ಪ್ರಕಾಶ್ ರಾಜ್ (ನಟ, ಪ್ರಗತಿಪರ ಚಿಂತಕ)
ದೆಹಲಿಯಲ್ಲಿದ್ದೆ. . . ಸಿನೆಮಾ ಒಂದರ ಚಿತ್ರೀಕರಣ. ರಾತ್ರಿಯೆಲ್ಲ ಶೂಟಿಂಗ್, ಹಗಲು ಬಿಡುವು. ದೆಹಲಿಯ ಬೇಸಿಗೆ ಸುಡುತ್ತಿದೆ. . . ಬದಲಾದ ರಾಜ್ಯ ಸರ್ಕಾರ. . . ದೇಶದ ಎಲ್ಲ ಸಂಸದರೂ ಬಂದು ಸೇರಿದ್ದಾರೆ. . . ಪಾರ್ಲಿಮೆಂಟ್‌ನಲ್ಲಿ ವಕ್ಛ್ ಕಾಯಿದೆಯ ಬಿಸಿ. . . ಉಮರ್ ಖಾಲಿದ್‌ನ ನೆನಪಾಯಿತು. ಸೆರೆಯಾಗಿ ಐದು ವರುಷಗಳಾಗುತ್ತಿವೆ. . . ತಿಹಾರ್ ಜೈಲಿನಲ್ಲಿ ಬಿರುಬೇಸಿಗೆಯನ್ನು ಹೇಗೆ ಸಹಿಸುವನೋ? ಅವನನ್ನು ಹೆತ್ತವರ ನೆನಪಾಯಿತು. ತಂದೆ ತಾಯಿಯನ್ನು ಭೇಟಿಯಾಗಲೆಂದು ಅವರ ಮನೆಗೆ ಹೊರಟೆ.
ಅಂದಹಾಗೆ ನಿಮಗೆ ಉಮರ್ ಖಾಲಿದ್ ಎಂಬ ದೇಶದ್ರೋಹಿ ಗೊತ್ತೇ? ಆದರೆ ಅದಕ್ಕಿಂತ ಮುಂಚೆ ದೇಶದ್ರೋಹವೆಂದರೇನು ಎಂದು ತಿಳಿದುಕೊಳ್ಳೋಣವೇ? ಅದೇ ಗೊತ್ತಿಲ್ಲದೆ ಯಾರು ದೇಶದ್ರೋಹಿ- ಯಾರು ದೇಶಪ್ರೇಮಿ ಎಂದು ಹೇಗೆ ಗೊತ್ತಾಗುತ್ತದೆ ಅಲ್ಲವೇ? ಅದನ್ನು ತಿಳಿದುಕೊಳ್ಳಲು ಬಹಳ ಹಿಂದೆ ಹೋಗಬೇಕಿಲ್ಲ. ನಮ್ಮ ಇತ್ತೀಚಿನ ಇತಿಹಾಸದ ಒಂದು ಉದಾಹರಣೆಯನ್ನು ಅರ್ಥ ಮಾಡಿಕೊಂಡರೆ ಸಾಕು.
ತನ್ನ ಅಹಿಂಸೆ ತತ್ವದ ಮೂಲಕ ಇಡೀ ದೇಶವನ್ನು ಒಂದುಗೂಡಿಸಿದ ಮಹಾತ್ಮ ಗಾಂಧಿ ಧಾರ್ಮಿಕ ಸೌಹಾರ್ದತೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ‘ದೇಶವೆಂದರೆ ಕೇವಲ ಭೂಪಟವಲ್ಲ – ಅಲ್ಲಿ ವಾಸಿಸುವ ಜನರು’ ಎಂಬ ಘನವಾದ ತಿಳಿವಳಿಕೆ ಅವರದಾಗಿತ್ತು. ಆದ್ದರಿಂದಲೇ ಈ ದೇಶದಲ್ಲಿ ವಾಸಿಸುವ ಎಲ್ಲ ಜನರಿಗೂ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕಿದೆ ಎಂದು ಅವರು ಹೇಳುತ್ತಿದ್ದರು. ಈ ದೇಶದಲ್ಲಿರುವ ಎಲ್ಲಾ ಜನರು ಯಾವುದೇ ಭಾಷೆಯನ್ನು ಮಾತಾಡಿದರೂ, ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರೂ, ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಸೋದರರೆ ಎಂದು ಪ್ರತಿಪಾದಿಸುತ್ತಿದ್ದರು. ವಿಪರ್ಯಾಸವೆಂದರೆ ಬ್ರಿಟಿಷರ ಭಾರತದಲ್ಲಿ ಸುರಕ್ಷಿತರಾಗಿದ್ದ ಈ ದೇಶಪ್ರೇಮಿ ಗಾಂಧಿಯನ್ನು ಸ್ವತಂತ್ರ ಭಾರತದಲ್ಲಿ ಇದೆ ಕಾರಣಕ್ಕಾಗಿಯೇ ಗೋಡ್ಸೆ ಎಂಬ ಒಬ್ಬ ಧಾರ್ಮಿಕ ಮೂಲಭೂತವಾದಿ ಕೊಂದುಹಾಕಿದ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲಂತೂ, ಗಾಂಧಿಯೇ ದೇಶದ್ರೋಹಿಯಾಗಿ, ಗೋಡ್ಸೆಯೇ ದೇಶಪ್ರೇಮಿಯಾಗಿಬಿಟ್ಟ. ಇದು ಆ ಐತಿಹಾಸಿಕ ಉದಾಹರಣೆ. ಅವರ ಕೈಯಲ್ಲೇ ಈಗ ಅಧಿಕಾರವಿರುವುದರಿಂದ ಇತಿಹಾಸದುದ್ದಕ್ಕೂ ಪ್ರತ್ಯೇಕತೆ ಮತ್ತು ಧಾರ್ಮಿಕ ದ್ವೇಷವನ್ನು ಬಿತ್ತುತ್ತಾ ಬಂದವರು ತಮ್ಮನ್ನು ತಾವೇ ದೇಶಪ್ರೇಮಿಗಳೆಂದು ಘೋಷಿಸಿಕೊಳ್ಳಲು ಮತ್ತೆ 75 ವರ್ಷಗಳು ಕಾಯುವ ಅಗತ್ಯ ಬೀಳಲಿಲ್ಲ. ಹೀಗಾಗಿ ಕೂಡಲೇ ಅವರು ತಮ್ಮನ್ನು ತಾವೇ ದೇಶಪ್ರೇಮಿಗಳೆಂದು ಘೋಷಿಸಿಕೊಂಡಿದ್ದಾರೆ. ತಮ್ಮ ಕೋಮುದ್ವೇಷದ ರಾಜಕಾರಣಕ್ಕೆ ಅಡ್ಡಿಯಾಗಿ ನಿಲ್ಲುವ ಪ್ರತಿಯೊಬ್ಬರಿಗೂ ದೇಶದ್ರೋಹಿಗಳೆಂಬ ಪಟ್ಟಿಯನ್ನು ಕಟ್ಟುತ್ತಿದ್ದಾರೆ.
ಉಮರ್ ಖಾಲಿದ್ ಎಂಬ ಅತ್ಯಂತ ಕ್ರಿಯಾಶೀಲ ಜೀವನ್ಮುಖಿ ಯುವಕ ದೇಶದ್ರೋಹಿಯಾಗಿದ್ದು ಹೀಗೆ . . .
ಆತ ಮಾಡಿದ್ದಾದರೂ ಏನು? ಭಾರತದ ವೈವಿಧ್ಯತೆಯೇ ಭಾರತದ ಸಂವಿಧಾನದ ಆತ್ಮ ಎಂದು ಆತ ಅರ್ಥಮಾಡಿಕೊಂಡಿದ್ದು. . . ಅದನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದವರ ವಿರುದ್ಧ ಆತ ಬೀದಿಗಿಳಿದದ್ದು. . . ಅಲ್ಪಸಂಖ್ಯಾತ ಸಮುದಾಯಗಳನ್ನು ದಮನ ಮಾಡುತ್ತಿದ್ದ ಆಳುವವರ ವಿರುದ್ಧ ಹೋರಾಡಿದ್ದು. . . ಕೋಮು ದ್ವೇಷ ಬಿತ್ತುತ್ತಾ, ಅಮಾಯಕರನ್ನು ಕೊಂದು ಅದರಿಂದ ರಾಜಕೀಯ ಲಾಭ ಮಾಡಿಕೊಳ್ಳುವವರ ವಿರುದ್ಧ ಬೀದಿಯಲ್ಲಿ ಹೋರಾಡಿದ್ದು. . .
ಹರಿವ ಪ್ರವಾಹ ಹರಿದತ್ತಲೇ ಸಾಗಲು ಸತ್ತ ಮೀನುಗಳು ಸಾಕು. . . ಪ್ರವಾಹದ ವಿರುದ್ಧ ಈಜಲು ಜೀವಂತ ಮೀನುಗಳು ಬೇಕು. . . ಅಲ್ಲವೇ? ಉಮರ್ ಖಾಲಿದ್ ಕೂಡ ಹಾಗೆ. ಅವರು ನಿರ್ಭೀತನಾಗಿ ಹೋರಾಡಿದರು. ಧರ್ಮವೆಂಬುದು ಖಾಸಗಿ ವಿಷಯವೆಂದೂ, ರಾಜಕೀಯದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲವೆಂದು ಪ್ರತಿಪಾದಿಸಿದ ಗಾಂಧಿಯ ಮಗನೊಬ್ಬ ಇದನ್ನಲ್ಲದೆ ಬೇರೇನೂ ಮಾಡಬಲ್ಲ? “ಸರ್ವಾಧಿಕಾರದ ವಿರುದ್ಧದ ಈ ಯುದ್ಧ ನಮ್ಮಿಂದ ಪ್ರಾರಂಭವಾದದ್ದೂ ಅಲ್ಲ ಅಥವಾ ನಮ್ಮನ್ನು ಕೊಂದರೆ ಮುಗಿಯುವುದೂ ಇಲ್ಲ” ಎಂದು ಗರ್ಜಿಸಿದ್ದ ಭಗತ್ ಸಿಂಗನ ಸಂತಾನ ಈ ಉಮರ್ ಖಾಲಿದ್.
