ವಿದೇಶ ವಿಹಾರ
ಡಿ.ವಿ.ರಾಜಶೇಖರ
ಅಮೆರಿಕದ ತೆರಿಗೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ ಮಸೂದೆಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ. ಇದು ರಾಜಕೀಯವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಗೆಲುವು. ಸೆನೆಟ್‌ನಲ್ಲಿ ಈ ಮಸೂದೆ ಕೇವಲ ಒಂದು ಮತದ ಅಂತರದಿಂದ ಒಪ್ಪಿಗೆ ಪಡೆದರೆ ಕಾಂಗ್ರೆಸ್‌ನಲ್ಲಿ ಕೇವಲ ನಾಲ್ಕು ಮತಗಳ ಅಂತರದಿಂದ ಅಂಗೀಕಾರಗೊಂಡಿದೆ. ಸೆನೆಟ್‌ನಲ್ಲಿ ಸಮ-ಸಮ ಮತಗಳು ಬಿದ್ದಿದ್ದು ಅಂತಿಮವಾಗಿ ಉಪಾಧ್ಯಕ್ಷರು ಅಽಕಾರ ಬಳಸಿ ತಮ್ಮ ಒಂದು ಮತವನ್ನು ಮಸೂದೆ ಪರವಾಗಿ ಚಲಾಯಿಸಿದ್ದರಿಂದಾಗಿ ಅಂಗೀಕಾರ ಸಿಕ್ಕಿತು. ವಿರೋಧಿ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಈ ಮಸೂದೆ ವಿರುದ್ಧ ಬಲವಾದ ವಿರೋಧವನ್ನೇ ಒಡ್ಡಿದ್ದರಿಂದ ಕೊನೆಕ್ಷಣಗಳವರೆಗೂ ಕುತೂಹಲ ಇತ್ತು. ರಿಪಬ್ಲಿಕನ್ ಪಕ್ಷದ ಮೇಲಿನ ಟ್ರಂಪ್ ಅವರ ಹಿಡಿತವನ್ನು ಈ ಮಸೂದೆ ಖಚಿತವಾಗಿ ಸಾಬೀತು ಮಾಡಿದೆ.
ಈ ಮಸೂದೆ ಮುಖ್ಯವಾಗಿ ದೇಶದ ಭದ್ರತೆಗೆ ಮತ್ತು ರಕ್ಷಣೆಗೆ ಹೆಚ್ಚು ಹಣ, ಶ್ರೀಮಂತರಿಗೆ ತೆರಿಗೆಯಲ್ಲಿ ವಿನಾಯಿತಿ, ಆರೋಗ್ಯ ಸೌಲಭ್ಯ ಮತ್ತು ಉಚಿತ ಆಹಾರ ನೀಡಿಕೆ ಕಾರ್ಯಕ್ರಮಕ್ಕೆ ನೀಡಲಾಗುತ್ತಿದ್ದ ಹಣಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕತ್ತರಿ, ವಲಸೆ ನಿಯಮಗಳ ಬದಲಾವಣೆ, ಅಕ್ರಮ ವಲಸಿಗರ ಸಾಮೂಹಿಕ ಗಡೀಪಾರಿಗೆ ಹೆಚ್ಚು ಹಣ, ಉದ್ಯೋಗಿಗಳ ಉಳಿತಾಯ ಹಣದ ಹೆಚ್ಚಳ, ಹಸಿರು ತೆರಿಗೆ ಹಂತ ಹಂತವಾಗಿ ಅಂತ್ಯ, ಎಲೆಕ್ಟ್ರಿಕ್ ವಾಹನ ಸಬ್ಸಿಡಿ ಕಡಿತ ಮುಂತಾದ ಉದ್ದೇಶಗಳನ್ನು ಹೊಂದಿದೆ. ದೇಶದ ಹಣಕಾಸು ಖೋತಾ ಪ್ರಮಾಣವನ್ನು ೩.