು ಸಹಾಯದ ಹೆಸರಲ್ಲಿ ಈಗಾಗಲೇ ಹಲವು ಬಾರಿ ನೋವು ನೀಡಿದ ಪ್ರದೇಶವೊಂದರ ಮೇಲೆ ಪ್ರಾಬಲ್ಯ ಸಾಧಿಸಿ ಉಳಿಸಿಕೊಳ್ಳಲು, ಇರಾನ್ ಜಗತ್ತಿಗೆ ಬಹಳ ದೊಡ್ಡ ಅಪಾಯ ಒಡ್ಡುವುದರಲ್ಲಿತ್ತು. ತಮ್ಮ ಬತ್ತಳಿಕೆಯ ಎಲ್ಲ ರಾಜತಾಂತ್ರಿಕ ಮಾರ್ಗಗಳೂ ಖಾಲಿಯಾದ ಬಳಿಕದಲ್ಲಿ ನಾವಿದನ್ನು ಪ್ರಯೋಗ ಮಾಡಲೇಬೇಕಾಯಿತು ಎಂದು ನಂಬಿಸುವ ಕೆಲಸವನ್ನು ಬಹಳ ನಾಜೂಕಾಗಿ ಮಾಡುತ್ತಾರೆ.

ಇರಾನ್‌ನ ಪರಮಾಣು ತಾಣಗಳ ಮೇಲಿನ ಬಾಂಬ್ ದಾಳಿಯು ಅನಿವಾರ್ಯತೆ ಅಥವಾ ಸ್ವರಕ್ಷಣೆಯ ಕಾರಣಕ್ಕೆ ಹುಟ್ಟಿ ಕೊಂಡಿಲ್ಲ ಅಥವಾ ಇದು ದಣಿದ ರಾಜತಾಂತ್ರಿಕ ಆಯ್ಕೆಗಳ ಸರಪಳಿಯಲ್ಲಿ ಕೊನೆಯ ಕೊಂಡಿಯಾಗಿರಲಿಲ್ಲ. ಬದಲಿಗೆ,ಇದು ಪ್ರಾಬಲ್ಯ ಸಿದ್ಧಾಂತ ಆಧಾರಿತವಾದ ಲೆಕ್ಕಾಚಾರವಾಗಿತ್ತು. ಹೌದು. ಈ ಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿ ಕೊಂಡರೆ, ಇದು ಹಿಂದಿನಿಂದ ನಡೆದು ಬಂದಂತೆ ವಿಶಾಲವಾದ ಸಾಮ್ರಾಜ್ಯಶಾಹಿ ಸಂಪ್ರದಾಯದ ಭಾಗವೇ ಆಗಿದ್ದು, ಅಲ್ಲಿ ಅಧಿಕಾರವನ್ನು ನ್ಯಾಯದ ಮೂಲಕ ಅಲ್ಲ, ಬಲದ ಮೂಲಕ ಪಡೆಯಲಾಗುತ್ತದೆ. ಇತಿಹಾಸದುದ್ದಕ್ಕೂ, ಪ್ರಬಲ ರಾಜ್ಯಗಳು ತಮ್ಮ ಆಕ್ರಮಣಶೀಲತೆಗೆ ರಕ್ಷಣೆಯ ಮುಸುಕು ಹಾಕಿವೆ. ಆದರೆ ಯಾರಿಗಾಗಿ ರಕ್ಷಣೆ? ಭೂಮಿಯ ಮೇಲೆ ಕ್ಷಿಪಣಿಗಳ ಮಳೆ ಸುರಿಸಿದಾಗ, ಅದು ರಕ್ಷಣೆಯಲ್ಲ. ಅದು ನಿಯಂತ್ರಣದ ಜೋರಾದ ಘೋಷಣೆ!

ಇರಾನ್ ಸನ್ನಿಹಿತ ಬೆದರಿಕೆಯಾಗಿದೆ ಎಂಬ ನಿರೂಪಣೆಯನ್ನು ಸ್ವಾರ್ಥಕ್ಕಾಗಿ ಹೆಣೆಯಲಾಗಿದೆ. ಸಮರ್ಥನೀಯವಲ್ಲದ್ದನ್ನು ಸಮರ್ಥಿಸಲು ಪ್ರತಿ ಕೆಲವು ವರ್ಷಗಳಿಗೊಮ್ಮೆ ಅದನ್ನು ಮತ್ತೆ ಮತ್ತೆ ಹೇಳಲಾಗುತ್ತದೆ. ಈ ಮೂಲಕ ಅಂತಹ ದಾಳಿ ಕಾನೂನುಬದ್ಧವಾಗಿದೆಯೇ ಅಥವಾ ನೈತಿಕವಾಗಿದೆಯೇ ಎಂಬ ಪ್ರಶ್ನೆ ಯಾರಲ್ಲೂ ಏಳದಂತೆ ನೋಡಿಕೊಳ್ಳಲಾಗುತ್ತದೆ. ಪರಮಾಣು ಸಾಮರ್ಥ್ಯ ಯಾರು ಪಡೆಯಬಹುದು ಎಂದು ನಿರ್ಧರಿಸುವ ಹಕ್ಕು ಯಾರದ್ದು?

