Mysore
18
clear sky

Social Media

ಶುಕ್ರವಾರ, 20 ನವೆಂಬರ್ 2026
Light
Dark

ಟ್ಯಾಕ್ಸಿ-ಆಟೋ ಚಾಲಕರಿಗೆ ಮಾರಕವಾಗಿರುವ ಬೈಕ್ ಟ್ಯಾಕ್ಸಿ

ಪುನೀತ್ ಮಡಿಕೇರಿ

ಮಡಿಕೇರಿಯಲ್ಲಿ ೧೦ಕ್ಕೂ ಹೆಚ್ಚು ಖಾಸಗಿ ಬೈಕ್ ಕಂಪೆನಿಗಳು ಕಾರ್ಯನಿರ್ವಹಣೆ; ಬಾಡಿಗೆ ಆಟೋ, ಕಾರು ಚಾಲಕರಿಗೆ ಸಂಕಷ್ಟ 

ಮಡಿಕೇರಿ: ನಗರದಲ್ಲಿ ಬಾಡಿಗೆ ಬೈಕ್ ಮತ್ತು ರ‍್ಯಾಪಿಡೋ ಬೈಕ್‌ಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಕಡಿವಾಣ ಹಾಕಬೇಕು ಅಥವಾ ಸ್ಥಗಿತಗೊಳಿಸಬೇಕು ಎಂಬ ಆಗ್ರಹ ಟ್ಯಾಕ್ಸಿ ಚಾಲಕರಿಂದ ಕೇಳಿಬರುತ್ತಿದೆ.

ಪ್ರವಾಸೋದ್ಯಮದಿಂದ ಕೊಡಗು ಪ್ರಖ್ಯಾತವಾಗಿದೆ. ವಾರಾಂತ್ಯ ಹಾಗೂ ಮಳೆಗಾಲದಲ್ಲಿ ಕೊಡಗು ಜಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇದನ್ನೇ ನಂಬಿಕೊಂಡಿರುವ ಆಟೋ, ಟ್ಯಾಕ್ಸಿ ಚಾಲಕರು ಜೀವನ ಕಟ್ಟಿಕೊಂಡಿದ್ದಾರೆ. ಆದರೆ, ಕಳೆದ ಕೆಲವು ವರ್ಷ ಗಳಿಂದ ಕೊಡಗಿನಲ್ಲಿ ಬಾಡಿಗೆ ಬೈಕ್ ಹಾಗೂ ಆಪ್ ಆಧಾರಿತ ಬೈಕ್ ಟ್ಯಾಕ್ಸಿಗಳ ಹಾವಳಿಯಿಂದ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಟ್ಯಾಕ್ಸಿ ಚಾಲಕರು ಹಾಗೂ ಆಟೋ ಚಾಲಕರು, ಮಾಲೀಕರ ಬದುಕು ಬೀದಿಗೆ ಬಿದ್ದಂತಾಗಿದೆ.

ಮಡಿಕೇರಿ ನಗರದಲ್ಲಿ ಸುಮಾರು ೧೦ಕ್ಕೂ ಅಧಿಕ ಖಾಸಗಿ ಬೈಕ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಲೋನ್ ಮೂಲಕ ಎಲ್ಲೋ ಬೋರ್ಡ್ ಕಾರು ಮತ್ತು ಆಟೋ ಖರೀದಿ ಮಾಡಿರುವ ಟ್ಯಾಕ್ಸಿ ಮತ್ತು ಆಟೋ ಚಾಲಕರ ಜೀವನ ಅತಂತ್ರ ವಾಗಿದ್ದು, ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

ನಿಯಮ ಪಾಲನೆಯಿಲ್ಲ: ಒಂದು ಖಾಸಗಿ ಬೈಕ್ ಕಂಪೆನಿಯಲ್ಲಿ ೧೪-೧೫ ಬೈಕ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಇಂದು ಒಂದೊಂದು ಕಂಪೆನಿಯಲ್ಲಿ ೧೦೦ಕ್ಕೂ ಅಧಿಕ ಬೈಕ್ಗಳಿವೆ. ಜತೆಗೆ ವೈಟ್ ಬೋರ್ಡ್ ಬೈಕ್‌ಗಳ ನ್ನೂ ಕೂಡ ಬಾಡಿಗೆಗೆ ನೀಡಲಾಗುತ್ತಿದೆ. ಕಂಪೆನಿ ಗಳಿಗೆ ತನ್ನದೇ ಆದ ಮೆಡಿಕಲ್, ವರ್ಕ್‌ಶಾಪ್ ಇತ್ಯಾದಿಗಳಿರಬೇಕು. ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಕೇವಲ ಹಣ ಮಾಡುವ ಉದ್ದೇಶ ಮಾತ್ರ ಎದ್ದುಕಾಣುತ್ತಿದೆ. ಪ್ರವಾಸಿಗರಿಗೆ ಯಾವುದೇ ರಕ್ಷಣೆಯಿಲ್ಲ. ಒಂದು ಬೈಕ್‌ನಲ್ಲಿ ಒಬ್ಬ ಹಿಂಬದಿ ಸವಾರ ಕೂರಬೇಕು ಎಂಬ ನಿಯಮವಿದ್ದರೂ ಕೂಡ ೨,೩ ಜನ ಕುಳಿತು ಸಾಗುವುದು ಮಾಮೂಲಿಯಾಗಿದೆ. ಕೆಲವು ಬೈಕ್ ಚಾಲಕರ ಬಳಿಲೈಸೆನ್ಸ್ ಕೂಡ ಇರುವುದಿಲ್ಲ. ಅಪಘಾತ ವಾದರೆ ಘಟನೆಯನ್ನು ಮುಚ್ಚಿ ಹಾಕಲಾಗುತ್ತಿದೆ. ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾದರೆ

ಮುಖ್ಯವಾಗಿ ರೆಂಟಲ್ ಬೈಕ್ ಸ್ಥಗಿತ ಗೊಳಿಸಬೇಕು ಎಂದು ಟ್ಯಾಕ್ಸಿ ಚಾಲಕರು ಒತ್ತಾಯಿಸುತ್ತಿದ್ದಾರೆ. ಊಟಿ, ಮಂಗಳೂರು, ಕೇರಳ, ಕೊಚ್ಚಿ ಮೊದಲಾದ ಕಡೆಗಳಲಿ ಬಾಡಿಗೆ ಬೈಕ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಅದೇ ರೀತಿಕೊಡಗು ಜಿಲ್ಲೆಯಲ್ಲಿಯೂ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

” ನಗರದಲ್ಲಿ ಬಾಡಿಗೆ ಬೈಕ್ ಮತ್ತು ಆಪ್ ಆಧಾರಿತ ಬೈಕ್‌ಗಳನ್ನು ನಿಷೇಧಿಸಬೇಕು ಎಂದು ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಮತ್ತು ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘಗಳು ಮನವಿ ಸಲ್ಲಿಸಿವೆ. ಈ ಸಂಬಂಧ ನಗರದಲ್ಲಿರುವ ರೆಂಟಲ್ ಬೈಕ್ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.”

-ಎಸ್.ಟಿ.ಸತೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ

” ಕೊಡಗಿನಲ್ಲಿ ೧೨ ಸಾವಿರಕ್ಕೂ ಅಧಿಕ ಆಟೋಗಳು, ೨ ಸಾವಿರ ಟ್ಯಾಕ್ಸಿಗಳಿವೆ. ೨೫ ಬೈಕ್‌ಗೆ ಅನುಮತಿ ಪಡೆದು ನೂರಾರು ರೆಂಟಲ್ ಬೈಕ್‌ಗಳನ್ನು ಓಡಿಸುತ್ತಿದ್ದಾರೆ. ಈಗ ಆಪ್ ಆಧಾರಿತ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದರಿಂದ ಪ್ರಯಾಣಿಕರಿಲ್ಲದೇ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ವೈಟ್ ಬೋರ್ಡ್ ವಾಹನಗಳನ್ನು ಸಾರಿಗೆ ಇಲಾಖೆಯವರು ಜಪ್ತಿ ಮಾಡಬೇಕು.”

-ಡಿ.ಎಚ್.ಮೇದಪ್ಪ, ಜಿಲ್ಲಾಧ್ಯಕ್ಷರು, ಆಟೋ ಮಾಲೀಕ, ಚಾಲಕರ ಸಂಘ

” ಕೊಡಗು ಜಿಲ್ಲೆಗೆ ಆಪ್ ಆಧಾರಿತ ಬೈಕ್ ಟ್ಯಾಕ್ಸಿ ಹಾಗೂ ರೆಂಟಲ್ ಬೈಕ್ ಅವಶ್ಯಕತೆ ಇಲ್ಲ. ಆದರೆ, ರೆಂಟಲ್ ಬೈಕ್ ಹಾವಳಿ ಮಿತಿಮೀರಿದೆ. ಎಂದರಲ್ಲಿ ಪಾರ್ಕಿಂಗ್, ಹೆಲ್ಮೆಟ್ ಇಲ್ಲದೆ ಬೈಕ್ ರೈಡ್, ಟ್ರಿಪಲ್ ರೈಡಿಂಗ್ ಮಾಡುತ್ತಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕರು ಜೀವನ ನಿರ್ವಹಣೆಗೆ ಸಾಲ ಮಾಡಿ ವಾಹನಗಳನ್ನು ಖರೀದಿಸಿ ಜೀವನದ ಚಕ್ರ ಸಾಗಿಸುತ್ತಿದ್ದಾರೆ. ಬಾಡಿಗೆ ಬೈಕ್ ಹಾಗೂ ಆಪ್ ಆಧಾರಿತ ಬೈಕ್ ಟ್ಯಾಕ್ಸಿಗಳಿಂದ ಟ್ಯಾಕ್ಸಿ ಮಾಲೀಕರಿಗೆ ನಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು.”

-ಸಂತೋಷ್ ಕಾರ್ಯಪ್ಪ, ಗೌರವ ಅಧ್ಯಕ್ಷರು, ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘ

 

 

Tags:
error: Content is protected !!