Mysore
18
clear sky

Social Media

ಶುಕ್ರವಾರ, 20 ನವೆಂಬರ್ 2026
Light
Dark

ಸಿನಿ ಮಂದಿಯ ಚಿತ್ತ ಅತಿಪ್ರತಿಷ್ಠಿತ ಚಿತ್ರೋತ್ಸವದತ್ತ

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ 

ಇಂದಿನಿಂದ ೨೮ರವರೆಗೆ ಗೋವಾದಲ್ಲಿ ನಡೆಯಲಿರುವ ‘ಚಿತ್ರಜಾತ್ರೆ’

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ (ಇಂಟರ್ ನ್ಯಾಷನಲ್ ಫಿಲಂಫೆಸ್ಟಿವಲ್ ಆಫ್ ಇಂಡಿಯಾ – ಇಫ್ಫಿ) ೫೭ನೇ ಆವೃತ್ತಿಯ ಅಂಕದ ಪರದೆ ಇಂದು ಸರಿಯಲಿದೆ. ಸಿನಿಮಾ ವಿದ್ಯಾರ್ಥಿಗಳು, ಸಿನಿಪ್ರೇಮಿಗಳು, ಕಲಾಪ್ರತಿಭೆಗಳು ಮತ್ತು ನಿರ್ದೇಶಕರು – ಎಲ್ಲರ ಗಮನ ಇಂದಿನಿಂದ ೨೮ರವರೆಗೆ ಗೋವಾದಲ್ಲಿ ನಡೆಯಲಿರುವ ಈ ಇಫಿಯತ್ತ. ‘ವಸುಧೈವ ಕುಟುಂಬಕಂ’ ಧ್ಯೇಯವಾಕ್ಯದ ಇಫಿ, ಇಂದು ಏಷ್ಯಾದ ಅತ್ಯಂತ ಪ್ರತಿಷ್ಠಿತ, ಅತಿದೊಡ್ಡ ಚಿತ್ರೋತ್ಸವವಾಗಿ ಬೆಳೆದಿದೆ. ಈ ಬಾರಿ ಚಿತ್ರೋತ್ಸವವು ‘ಗಡಿಗಳಿಲ್ಲದ ಕಥೆಗಳು’ ಎಂಬ ವಿಶೇಷ ಆಶಯದೊಂದಿಗೆ ಸಾಗಲಿದೆ. ಹೆಸರಾಂತ ಚಲನಚಿತ್ರ ನಿರ್ದೇಶಕ ಅಶುತೋಷ್ ಗೋವಾರಿಕರ್ ಈ ಬಾರಿಯ ಚಿತ್ರೋತ್ಸವ ನಿರ್ದೇಶಕರು.

‘ದೇಶ ಸುತ್ತು, ಕೋಶ ಓದು’ ಎಂಬ ಗಾದೆ ನಮಗೆ ಜೀವನಾನುಭವ ಮತ್ತು ಅಧ್ಯಯನದ ಮಹತ್ವವನ್ನು ನೆನಪಿಸುತ್ತದೆ. ಸಾಮಾನ್ಯವಾಗಿ ದೇಶ ಸುತ್ತುವುದು ಮತ್ತು ಕೋಶ ಓದುವುದು ಎರಡು ಪ್ರತ್ಯೇಕ ಚಟುವಟಿಕೆಗಳು. ಆದರೆ ಅಂತಾರಾಷ್ಟ್ರೀಯ ಚಿತ್ರೋತ್ಸವವೊಂದರಲ್ಲಿ ಇವೆರಡೂ ಏಕಕಾಲದಲ್ಲಿ ಸಾಧ್ಯವಾಗುತ್ತವೆ. ಜಗತ್ತಿನ ವಿವಿಧ ದೇಶಗಳ ಚಿತ್ರಗಳನ್ನು ನೋಡುವ ಮೂಲಕ ಪ್ರೇಕ್ಷಕ ದೇಶ ಸುತ್ತಿದ ಅನುಭವ ಪಡೆಯುತ್ತಾನೆ; ಆ ದೇಶಗಳ ಇತಿಹಾಸ, ಸಂಸ್ಕೃತಿ, ರಾಜಕೀಯ, ಸಾಮಾಜಿಕ ಸ್ಥಿತ್ಯಂತರ ಮತ್ತು ಮಾನವೀಯ ಸಂಬಂಧಗಳನ್ನು ಅರಿಯುವ ಮೂಲಕ ಕೋಶ ಓದಿದ eನವನ್ನೂ ಸಂಪಾದಿಸುತ್ತಾನೆ. ಒಂದರ್ಥದಲ್ಲಿ, ಚಿತ್ರೋತ್ಸವವೆಂದರೆ ಒಂದೇ ಸ್ಥಳದಲ್ಲಿ ಕುಳಿತು ಜಗತ್ತನ್ನು ಸುತ್ತುವ, ಜಗತ್ತನ್ನು ಓದುವ ಅಪೂರ್ವ ಅವಕಾಶವೇ ಸರಿ.