ಯಾವ ರಾಷ್ಟ್ರಗಳು ಪರಮಾಣು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬಹುದು ಅಥವಾ ಅಭಿವೃದ್ಧಿಪಡಿಸಬಾರದು ಎಂಬುದನ್ನು ಒಂದು ರಾಷ್ಟ್ರವು ಏಕಪಕ್ಷೀಯವಾಗಿ ನಿರ್ಧರಿಸಬಹುದು ಎಂಬ ಕಲ್ಪನೆಯೇ ವಸಾಹತುಶಾಹಿ ದುರಹಂಕಾರದ ವಾಸನೆಯನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಆ ರಾಷ್ಟ್ರವು ಸಾವಿರಾರು ಪರಮಾಣು ಸಿಡಿತಲೆಗಳನ್ನು ಹೊಂದಿರುವಾಗ, ಬಹುತೇಕ ಪ್ರತಿಯೊಂದು ಖಂಡದಲ್ಲೂ ಮಿಲಿಟರಿ ನೆಲೆಗಳನ್ನು ನಿರ್ವಹಿಸುತ್ತಿರುವಾಗ ಮತ್ತು ಆ ಶಸ್ತ್ರಾಸ್ತ್ರಗಳನ್ನು ತಡೆಗಟ್ಟುವಿಕೆಯಾಗಿ ಅಲ್ಲ, ಬದಲಾಗಿ ತಮಗೆ ಎಲ್ಲರನ್ನೂ ವಿಧೇಯರನ್ನಾಗಿಸುವ ಸಾಧನಗಳಾಗಿ ಬಳಸುವ ಇತಿಹಾಸವನ್ನು ಹೊಂದಿರುವಾಗ, ಮತ್ತೊಂದು ರಾಷ್ಟ್ರದ ನಿರ್ಧಾರಗಳನ್ನು ತನಗೆ ಬೇಕಾದಂತೆ ನಿರ್ಬಂಧಿಸುವುದು ಸರ್ವಾಧಿಕಾರಿ ಧೋರಣೆಯಲ್ಲದೆ ಇನ್ನೇನು?

ಈ ಬಾಂಬ್ ದಾಳಿಯ ಮೂಲಕ ಕಳುಹಿಸಲಾದ ಸಂದೇಶವು ಕೇವಲ ಇರಾನ್ ಕಡೆಗೆ ನಿರ್ದೇಶಿಸಲ್ಪಟ್ಟಿಲ್ಲ. ಇದು ಇಡೀ ಜಗತ್ತಿಗೆ ಒಂದು ಎಚ್ಚರಿಕೆಯಾಗಿದೆ : ನಮ್ಮ ಮಾತನ್ನು ಪಾಲಿಸಿ ಅಥವಾ ನಾಶವಾಗಿ!

ಈ ರೀತಿಯ ಆಕ್ರಮಣವು ನಿರ್ವಾತದಲ್ಲಿ ಸಂಭವಿಸುವುದಿಲ್ಲ. ಸಂಪನ್ಮೂಲಗಳು ಮತ್ತು ಭೌಗೋಳಿಕ ರಾಜಕೀಯ ಪ್ರಭಾವದಿಂದ ಸಮೃದ್ಧವಾಗಿರುವ ಪ್ರದೇಶದಲ್ಲಿ ಮಾತ್ರ ಸಂಭವಿಸುತ್ತದೆ ಎಂಬುದು ನಿರ್ವಿವಾದವಾಗಿದೆ.