೩ ಟ್ರಲಿಯನ್ ಡಾಲರ್‌ನಷ್ಟು ಏರಿಸಲಿರುವುದು ಈ ಮಸೂದೆಯ ಬಹಳ ಮುಖ್ಯ ಕೆಟ್ಟ ಪರಿಣಾಮ. ಆರೋಗ್ಯ ಸೌಲಭ್ಯ ಪಡೆಯಲು ಕಠಿಣ ನಿಯಮಗಳನ್ನು ರೂಪಿಸಲಾಗಿದ್ದು, ಇದರಿಂದಾಗಿ ಸುಮಾರು ಒಂದೂವರೆ ಕೋಟಿ ಜನರು ಈ ಸೌಲಭ್ಯದಿಂದ ವಂಚಿತರಾಗಲಿರುವುದು ಮತ್ತೊಂದು ಕೆಟ್ಟ ಪರಿಣಾಮ. ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳು ಮುಚ್ಚಬೇಕಾಗಿ ಬರಬಹುದು ಎಂಬ ಆತಂಕವನ್ನು ವಿರೋದ ಪಕ್ಷದವರು ವ್ಯಕ್ತಮಾಡಿದ್ದಾರೆ. ವಿದ್ಯಾರ್ಥಿವೇತನಗಳ ಸಂಖ್ಯೆ ಮತ್ತು ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇನ್ನು ಮುಂದೆ ತಾಂತ್ರಿಕ ಮತ್ತು ಕೌಶಲ ಪರಿಣತಿ ಹೊಂದಿರುವವರಿಗೆ ಮಾತ್ರ ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಸ್ಥಳೀಯ ಅಭ್ಯರ್ಥಿ ಇಲ್ಲ ಎಂಬುದು ಖಚಿತವಾದ ಮೇಲೆ ಮಾತ್ರ ಇತರರಿಗೆ ಉದ್ಯೋಗ ಕೊಡುವ ಈಗಿನ ನೀತಿಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ಬದಲಾವಣೆಗಳು ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳ ಮೇಲೆ ಸಹಜವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ನಾನಾ ರೀತಿಯ ಕೆಟ್ಟ ಪರಿಣಾಮಗಳನ್ನು ವಿರೋಧ ಪಕ್ಷದವರು ಎತ್ತಿ ಹೇಳಿರುವರಾದರೂ ಶ್ವೇತಭವನ ಮಾತ್ರ ಈ ಮಸೂದೆಯಿಂದ ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಲಿದೆ ಎಂದು ಹೇಳಿದೆ. ಸಹಜವಾಗಿ ಡೊನಾಲ್ಡ್ ಟ್ರಂಪ್ ಅವರು ಈ ಮಸೂದೆ ಅಂಗೀಕಾರವಾದ ಬಗ್ಗೆ ಹರ್ಷ ವ್ಯಕ್ತಮಾಡಿದ್ದಾರೆ. ಈ ವೇಳೆಗೆ ಬಹುಶಃ ಟ್ರಂಪ್ ಅವರು ಸಹಿ ಮಾಡಿರುವ ಸಾಧ್ಯತೆ ಇದೆ.