‘ಚಿತ್ರೋತ್ಸವಗಳು ಆರಂಭದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕಾರ್ಯಕ್ರಮದ ಭಾಗವಾಗಿ ಆರಂಭವಾದರೂ ಇಂದು ಅವು ಜಗತ್ತಿನಾದ್ಯಂತ ಸಿನಿಮಾ ಸಂಸ್ಕೃತಿಯನ್ನು ಪಸರಿಸುವ ಮತ್ತು ಜ್ಞಾನ ವಿನಿಮಯ ಮಾಡುವ ಪ್ರಮುಖ ಮಾಧ್ಯಮಗಳಾಗಿ ಮಾರ್ಪಟ್ಟಿವೆ. ವಿವಿಧ ದೇಶಗಳ ಜನರ ನಡುವಿನ ಪರಸ್ಪರ ತಿಳುವಳಿಕೆ, ಸಹಯೋಗ ಹಾಗೂ ಅಂತರರಾಷ್ಟ್ರೀಯ ಬಾಂಧವ್ಯದ ಅಭಿವೃದ್ಧಿಗೆ ಸಕ್ರಿಯ ಕೊಡುಗೆ ನೀಡುವ ಮೂಲಕ ವಿಶ್ವ ಏಕತೆಯನ್ನು ಇವು ಸಾಧಿಸುತ್ತಿವೆ’.-೧೯೫೨ರ ಜನವರಿ ೨೪ರಂದು ಭಾರತದ ಮೊದಲ ಚಿತ್ರೋತ್ಸವದ ಉದ್ಘಾಟನಾ ಸಂದರ್ಭದ ಮಾತು.

ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಂದಿನ ರಾಜ್ಯ ಸಚಿವರಾಗಿದ್ದ ಆರ್ ಆರ್ ದಿವಾಕರ್ ಆ ಚಿತ್ರೋತ್ಸವವನ್ನು ಉದ್ಘಾಟಿಸಿದ್ದರು. ಲೂಮಿಯರ್ ಸೋದರರು ಜುಲೈ ೭, ೧೮೯೬ ರಂದು ಮುಂಬೈಯ ವ್ಯಾಟ್ಸನ್ ಹೋಟೆಲ್‌ನಲ್ಲಿ ಪ್ರದರ್ಶಿಸಿದ ಎಂಟ್ರಿ ಆ- ಸಿನಿಮಾಟೋಗ್ರಾಫ್, ದಿ ಸೀ ಬಾತ್, ಅರೈವಲ್ ಆಫ್ ಎ ಟೈನ್, ಎ ಡೆಮಾಲಿಷನ್,ಲೇಡಿಸ್ ಅಂಡ್ ಸೋಲ್ಜರ‍್ಸ್ ಆನ್ ವೀಲ್ಸ್ ಮತ್ತು ಲೀವಿಂಗ್ ದಿ ಫ್ಯಾಕ್ಟರಿ- ಈ ಆರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಇತಿಹಾಸ ಆರಂಭವಾಯಿತು.

ಮುಂಬೈನಲ್ಲಿ ಮಾತ್ರವಲ್ಲ, ನಂತರ ಮದರಾಸು (೦೮/೦೨/೫೨), ದೆಹಲಿ(೨೧/೦೨/೫೨), ಕೊಲ್ಕತ್ತಾ (೨೮/೦೨/೫೨)ಗಳಲ್ಲೂ ಈ ಉತ್ಸವ ನಡೆಯಿತು. ಮುಂದಿನ ನಾಲ್ಕು ಆವೃತ್ತಿಗಳು ದೆಹಲಿಯಲ್ಲಿ ನಡೆದವು. ೧೯೭೫ರ ೫ನೇ ಚಿತ್ರೋತ್ಸವದಲ್ಲಿ ಭಾರತದ ರಾಷ್ಟ್ರೀಯ ಹಕ್ಕಿಯಾದ ನವಿಲನ್ನು ಒಳಗೊಂಡ ಖಾಯಂ ಲಾಂಛನವನ್ನು ಅಳವಡಿಸಿಕೊಳ್ಳಲಾಯಿತು. ದೆಹಲಿಯಲ್ಲಿ ನಡೆದಾಗ ಸ್ಪರ್ಧಾತ್ಮಕವಾಗಿ, ದೆಹಲಿಯ ಹೊರಗೆ ಪರ್ಯಾಯ ವರ್ಷಗಳಲ್ಲಿ ನಡೆದಾಗ ಫಿಲ್ಮೋತ್ಸವವಾಗಿ ಈ ಚಿತ್ರೋತ್ಸವದ ಆಯೋಜನೆ ಆಗುತ್ತಿತ್ತು. ನಿರ್ಮಾಪಕರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟ(ಎಫ್ಐಎಪಿಎಫ್)ದ ಮಾನ್ಯತೆ ಪಡೆದಿರುವ ‘ಇಫಿ’ಗೆ ‘ಎ’ ವರ್ಗದ ೧೭ ಪ್ರಮುಖ ಚಿತ್ರೋತ್ಸವಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ.

ಪ್ರತಿಷ್ಠಿತ ‘ಕಾನ್’ ಅಥವಾ ‘ವೆನಿಸ್’ ಚಿತ್ರೋತ್ಸವಗಳ ಮಾದರಿಯಲ್ಲಿ ಭಾರತಕ್ಕೂ ಒಂದು ಸುಂದರ ಹಾಗೂ ಶಾಶ್ವತ ತಾಣ ಬೇಕು ಎನ್ನುವ ಯೋಚನೆಗೆ ಇಂಬು ನೀಡಿದವರು ಅಂದು ಗೋವಾದ ಮುಖ್ಯಮಂತ್ರಿಗಳಾಗಿ ಬಂದ ಮನೋಹರ್ ಪಾರಿಕ್ಕರ್. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಂದಿನ ಸಚಿವರಾಗಿದ್ದ ಸುಷ್ಮಾ ಸ್ವರಾಜ, ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಗೋವಾಕ್ಕೆ ‘ಇಫಿ’ಯನ್ನು ಉಡುಗೊರೆಯಾಗಿ ಕೊಡುವುದಾಗಿ ಮಾತು ಕೊಟ್ಟಿದ್ದರಂತೆ. ಅದರಂತೆ ಪಾರಿಕ್ಕರ್ ಬಂದರು ಮಾತ್ರವಲ್ಲ, ಅತಿ ಕಡಿಮೆ ಅವಧಿಯಲ್ಲಿ ಚಿತ್ರೋತ್ಸವ ಹಮ್ಮಿಕೊಳ್ಳಲು ಬೇಕಾದ ಸೌಲಭ್ಯವನ್ನು ಒದಗಿಸಿಕೊಟ್ಟರು. ದೇಶದ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಗೋವಾದಲ್ಲಿ ೨೦೦೪ರಿಂದ ಈ ಉತ್ಸವ ನಡೆಯುತ್ತಿದೆ.

