Mysore
18
clear sky

Social Media

ಶುಕ್ರವಾರ, 20 ನವೆಂಬರ್ 2026
Light
Dark

ಓದುಗರ ಪತ್ರ: ನಾಗಲಕ್ಷ್ಮಿ ಚೌಧರಿ ಅವರ ಜನಪರ ಕಾಳಜಿ ನಿಜಕ್ಕೂ ಮಾದರಿ

ಓದುಗರ ಪತ್ರ

ಜನಪರ ಕಾಳಜಿ ಇಟ್ಟುಕೊಂಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ರಾಜದ್ಯಂತ ಪ್ರವಾಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲಿಸುವುದು, ರೋಗಿಗಳ ಸಮಸ್ಯೆಗಳನ್ನು ಆಲಿಸುವುದು, ಜನಸಾಮಾನ್ಯರ ಅಹವಾಲು ಸ್ವೀಕರಿಸುವುದು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿರುವ ಅವರ ಕಾರ್ಯವೈಖರಿ ಮೆಚ್ಚುವಂತಹದ್ದು.

ಹಾಗೆಯೇ ಶಾಲಾ ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿರುವುದು ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. ತಮ್ಮ ಕ್ಷೇತ್ರದ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುವುದು, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದು, ಶಾಲಾ ಮಕ್ಕಳ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸುವುದು ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಆದ್ಯ ಕರ್ತವ್ಯಲ್ಲವೇ? ಅವರು ಮಾಡಬೇಕಾದ ಕಾರ್ಯವನ್ನು ಈ ನಾಗಲಕ್ಷ್ಮಿ ಮಾಡುತ್ತಿದ್ದಾರೆ. ಜನರ ಮತ ಪಡೆದು ಅಧಿಕಾರಕ್ಕೆ ಬಂದವರು ಅವರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಜನರು ಅಂತಹವರಿಗೆ ಏಕೆ ಮತ ನೀಡಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಈ ನಾಗಲಕ್ಷ್ಮಿ ಚೌಧರಿ ಅವರು ತೋರಿಸುತ್ತಿರುವ ಜನಪರ ಕಾಳಜಿ ಶಾಸಕರು ಮತ್ತು ಸಚಿವರಿಗೆ ಮಾದರಿಯಾಗಬೇಕು. ಜನರ ನೋವಿಗೆ ಸ್ಪಂದಿಸುವುದು, ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಸಮಸ್ಯೆಗಳಿಗೆ ಸ್ಥಳದ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದು ನಿಜವಾದ ಜನಸೇವೆ. ಅಧಿಕಾರವೆಂದರೆ ಕೇವಲ ಹುದ್ದೆಯಲ್ಲ, ಅದು ಜನರ ಸೇವೆ ಮಾಡುವ ಜವಾಬ್ದಾರಿ ಎಂಬುದನ್ನು ನಾಗಲಕ್ಷ್ಮಿ ಚೌಧರಿ ಅವರು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಡುತ್ತಿದ್ದಾರೆ.

-ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ.

 

Tags:
error: Content is protected !!