ಟ್ರಂಪ್ ಅವರು ಮತ್ತೆ ಅಧಿಕಾರಕ್ಕೆ ಬಂದಂದಿನಿಂದಲೂ ಒಂದಲ್ಲ ಒಂದು ವಿವಾದಗಳಿಗೆ ಒಳಗಾಗುತ್ತಲೇ ಬಂದಿದ್ದಾರೆ. ಮುಖ್ಯವಾಗಿ ವಲಸೆ ನೀತಿ ತೀವ್ರ ಟೀಕೆಗೆ ಒಳಗಾಗಿದೆ. ಅಕ್ರಮ ವಲಸಿಗರನ್ನು ಹಿಡಿದು ಜೈಲಿಗೆ ಕಳುಹಿಸುವ ಅಥವಾ ಅವರವರ ದೇಶಕ್ಕೆ ಕಳುಹಿಸುವ ಅವರ ನಿರ್ಧಾರವಂತೂ ವಿವಿಧ ದೇಶಗಳ ಪ್ರತಿಭಟನೆಗೆ ಕಾರಣವಾಗಿದೆ. ಪ್ಯಾಲೆಸ್ಟೇನ್ ವಿಚಾರದಲ್ಲಿ ಅವರು ಸತತವಾಗಿ ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರನ್ನು ಬೆಂಬಲಿಸುತ್ತಿರುವುದು, ಗಾಜಾ ಪ್ರದೇಶವನ್ನೇ ಆಕ್ರಮಿಸಿಕೊಳ್ಳುವ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಒಳಗಾಗಿದೆ. ಹೀಗೆಯೇ ಗ್ರೀನ್‌ಲ್ಯಾಂಡ್ ಕೊಂಡುಕೊಳ್ಳುವ ವಿಚಾರವನ್ನು ಅವರಿನ್ನೂ ಕೈಬಿಟ್ಟಿಲ್ಲ. ಕೆನಡಾ ದೇಶ ಅಮೆರಿಕದ ೫೧ನೇ ರಾಜ್ಯವಾಗಬೇಕೆಂಬ ಅವರ ಬಯಕೆ ಕೋಲಾಹಲಕ್ಕೆ ಕಾರಣವಾಗಿದೆ.
ಟ್ರಂಪ್ ಅವರು ಈ ಮೊದಲೇ ಏಕಾಏಕಿ ಜಾರಿಗೆ ತಂದ ಹೊಸ ತೆರಿಗೆ ನೀತಿ ಜಗತ್ತಿನಾದ್ಯಂತ ಆಕ್ರೋಶಕ್ಕೆ ಗುರಿಯಾಗಿದೆ. ಅವರು ತಂದ ಹೊಸ ತೆರಿಗೆ ಪದ್ಧತಿಯಿಂದಾಗಿ ವಿವಿಧ ದೇಶಗಳ ನಡುವಣ ವಾಣಿಜ್ಯ ಸಂಬಂಧಗಳು ಹಾಳಾಗಿವೆ. ಆದರೆ ಅವರು ಮಾತ್ರ ಹಾಕಿದ ಪಟ್ಟು ಬಿಟ್ಟಿಲ್ಲ. ಮಾತುಕತೆ ನಡೆಸಿ ಸುಂಕದ ಪ್ರಮಾಣ ನಿರ್ಧರಿಸುವ ನಿಲುವನ್ನು ಅವರು ತಳೆದಿದ್ದಾರೆ. ಭಾರತ ಕೂಡ ಈ ತೆರಿಗೆ ಗೊಂದಲಕ್ಕೆ ಸಿಕ್ಕಿದೆ. ಈ ವಾರ ಒಂದು ಒಪ್ಪಂದ ಆಗಬಹುದೆಂದು ಟ್ರಂಪ್ ಅವರೇ ಹೇಳಿದ್ದಾರೆ. ಆದರೆ ಒಪ್ಪಂದದ ಯಾವ ಸೂಚನೆಗಳೂ ಕಾಣುತ್ತಿಲ್ಲ.