ಗೋವಾಕ್ಕೆ ಸ್ಥಳಾಂತರಗೊಂಡ ನಂತರ ‘ಇಫಿ’ ಜಗತಿಕ ಚಲನಚಿತ್ರ ಉದ್ಯಮದ ವಾಣಿಜ್ಯ ಮತ್ತು ತಾಂತ್ರಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತಿದೆ. ವಿಶೇಷವಾಗಿ, ೨೦೦೭ರಿಂದ ಆರಂಭವಾದ ಎನ್‌ಎಫ್ಡಿಸಿ ಫಿಲ್ಮ್ ಬಜಾರ್, ದಕ್ಷಿಣ ಏಷ್ಯಾದ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಇದು ಜಾಗತಿಕ ನಿರ್ಮಾಪಕರು ಹಾಗೂ ಭಾರತೀಯ ಸ್ವತಂತ್ರ ಚಿತ್ರನಿರ್ಮಾಪಕರ ನಡುವೆ ಸಹ-ನಿರ್ಮಾಣ ಮತ್ತು ಆರ್ಥಿಕ ಒಪ್ಪಂದಗಳಿಗೆ ಪ್ರಮುಖ ವೇದಿಕೆಯಾಗಿದೆ. ಕಳೆದೆರಡು ವರ್ಷಗಳಿಂದ ಫಿಲಂ ಬಜರ್ ಆಯೋಜನೆಯ ಹೊಣೆ ಪ್ರಸಾರಭಾರತಿಯ ಅಂಗವಾದ ವೇವಸ್‌ನದು. ಇದೀಗ ದಕ್ಷಿಣ ಏಷ್ಯಾದ ಪ್ರಮುಖ ಅಂತರರಾಷ್ಟ್ರೀಯ ಚಲನಚಿತ್ರ ಮಾರುಕಟ್ಟೆಯಾಗಿ ಬೆಳೆದಿದೆ. ಇಫಿಯ ಜೊತೆಯಾಗಿ ನಡೆಯುವ ಈ ಕಾರ್ಯಕ್ರಮ, ಚಿತ್ರೋತ್ಸವದ ಸಾಂಸ್ಕೃತಿಕ ಮತ್ತು ಕಲಾತ್ಮಕ ಆಯಾಮಕ್ಕೆ ಚಿತ್ರೋದ್ಯಮದ ವ್ಯಾವಹಾರಿಕ ಆಯಾಮವನ್ನೂ ಸೇರಿಸುತ್ತದೆ.