ಹಾಗಾಗಿ ಅಮೆರಿಕದ ಈ ದಾಳಿ ಕೇವಲ ಯುರೇನಿಯಂ ಸಂಗ್ರಹವನ್ನು ನಾಶಪಡಿಸುವ ಉದ್ದೇಶ ಹೊಂದಿರಲಿಲ್ಲ. ಪಾಶ್ಚಿಮಾತ್ಯ ಆದೇಶಗಳಿಗೆ ಮಣಿಯಲು ನಿರಾಕರಿಸುವ ರಾಷ್ಟ್ರಗಳಿಗೆ ತನ್ನನ್ನು ಧಿಕ್ಕರಿಸಿದರೆ ಅವು ತೆರಬೇಕಾದ ಬೆಲೆಯನ್ನು ತಿಳಿಸುವುದು ಕೂಡ ಹೌದಾಗಿತ್ತು.

ಇರಾನ್‌ನ ಪರಮಾಣು ಸೌಲಭ್ಯಗಳ ಮೇಲಿನ ಬಾಂಬ್ ದಾಳಿಯು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಯಾಗಿದೆ. ಎರಡು ವಿಶ್ವ ಯುದ್ಧಗಳ ನಂತರ ಮೂರನೆಯ ದನ್ನು ತಡೆಯುವ ಭರವಸೆಯೊಂದಿಗೆ ನಿರ್ಮಿಸಲಾದ ಜಾಗತಿಕ ಕಾನೂನು ಚೌಕಟ್ಟಿಗೆ ಮಾಡಿದ ನೇರ ಅವಮಾನ ಇದಾಗಿದೆ. ಈ ಮೂಲಕ ಈ ದೇಶವು ವಿಶ್ವಕ್ಕೆ ಕೊಟ್ಟ ಸಂದೇಶ: ಕಾನೂನಿನ ನಿಯಮವು ಬಲದ ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದಾಗಿದೆ. ಇದು ಖಂಡಿತಾ ಆರೋಗ್ಯಕರವಲ್ಲ.

ಯುದ್ಧಭೂಮಿ ಕೇವಲ ಸಂಘರ್ಷದ ತಾಣವಲ್ಲ – ಇದು ಒಂದು ಮಾರುಕಟ್ಟೆ ಮತ್ತು ಜೀವಗಳೇ ಇಲ್ಲಿ ಕರೆನ್ಸಿ. ರಕ್ಷಣಾ ಗುತ್ತಿಗೆದಾರರು, ಪಳೆಯುಳಿಕೆ ಇಂಧನ ದೈತ್ಯರು ಮತ್ತು ಶಸ್ತ್ರಾಸ್ತ್ರ ವಿತರಕರು ಅನಿಶ್ಚಿತತೆ ಮತ್ತು ಹಿಂಸಾಚಾರದ ಸಮಯದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ನಾಶ ಹೆಚ್ಚಾದಂತೆಲ್ಲ ಪುನರ್ ನಿರ್ಮಾಣ ಒಪ್ಪಂದಗಳು, ಭದ್ರತಾ ವ್ಯವಹಾರಗಳು ಮತ್ತು ಸಂಪನ್ಮೂಲ ಹೊರತೆಗೆಯುವ ಹಕ್ಕುಗಳಿಗೆ ಬಾಗಿಲು ತೆರೆಯುತ್ತದೆ. ಇದು ಊಹಾಪೋಹವಲ್ಲ. ಇದು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಇರಾಕ್‌ನಿಂದ ಅಫ್ಘಾನಿಸ್ತಾನದವ ರೆಗೆ, ಲಿಬಿಯಾದಿಂದ ಸಿರಿಯಾದವರೆಗೆ, ಹಸ್ತಕ್ಷೇಪಕ್ಕಾಗಿ ಲಾಬಿ ಮಾಡಿದ ನಿಗಮಗಳಿಗೆ ಯುದ್ಧದ ನಂತರ ಲಾಭದಾಯಕ ಅವಕಾಶಗಳು ಬಂದಿವೆ. ಬೆಲೆಯನ್ನು ಪಾವತಿಸುವವರು ಸಾಮಾನ್ಯ ಜನರು ಮಾತ್ರ!