ಇದೀಗ ಟ್ರಂಪ್ ಅವರು ವ್ಯಾಪಕ ಪ್ರಮಾಣದ ಹೊಸ ತೆರಿಗೆ ನೀತಿ ಪ್ರಕಟಿಸಿದ್ದಾರೆ. ವಿಚಿತ್ರ ಎಂದರೆ ಈ ನೀತಿಗಳನ್ನು ಕಟುವಾಗಿ ವಿರೋಧಿಸುತ್ತಿರುವವರು ಅವರ ಒಂದು ಕಾಲದ ಆಪ್ತ ಮಿತ್ರ ಖ್ಯಾತ ಉದ್ಯಮಿ, ಶ್ರೀಮಂತ ಅಲನ್ ಮಸ್ಕ್. ಟ್ರಂಪ್ ಅಽಕಾರಕ್ಕೆ ಬಂದ ಹೊಸತರಲ್ಲಿ ಮಸ್ಕ್‌ಗಾಗಿಯೇಒಂದು ಖಾತೆ ರಚಿಸಿ ಅಧಿಕಾರ ಕೊಟ್ಟರು. ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವುದು ಮತ್ತು ಸಿಬ್ಬಂದಿ ಸಂಖ್ಯೆಯನ್ನು ಇಳಿಸುವುದು ಅವರ ಕೆಲಸವಾಗಿತ್ತು. ಅದನ್ನು ಮಸ್ಕ್ ಬಹಳ ಉತ್ಸಾಹದಿಂದಲೇ ಮಾಡಿದರು. ಸುಮಾರು ಒಂದು ಟ್ರಿಲಿಯನ್ ಡಾಲರ್ ಹಣ ಉಳಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಟ್ರಂಪ್ ಮತ್ತು ಮಸ್ಕ್ ನಡುವಣ ಸ್ನೇಹ ಅನುಮಾನಕ್ಕೂ ಆಸ್ಪದ ನೀಡಿತ್ತು. ಟ್ರಂಪ್ ಅವರ ಸ್ನೇಹ ಬಳಸಿಕೊಂಡು ತಮ್ಮ ಉದ್ಯಮಗಳಿಗೆ ಅನುಕೂಲ ಮಾಡಿಕೊಳ್ಳಬಹುದು ಎಂಬುದೇ ಆ ಅನುಮಾನ. ಅಂಥದ್ದೇನೋ ಆಗುವ ಮೊದಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆಯಿತು. ಈಗ ಬಹಿರಂಗವಾಗಿರುವಂತೆ ಈ ಬಿಗ್ ಬ್ಯೂಟಿಫುಲ್ ಬಿಲ್ಲನ್ನು ಮಸ್ಕ್ ರೋಧಿಸುತ್ತಿದ್ದಾರೆ. ಗ್ರೀನ್ ಎನರ್ಜಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದಂತೆ ಕಾಣುತ್ತಿದೆ.
ಎಲೆಕ್ಟ್ರಾನಿಕ್ ಉದ್ಯಮಕ್ಕೆ ಹಿಂದಿನ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು ಟ್ರಂಪ್ ತಮ್ಮ ಮಸೂದೆಯಲ್ಲಿ ಕಡಿತ ಮಾಡಿದ್ದು ಮಸ್ಕ್‌ಗೆ ಒಪ್ಪಿಗೆ ಇಲ್ಲ. ಇದರಿಂದ ಸಹಜವಾಗಿ ಇವಿ ಕಾರು ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎನ್ನುವುದು ನಿಜ. ಜೊತೆಗೆ ಪೆಟ್ರೋಲ್, ಡೀಸೆಲ್ ಬಳಕೆ ಹೆಚ್ಚು ವಂತೆ ಟ್ರಂಪ್ ಮಾಡಿದ್ದು ಮಸ್ಕ್‌ಗೆ ಇಷ್ಟವಾಗಿಲ್ಲ. ನೈಸರ್ಗಿಕ ತೈಲ ಉತ್ಪಾದನೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಟ್ರಂಪ್ ನಿರ್ಧಾರ ತೆಗೆದುಕೊಂಡಿರುವುದರ ಹಿಂದೆ ದೊಡ್ಡ ಲೆಕ್ಕಾಚಾರವೇ ಇರಬಹುದಾದ ಸಾಧ್ಯತೆ ಇದೆ. ಇಬ್ಬರ ನಡುವಿನ ಮನಸ್ತಾಪ ಯಾವ ಹಂತಕ್ಕೆ ತಲುಪಿದೆಯೆಂದರೆ ಮಸೂದೆ ಅಂಗೀಕಾರವಾದ ದಿನವೇ ಮತ್ತೊಂದು ರಾಜಕೀಯ ಪಕ್ಷ ಘೋಷಿಸುವುದಾಗಿ ಮಸ್ಕ್ ಹೇಳಿದ್ದಾರೆ. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಮಸ್ಕ್ ಅವರು ಟ್ರಂಪ್ ಚುನಾವಣಾ ಪ್ರಚಾರಕ್ಕೆ ಸಾಕಷ್ಟು ಹಣ ನೀಡಿದ್ದಾರೆ.