ಇಫಿ ಸ್ಪರ್ಧಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆ, ಐಸಿಎಫ್ಟಿಫ್ ಗಾಂಧಿ ಮೆಡಲ್ ಪ್ರಶಸ್ತಿ, ನಿರ್ದೇಶಕನ ಮೊದಲ ಅತ್ಯುತ್ತಮ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾದ ಇಫಿ, ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ವೆಬ್ ಸರಣಿಗಳಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಡಿಜಿಟಲ್ ಕ್ರಾಂತಿಗೂ ಮನ್ನಣೆ ನೀಡುತ್ತಿದೆ. ಸ್ಪರ್ಧೇತರ ವಿಭಾಗದಲ್ಲಿ ಸಮಕಾಲೀನ ವಿಶ್ವ ಸಿನಿಮಾ, ದೇಶಕೇಂದ್ರಿತ ಚಿತ್ರಗಳು, ಪುನರ್‌ರೂಪಿತ ಮಹಾನ್ ಚಿತ್ರಗಳು, ಪ್ರಯೋಗಾತ್ಮಕ ಚಿತ್ರಗಳು ಮಿಷನ್ ಲೈಫ್, ಯುನಿಸೆಫ್ ಅಟ್ ಐಐಎಫ್ಐ. ಗಲಾ ಪ್ರೀಮಿಯರ್ ಹೀಗೆ ವಿವಿಧ ವಿಭಾಗಗಳಲ್ಲದೆ, ಶ್ರದ್ಧಾಂಜಲಿ, ಶತಮಾನೋತ್ಸವ ಗೌರವ ಇತ್ಯಾದಿ ಚಿತ್ರಗಳ ಪ್ರದರ್ಶನವೂಇವೆ. ಚಿತ್ರೋತ್ಸವದ ಇನ್ನೊಂದು ಪ್ರಮುಖ ವಿಭಾಗ ಭಾರತೀಯ ಪನೋರಮಾ. ಹಿಂದಿನ ವರ್ಷ ದೇಶದ ವಿವಿಧ ಭಾಷೆಗಳಲ್ಲಿ ತಯಾರಾದ ಶ್ರೇಷ್ಠ ಕಲಾತ್ಮಕ ಚಿತ್ರಗಳಲ್ಲಿ ಅತ್ಯುತ್ತಮ ಕಥಾ ಚಿತ್ರಗಳು ಮತ್ತು ಕಥೇತರ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಜೊತೆಗೆ ಮುಖ್ಯವಾಹಿನಿಯ ಐದು ಚಿತ್ರಗಳೂ ಇರುತ್ತವೆ. ಈ ಬಾರಿ ಕಥಾ ಚಿತ್ರಗಳ ವಿಭಾಗದಲ್ಲಿ ಕನ್ನಡದ ಎರಡು ಚಿತ್ರಗಳು ಮತ್ತು ಒಂದು ತುಳು ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಭಾರತೀಯ ಪನೋರಮಾದ ಮುಖ್ಯವಾಹಿನಿ ವಿಭಾಗಕ್ಕೆ ಆಯ್ಕೆಯಾದ, ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ ೧’ ಚಿತ್ರ ಅಂತಾರಾಷ್ಟ್ರೀಯ ಸ್ಪರ್ಧಾವಿಭಾಗಕ್ಕೂ ಆಯ್ಕೆಯಾಗಿದೆ. ಕದಂಬರ ಕಾಲಘಟ್ಟದ ಈ ಕಥೆಯು ಜನಪದ, ನಂಬಿಕೆ ಮತ್ತು ಅರಣ್ಯ ಸಮುದಾಯಗಳನ್ನು ರಕ್ಷಿಸುವ ಹೋರಾಟದ ಕಥಾನಕ. ಪನೋರಮಾದಲ್ಲಿ ಆಯ್ಕೆಯಾದ ಇನ್ನೊಂದು ಚಿತ್ರ ಪಿ. ಶೇಷಾದ್ರಿ ನಿರ್ದೇಶನದ ‘ರೂಬಿ-ಕ್ಯೂಬ್’. ಇದು ಕುಟುಂಬವೊಂದರ ಎರಡು ತಲೆಮಾರುಗಳ ಕಥೆಯನ್ನು ಹೇಳುತ್ತದೆ.

ಇಲ್ಲಿ ‘ರೂಬಿಕ್ಸ್ ಕ್ಯೂಬ’ ಸಂಬಂಧಗಳ ಸಂಕೀರ್ಣತೆಯ ಸಂಕೇತ. ಅನುಪಮಾ ಶರಧಿ ನಿರ್ದೇಶನದ ‘ಪಿಲಿ ಚನ್ನೆ’ ಪನೋರಮಾದಲ್ಲಿ ಆಯ್ಕೆ ಆಗಿರುವ ತುಳು ಚಿತ್ರ. ತನ್ನ ಅಜ್ಜಿಯಿಂದ ಸಾಂಪ್ರದಾಯಿಕ ಗಿಡಮೂಲಿಕೆ ಚಿಕಿತ್ಸಾ ಪದ್ಧತಿಯನ್ನು ಕಲಿಯುವ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳ ಕಥೆ. ಸಾಂಪ್ರದಾಯಿಕ ಜ್ಞಾನ, ಧೈರ್ಯ ಮತ್ತು ಪೂರ್ವಜರ ಜ್ಞಾನದ ಸಂರಕ್ಷಣೆಯ ವಿಷಯಗಳನ್ನು ಹೇಳುವ ಈ ಚಿತ್ರ ಇಫಿಯಲ್ಲಿ ತನ್ನ ವಿಶ್ವ ಪ್ರೀಮಿಯರ್ ಕಾಣಲಿದೆ. ಡಾ.ಪ್ರದೀಪ್ ಕೆಂಚನೂರು ನಿರ್ದೇಶನದ ‘ದಿ ಹಗ್ ಆಫ್ ಎಂಪ್ಟಿನೆಸ್’ ಮತ್ತು ಅಭಿಷೇಕ್ ನಿರ್ದೇಶನದ ‘ಉಳಿದಿದ್ದು ಸಂಪಿಗೆ ಮಾತ್ರ’ ಕಿರುಚಿತ್ರಗಳು ಕಥೇತರ ವಿಭಾಗದಲ್ಲಿ ಪ್ರದರ್ಶನ ಕಾಣಲಿರುವ ಕನ್ನಡ ಚಿತ್ರಗಳು.