ಶಾಂತಿ ಮತ್ತು ಭದ್ರತೆಯ ಭಾಷೆಯನ್ನು ಆಹ್ವಾನಿಸುತ್ತಾ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಮೂಲಸೌಕರ್ಯವನ್ನು ನಾಶಮಾಡಲು ಯಾವ ಹಕ್ಕನ್ನು ಹೊಂದಿದೆ? ಉತ್ತರ, ಕಾನೂನು ಪರಿಭಾಷೆಯಲ್ಲಿ ಯಾವುದೂ ಇಲ್ಲ. ನೈತಿಕ ಪರಿಭಾಷೆಯಲ್ಲಿ ಯಾವುದೂ ಇಲ್ಲ. ಪ್ರಜಾಪ್ರಭುತ್ವ ಪರಿಭಾಷೆಯಲ್ಲಿ ಯಾವುದೂ ಇಲ್ಲ. ಏತನ್ಮಧ್ಯೆ, ಆಕ್ರಮಣ ಕಾರಿ ರಾಷ್ಟ್ರಗಳಲ್ಲಿ ಕಾರ್ಮಿಕ ವರ್ಗದ ಸೈನಿಕರನ್ನು ಅವರಿಗೆ ಅರ್ಥವಾಗದ ಶತ್ರುಗಳ ವಿರುದ್ಧ ಹೋರಾಡಲು ಕಳುಹಿಸಲಾಗುತ್ತದೆ. ಗುರಿಗಳಿಗಾಗಿ ಅವರಿಗೆ ಎಂದಿಗೂ ಪೂರ್ಣ ಸತ್ಯವನ್ನು ಹೇಳಲಾಗುವುದಿಲ್ಲ. ಯುದ್ಧದ ಶಿಲ್ಪಿಗಳು ಎಂದಿಗೂ ಮಗುವನ್ನು ಹೂಳುವುದಿಲ್ಲ ಅಥವಾ ಛಿದ್ರಗೊಂಡ ಮನೆಯನ್ನು ಪುನರ್ ನಿರ್ಮಿಸುವುದಿಲ್ಲ. ಇದು ಆಧ್ಯಾತ್ಮಿಕ ಸಂಪರ್ಕ ಕಡಿತವನ್ನು ಪ್ರತಿಬಿಂಬಿಸುತ್ತದೆ. ಸಹಾನುಭೂತಿ, ಆತ್ಮಸಾಕ್ಷಿ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಕಡಿದುಕೊಳ್ಳುವುದು. ಈ ಸಂಪರ್ಕ ಕಡಿತದಲ್ಲಿ, ಇತರರ ನೋವು ಅಮೂರ್ತ ವಾಗುತ್ತದೆ ಅಂಕಿಅಂಶಗಳು ಮರೆತು ಹೋಗುತ್ತವೆ. ಆದರೆ ಜನಸಾಮಾನ್ಯರಿಗೆ ಯುದ್ಧವು ಎಂದಿಗೂ ಅಮೂರ್ತವಲ್ಲ.

ಇದು ದೈನಂದಿನ, ವಿನಾಶಕಾರಿ ವಾಸ್ತವ. ದೇಹಕ್ಕೆ ಮಾತ್ರವಲ್ಲ, ಮಾನವೀಯತೆಯ ಆತ್ಮಕ್ಕೂ ಗಾಯ! ಒಂದು ತಪ್ಪು ನಡೆ, ಒಂದು ತಪ್ಪಾಗಿ ಓದಲಾದ ರಾಡಾರ್ ಸಿಗ್ನಲ್, ಒಂದು ತಪ್ಪು ಲೆಕ್ಕಾಚಾರ- ಯೋಚನೆಗೂ ಮೀರಿದ್ದನ್ನು ವಾಸ್ತವವಾಗಿಸುತ್ತದೆ. ಕಾನೂನು ಕೇವಲ ಕಾರ್ಯವಿಧಾನದ ರಚನೆಯಲ್ಲ; ಇದು ರಾಷ್ಟ್ರಗಳ ನಡುವಿನ ನೈತಿಕ ಒಡಂಬಡಿಕೆ ಯಾಗಿದೆ. ಯಾವುದೇ ದೇಶವು ಎಷ್ಟೇ ಪ್ರಬಲವಾಗಿದ್ದರೂ, ಹೊಣೆಗಾರಿಕೆಯಿಂದ ವಿನಾಯಿತಿ ಪಡೆದಿಲ್ಲ ಎಂಬ ಅರಿವು ಇದರ ಅರ್ಥ. ಆದರೆ, ನೈತಿಕತೆಯ ಅಡಿಪಾಯಗಳನ್ನು ನಾವು ಕೆಡವುತ್ತಲೇ ಇರುವಾಗ ನಾವು ಶಾಂತಿಯುತ ಜಗತ್ತನ್ನು ನಿರ್ಮಿಸಲು ಸಾಧ್ಯವಿಲ್ಲ.