ಅಷ್ಟೇ ಹಣ ಬಳಸಿ ಮತ್ತೊಂದು ರಾಜಕೀಯ ಪಕ್ಷ ಕಟ್ಟುವ ಹಠ ಮಸ್ಕ್ ಅವರದು. ಮಸ್ಕ್ ಹಾಗೇನಾದರೂ ಮಾಡಿದಲ್ಲಿ ಅವರನ್ನು ಸ್ವಂತ ದೇಶ ದಕ್ಷಿಣ ಆಫ್ರಿಕಾಕ್ಕೆ ಅಟ್ಟುತ್ತೇನೆ ಎಂದು ಟ್ರಂಪ್ ಗುಡುಗಿದ್ದಾರೆ. ಈಗ ಮಸೂದೆ ಅಂಗೀಕಾರವಾಗಿದೆ. ಮಸ್ಕ್ ರಾಜಕೀಯ ಪಕ್ಷ ಪ್ರಕಟಿಸಬೇಕು, ನಂತರ ಅವರನ್ನು ಟ್ರಂಪ್ ದಕ್ಷಿಣ ಆಫ್ರಿಕಾಕ್ಕೆ ವಾಪಸ್ ಕಳುಹಿಸಬೇಕು. ನಿಜವಾಗಿಯೂ ಇದೆಲ್ಲಾ ಆಗುವ ಸಂಭವ ಇಲ್ಲ. ಟ್ರಂಪ್ ಅಧ್ಯಕ್ಷರಾಗಿರಬಹುದು. ಆದರೆ ಎಲನ್ ಮಸ್ಕ್ ಕಟ್ಟಿರುವ ಉದ್ಯಮ ಕ್ಷೇತ್ರವನ್ನು ಅಮೆರಿಕ ಕಳೆದುಕೊಳ್ಳಬಹುದಾದ ಸಾಧ್ಯತೆ ತೀರಾ ಕಡಿಮೆ. ಮಸ್ಕ್ ಕೂಡ ಟ್ರಂಪ್ ಜೊತೆ ರಾಜಿ ಮಾಡಿಕೊಳ್ಳಬಹುದು. ಈ ಬೆಳವಣಿಗೆಗಳ ಮಧ್ಯೆಯೇ ಟ್ರಂಪ್ ಮತ್ತೊಬ್ಬರನ್ನು ಅವರ ಹುಟ್ಟಿದ ಊರಿಗೆ ಅಟ್ಟುವ ಮಾತನಾಡಿದ್ದಾರೆ. ಅಮೆರಿಕದ ಅತಿ ದೊಡ್ಡ ಮತ್ತು ಶ್ರೀಮಂತ ನಗರ ನ್ಯೂಯಾರ್ಕ್‌ನ ಮೇಯರ್ ಹುದ್ದೆಗೆ ಪ್ರಾಥಮಿಕ ಚುನಾವಣೆಗಳು ಆರಂಭವಾಗಿವೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋಹ್ರನ್ ಮಮದಾನಿ (೩೩) ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ ಜಯ ಸಾಧಿಸಿರುವುದು ದೊಡ್ಡ ಸಂಚಲನ ಮೂಡಿಸಿದೆ. ಮಮದಾನಿ ಮುಸ್ಲಿಮ್ ಜನಾಂಗಕ್ಕೆ ಸೇರಿದವರು. ಮೂಲಭೂತವಾಗಿ ಉಗಾಂಡದಿಂದ ವಲಸೆ ಬಂದು ಅಮೆರಿಕದಲ್ಲಿ ನೆಲೆ ಕಂಡುಕೊಂಡವರು. ತಂದೆ ಮಹಮದ್ ಮಮದಾನಿ ಕಾಲೇಜು ಪ್ರಾಧ್ಯಾಪಕರು. ತಾಯಿ ವಿಖ್ಯಾತ ಸಿನಿಮಾ ನಿರ್ದೇಶಕಿ ಮೀರಾ ನಾಯರ್ (ಸಲಾಮ್ ಬಾಂಬೆ, ಮಾನ್‌ಸೂನ್ ವೆಡ್ಡಿಂಗ್, ಮಿಸ್ಸಿಸಿಪ್ಪಿ ಮಸಾಲಾ ಸಿನಿಮಾಗಳು). ಅವರು ನ್ಯೂಯಾರ್ಕ್‌ನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದ್ದು ಬಹಿರಂಗವಾಗಿ ಪ್ಯಾಲೆಸ್ಟೇನ್ ಜನರ ಪರ ಮಾತನಾಡುತ್ತಿದ್ದಾರೆ.
ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿರುವ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಅವರು ಜಯಗಳಿಸುವುದು ಖಚಿತ ಎನ್ನುವಂಥ ಬೆಂಬಲ ಕಂಡುಬಂದಿದೆ. ಮಮದಾನಿ ಅವರ ಜನಪ್ರಿಯತೆ ಟ್ರಂಪ್ ಅವರನ್ನು ಕೆರಳಿಸಿದೆ. ಮೇಯರ್ ಆಗಿ ತಮ್ಮ ಮಾತನ್ನು ಉಲ್ಲಂಸಿದರೆ ಅವರ ವೀಸಾ ರದ್ದು ಮಾಡಿ ಉಗಾಂಡಕ್ಕೆ ಕಳುಹಿಸುವುದಾಗಿ ಟ್ರಂಪ್ ಹೇಳಿದ್ದು ವಿವಾದ ಎಬ್ಬಿಸಿದೆ. ಟ್ರಂಪ್ ಅವರ ವಿವಾದಗಳಿಗೆ ಇದು ಕೊನೆಯದಾಗಿರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವಾದಗಳು ಏಳುತ್ತಲೇ ಇರುತ್ತವೆ.
ಟ್ರಂಪ್ ಅವರು ಈ ಮೊದಲೇ ಏಕಾಏಕಿ ಜಾರಿಗೆ ತಂದ ಹೊಸ ತೆರಿಗೆ ನೀತಿ ಜಗತ್ತಿನಾದ್ಯಂತ ಆಕ್ರೋಶಕ್ಕೆ ಗುರಿಯಾಗಿದೆ. ಅವರು ತಂದ ಹೊಸ ತೆರಿಗೆ ಪದ್ಧತಿಯಿಂದಾಗಿ ವಿವಿಧ ದೇಶಗಳ ನಡುವಣ ವಾಣಿಜ್ಯ ಸಂಬಂಧಗಳು ಹಾಳಾಗಿವೆ. ಆದರೆ ಅವರು ಮಾತ್ರ ಹಾಕಿದ ಪಟ್ಟು ಬಿಟ್ಟಿಲ್ಲ. ಮಾತುಕತೆ ನಡೆಸಿ ಸುಂಕದ ಪ್ರಮಾಣ ನಿರ್ಧರಿಸುವ ನಿಲುವನ್ನು ಅವರು ತಳೆದಿದ್ದಾರೆ.