ಚಿತ್ರರಂಗದಲ್ಲಿ ಆಸಕ್ತರಾಗಿರುವ ಯುವ ಪ್ರತಿಭಾವಂತರನ್ನು ಉತ್ತೇಜಿಸುವ ಸಲುವಾಗಿ ಆರಂಭವಾದ ‘ನಾಳೆಯ ಸೃಜನಶೀಲ ಮನಸ್ಸುಗಳು’ ಚಿತ್ರೋತ್ಸವದ ಅರ್ಥಪೂರ್ಣ ವಿಭಾಗ. ಸಿನಿಮಾದ ವಿವಿಧ ವಿಭಾಗಗಳ ಆಯ್ದ ವಿದ್ಯಾರ್ಥಿಗಳಿಗೆ ೪೮ ಗಂಟೆಗಳಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸುವ ಸವಾಲು. ಸಿನಿಮಾ ರಂಗಕ್ಕೆ ಹೊಸ ತಲೆಮಾರಿನ ತಂತ್ರಜ್ಞರನ್ನು ಪರಿಚಯಿಸಲು ಇದು ನೆರವಾಗುತ್ತದೆ. ಈ ವಿಭಾಗಕ್ಕೆ ಸೇರಲು ಬರುವ ಆಸಕ್ತರ ಸಂಖ್ಯೆ ಮೂಲಗಳ ಪ್ರಕಾರ ಸಾವಿರಕ್ಕೂ ಹೆಚ್ಚು.

ದೇಶ-ವಿದೇಶಗಳ ಆಯ್ದ ಚಲನಚಿತ್ರಗಳ ಪ್ರದರ್ಶನವಷ್ಟೇ ಅಲ್ಲದೆ, ಸಿನಿಮಾದ ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸಂವಾದ, ಆಧುನಿಕ ತಂತ್ರಜ್ಞಾನದ ಪರಿಚಯ ಇವೇ ಮೊದಲಾದ ಅವಕಾಶ ಇಫ್ಫಿ ಎಂದಲ್ಲ, ಯಾವುದೇ ಚಿತ್ರೋತ್ಸವದಲ್ಲಿ ಸಿನಿಮಾಸಕ್ತರಿಗೆ ಲಭ್ಯ. ಅದರಲ್ಲೂ ಸಿನಿಮಾ ವಿದ್ಯಾರ್ಥಿಗಳಿಗೆ ಇದೊಂದು ಕಮ್ಮಟವೇ ಸರಿ. ಈ ಬಾರಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ಕಾರ್ಯಕ್ರಮ ‘ಸಮಾನಾಂತರ ಸಿನೆಮಾದ ನೈತಿಕ ಜಗತ್ತು: ಗಿರೀಶ್ ಕಾಸರವಳ್ಳಿ ಅವರ ೫೦ ವರ್ಷಗಳು’ ಶೀರ್ಷಿಕೆಯಲ್ಲಿ ನಡೆಯಲಿದೆ. ಅವರ ಚೊಚ್ಚಲ ಕಥಾಚಿತ್ರ ‘ಘಟಶ್ರಾದ್ಧ’ದಿಂದ ‘ತಬರನ ಕಥೆ’, ‘ತಾಯಿ ಸಾಹೇಬ’ ಮತ್ತು ‘ದ್ವೀಪ’ ಸೇರಿದಂತೆ ಎಲ್ಲ ಚಿತ್ರಗಳಲ್ಲಿ ಕಾಸರವಳ್ಳಿ ಅವರ ಚಲನಚಿತ್ರಗಳು ಸಾಮಾಜಿಕ ಅನ್ಯಾಯ, ನೈತಿಕ ಆಯ್ಕೆಗಳು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ಪರಿಶೋಧಿಸಿವೆ. ಈ ಸಂವಾದವು ಅವರ ಕಥೆ ಹೇಳುವ ವಿಧಾನ ಹಾಗೂ ಸಿನೆಮಾ ಮತ್ತು ಸಾಮಾಜಿಕ ಪ್ರeಯ ನಡುವಿನ ಸಂಬಂಧವನ್ನು ವಿಶ್ಲೇಷಿಸಲಿದೆ.