ಬೀಳುವ ಪ್ರತಿಯೊಂದು ಬಾಂಬ್ ಬಲವನ್ನು ಸೂಚಿಸುವುದಿಲ್ಲ, ಆದರೆ ನೈತಿಕ ಕ್ಷೀಣತೆಯನ್ನು ಸೂಚಿಸುತ್ತದೆ. ಇದು ಪ್ರಾಬಲ್ಯದ ಹಸಿವಿನಲ್ಲಿ, ಮಾನವೀಯತೆಯನ್ನು ತ್ಯಜಿಸಿದ ನಾಗರಿಕತೆಯನ್ನು ಸೂಚಿಸುತ್ತದೆ. ಮಾನವ ಮತ್ತು ಅಂತಾ ರಾಷ್ಟ್ರೀಯ ಘನತೆಯ ಇಂತಹ ಬಹಿರಂಗ ಉಲ್ಲಂಘನೆಗಳ ಮುಂದೆ ಇಷ್ಟೊಂದು ಜನರು ಮೌನವಾಗಿರುವುದು ಏಕೆ ಎಂದು ಅನ್ವೇಷಿಸುವುದು ಸದ್ಯದ ತುರ್ತಾಗಿದೆ. ಮತ್ತು ಇಲ್ಲಿಂದಲೇ ನಮ್ಮ ಜವಾಬ್ದಾರಿ ಆರಂಭವಾಗುತ್ತದೆ. ಆಕ್ರಮಣ ಶೀಲತೆಯ ವಿರುದ್ಧ ಮಾತನಾಡುವುದು ಮಾತ್ರವಲ್ಲ, ನಿಜವಾಗಿಯೂ ಶಕ್ತಿ ಎಂದರೆ ಏನು ಎಂದು ಮರುಕಲ್ಪಿಸಿಕೊಳ್ಳು ವುದು. ನಿಜವಾದ ಶಕ್ತಿ ಇರುವುದು ಗುಂಡಿನ ಶಕ್ತಿಯಲ್ಲಿ ಅಲ್ಲ,

ಬದಲಾಗಿ ತಿಳಿವಳಿಕೆಯನ್ನು ಹುಡುಕುವ ಧೈರ್ಯದಲ್ಲಿ. ಸಹಕಾರವು ದೌರ್ಬಲ್ಯವಲ್ಲ, ಆದರೆ ಬುದ್ಧಿವಂತಿಕೆಯ ಅತ್ಯು ನ್ನತ ಅಭಿವ್ಯಕ್ತಿ ಎಂಬ ದೃಢನಿಶ್ಚಯದಲ್ಲಿ. ರಾಷ್ಟ್ರವೊಂದರ ಉದ್ಧಟ ತನವನ್ನು ನಾವು ಪ್ರಶ್ನಿಸದಿದ್ದರೆ, ಜಗತ್ತು ಕ್ರಮವಾಗಿ ವೇಷ ಧರಿಸಿ ಅವ್ಯವಸ್ಥೆಗೆ ಜಾರಿಬೀಳುವುದನ್ನು ನಾವು ನೋಡುವ ಅಪಾಯವಿದೆ. ರಕ್ಷಣೆಯ ಅಗತ್ಯವಿರುವುದು ವಿವೇಚನೆ ಯಿಂದ ನಿಯಂತ್ರಿಸಲ್ಪಡುವ ಜಗತ್ತನ್ನು ಉಳಿಸಿ ಬೆಳೆಸುವಲ್ಲಿ. ಮಾನವೀಯತೆಯು ಈ ಸತ್ಯವನ್ನು ಅರ್ಥ ಮಾಡಿ ಕೊಳ್ಳುವುದು ಸಾಕಾಗುವುದಿಲ್ಲ. ನಾವು ಅದನ್ನು ಎದುರಿಸ ಬೇಕು, ಮಾತನಾಡಬೇಕು ಮತ್ತು ಅದನ್ನು ಸಾಧ್ಯವಾಗಿಸುವ ವ್ಯವಸ್ಥೆಗಳನ್ನು ವಿರೋಧಿಸಬೇಕು. ಬಾಂಬ್‌ಗಳು ಬಿದ್ದು ಸತ್ಯವನ್ನು ಎಚ್ಚರಿಕೆಯಿಂದ ರಚಿಸಲಾದ ನಿರೂಪಣೆಯ ಅಡಿಯಲ್ಲಿ ಹೂತು ಹಾಕಿದಾಗ – ಮೌನವು ದ್ರೋಹವಾಗುತ್ತದೆ.

ನಿಜವಾದ ಶಾಂತಿ ಎಂದರೆ ಸಂಘರ್ಷದ ಅನುಪಸ್ಥಿತಿಯಲ್ಲ. ಅದು ನ್ಯಾಯದ ಉಪಸ್ಥಿತಿ. ನಾವು ಆಯ್ಕೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಒಂದೋ ನಾವು ಹಿಂಸೆಯ ಜಡತ್ವಕ್ಕೆ ಶರಣಾಗಬೇಕು ಅಥವಾ ಅದನ್ನು ಕೊನೆಗೊಳಿಸುವ ಪೀಳಿಗೆಯಾಗಬೇಕು. ಆದರೆ ಅದಕ್ಕೆ ಧೈರ್ಯ, ಕಲ್ಪನೆ ಮತ್ತು ಪ್ರವಾಹದ ವಿರುದ್ಧ ನಿಲ್ಲುವ ಇಚ್ಛಾಶಕ್ತಿಯ ಅಗತ್ಯವಿದೆ. ಒಟ್ಟಾಗಿ, ನಾವು ಯುದ್ಧವಿಲ್ಲದ, ನ್ಯಾಯದ ಜಗತ್ತನ್ನು ನಿರ್ಮಿಸಬಹುದು. ಎಚ್ಚರವಾಗಿರಿ, ತತ್ವಬದ್ಧರಾಗಿರಿ ಮತ್ತು ಮಾನವರಾಗಿರಿ.

” ಇರಾನ್‌ನ ಪರಮಾಣು ಸೌಲಭ್ಯಗಳ ಮೇಲಿನ ಬಾಂಬ್ ದಾಳಿಯು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಎರಡು ವಿಶ್ವ ಯುದ್ಧಗಳ ನಂತರ ಮೂರನೆಯದನ್ನು ತಡೆಯುವ ಭರವಸೆಯೊಂದಿಗೆ ನಿರ್ಮಿಸಲಾದ ಜಾಗತಿಕ ಕಾನೂನು ಚೌಕಟ್ಟಿಗೆ ಮಾಡಿದ ನೇರ ಅವಮಾನ ಇದಾಗಿದೆ. ಈ ಮೂಲಕ ಈ ದೇಶವು ವಿಶ್ವಕ್ಕೆ ಕೊಟ್ಟ ಸಂದೇಶ: ಕಾನೂನಿನ ನಿಯಮವು ಬಲದ ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದಾಗಿದೆ.”

ಭಾಷಾತಜ್ಞ ಚೋಮ್‌ಸ್ಕಿ ಕುರಿತು…

ಅವ್ರಂ ನೋಮ್ ಚೋಮ್‌ಸ್ಕಿ ಅವರು ಓರ್ವ ಖ್ಯಾತ ಅಮೆರಿಕನ್ ಪ್ರೊಫೆಸರ್, ಭಾಷಾಶಾಸಜ್ಞರೂ ಹೌದು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಬಗ್ಗೆ ಹಲವು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ವಿಶ್ಲೇಷಣಾತ್ಮಕ ತತ್ವ ಶಾಸದಲ್ಲೂ ಖ್ಯಾತಿ ಹೊಂದಿರುವ ಚೋಮ್‌ಸ್ಕಿ ಅವರು, ಅರಿವಿನ ವಿಜ್ಞಾನದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದವರು. ಹಾಗಾಗಿಯೇ ಇವರನ್ನು ‘ದಿ -ದರ್ ಆ- ಮಾಡರ್ನ್ ಲಿಂಗ್ವಿಸ್ಟಿಕ್ಸ್’ ಎಂದೂ ಕರೆಯಲಾಗುತ್ತದೆ. ಅಮೆರಿಕಾದ ಪೆನಿನ್ಸುವೆಲಾದ ಫಿಲಿಡಲಿಯಾದ ನಿವಾಸಿಯಾದ ಚೋಮ್‌ಸ್ಕಿ ಅವರು ಜನಿಸಿದ್ದು ಡಿಸೆಂಬರ್ ೭, ೧೯೨೮ ರಲ್ಲಿ, ಅವರಿಗೀಗ ೯೬ ವರ್ಷ.

ಮೂಲ: ಪ್ರೊ.ಅವ್ರಂ ನೋಮ್ ಚೋಮ್‌ಸ್ಕಿ

ಭಾವಾನುವಾದ: ರೇಶ್ಮಾರಾವ್ ಸೊನ್ಲೆ

Tags:
error: Content is protected !!