‘ನಾನು ಫಿಲ್ಮ ಸ್ಕೂಲ್‌ಗೆ ಹೋಗಲಿಲ್ಲ, ನಾನು ಸಿನಿಮಾಗಳಿಗೆ ಹೋದೆ’ ಎಂದ ಕ್ವೆಂಟಿನ್ ಟ್ಯಾರಂಟಿನೊ, ದಕ್ಷಿಣ ಕೊರಿಯಾದ ಕಿಮ್ ಕಿ-ಡುಕ್, ಕ್ರಿಸ್ಟೋಫರ್ ನೋಲನ್,  ಫ್ರೆಂಚ್ ಹೊಸ ಅಲೆಯ ಮಾಂತ್ರಿಕರೆಂದೇ  ಜನಪ್ರಿಯರಾದ ಟ್ರುಫೋ ಮತ್ತು ಗೊದಾರ್ದ್, ಇರಾನ್‌ನ ಅಬ್ಬಾಸ್ ಕಿಯಾರೊಸ್ತಮಿ ‘ಲಾರ್ಡ್ ಆಫ್ ದಿ ರಿಂಗ್ಸ್’ ಖ್ಯಾತಿಯ ಪೀಟರ್ ಜಕ್ಸನ್, ಭಾರತದ ಸತ್ಯಜಿತ್ ರೇ, ಮೃಣಾಲ್ ಸೇನ್, ಬುದ್ಧದೇವ್ ದಾಸ್ ಗುಪ್ತಾ, ಗೌತಮ್ ಘೋಷ್ ಸೇರಿದಂತೆ ಹಲವು ಮಂದಿ ವಿಶ್ವವಿಖ್ಯಾತ ನಿರ್ದೇಶಕರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು, ಚಲನಚಿತ್ರಾಗಾರ ಹಾಗೂ ಚಿತ್ರಸಮಾಜಗಳ ಪ್ರದರ್ಶನಗಳನ್ನೇ ತಮ್ಮ ಪಾಠಶಾಲೆಯಾಗಿಸಿಕೊಂಡರು ಎನ್ನುವುದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಕೊಡುಗೆಗೆ ಸಾಕ್ಷಿ..

” ‘ದೇಶ ಸುತ್ತು, ಕೋಶ ಓದು’ ಎಂಬ ಗಾದೆ ನಮಗೆ ಜೀವನಾನುಭವ ಮತ್ತು ಅಧ್ಯಯನದ ಮಹತ್ವವನ್ನು ನೆನಪಿಸುತ್ತದೆ. ಸಾಮಾನ್ಯವಾಗಿ ದೇಶ ಸುತ್ತುವುದು ಮತ್ತು ಕೋಶ ಓದುವುದು ಎರಡು ಪ್ರತ್ಯೇಕ ಚಟುವಟಿಕೆಗಳು. ಆದರೆ ಅಂತಾರಾಷ್ಟ್ರೀಯ ಚಿತ್ರೋತ್ಸವವೊಂದರಲ್ಲಿ ಇವೆರಡೂ ಏಕಕಾಲದಲ್ಲಿ ಸಾಧ್ಯವಾಗುತ್ತವೆ.”

 

 

Tags:
error: Content is protected !!