ಉಮರ್ ಖಾಲಿದ್ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ, ಈ ದೇಶದ ಆತ್ಮವಾದ ಭ್ರಾತೃತ್ವವನ್ನು ನಾಶಗೊಳಿಸುವ ಉದ್ದೇಶವನ್ನು ಹೊಂದಿದ್ದ ನಾಗರಿಕತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ಹೋರಾಡಿದ್ದರು. ನಿರಾಶ್ರಿತ, ದಮನಿತ ಮುಸ್ಲಿಮರಿಗೆ ನಾಗರಿಕತ್ವ ನಿರಾಕರಿಸುವ ಈ ಕಾಯಿದೆಯನ್ನು ಬೆಂಬಲಿಸುವವರ ಮತ್ತು ವಿರೋಧಿಸುವವರ ನಡುವೆ 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಘರ್ಷಣೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಅದರಲ್ಲಿ ಕೊಲ್ಲಲ್ಪಟ್ಟ 53 ಜನರಲ್ಲಿ ಬಹುಪಾಲು ಜನರು ಮುಸ್ಲಿಮರೇ ಆಗಿದ್ದರು.
ಈ ಹಿಂಸಾತ್ಮಕ ಘರ್ಷಣೆಯನ್ನು ಪ್ರಚೋದಿಸುವ ರೀತಿಯಲ್ಲಿ ಭಾಷಣಗಳನ್ನು ಮಾಡಿದ ಆಳುವ ಪಕ್ಷದ ಸದಸ್ಯರು ಈಗಲೂ ಸ್ವತಂತ್ರವಾಗಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಸರ್ಕಾರವು ದಂಗೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಉಮರ್ ಖಾಲಿದ್‌ರನ್ನು ಭಯೋತ್ಪಾದನೆ ನಿಗ್ರಹ ಕಾಯಿದೆ (ಯುಎಪಿಎ )ಯಡಿ ಬಂಧಿಸಿತು.
ಸೆಷನ್ ಕೋರ್ಟು ಮತ್ತು ಹೈಕೋರ್ಟು ಉಮರ್ ಖಾಲಿದ್‌ರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಅರ್ಜಿಯೊಂದು ದಾಖಲಾಗಿದ್ದು, 2023 ರಿಂದಲೂ ನನೆಗುದಿಯಲ್ಲಿ ಬಿದ್ದಿದೆ. ಒಬ್ಬ ಆರೋಪಿಯ ಮೇಲೆ ಆರೋಪವನ್ನು ದೃಢೀಕರಿಸದೆ, ವಿಚಾರಣೆಯನ್ನೂ ನಡೆಸದೆ ಐದು ವರ್ಷಗಳ ಕಾಲ ಸೆರೆಮನೆಯಲ್ಲಿ ಕೊಳೆ ಹಾಕುವುದು ಕಾನೂನುಬಾಹಿರವೆಂದು ಕಾನೂನು ತಜ್ಞರು ಹೇಳುತ್ತಾರೆ.
“ಕೇವಲ ಇಪ್ಪತ್ತು ನಿಮಿಷಗಳನ್ನು ಸುಪ್ರೀಂ ಕೋರ್ಟು ಕೊಟ್ಟರೂ ಸಾಕು, ಉಮರ್ ಖಾಲಿದ್ ಯಾವುದೇ ಅಪರಾಧವನ್ನು ಎಸಗಿಲ್ಲವೆಂದು ಸಾಬೀತು ಮಾಡಬಹುದು” ಎಂದು ಉಮರರ ವಕೀಲರು ಹೇಳುತ್ತಾರೆ. ಆದರೆ ಉಮರರ ಜಾಮೀನು ಅರ್ಜಿಯ ವಿಚಾರಣೆ ಮಾಡಲು 2023 ರಿಂದಲೂ ಸುಪ್ರೀಂ ಕೋರ್ಟಿಗೆ ಇಪ್ಪತ್ತು ನಿಮಿಷ ಒದಗಿಸುವಷ್ಟು ವ್ಯವಧಾನವಾಗಲಿಲ್ಲ. ಉಮರನ ಮನೆಗೆ ನಾನು ಹೊರಟ ದಾರಿಯಲ್ಲಿ ಅವನ ಗೆಳೆಯರು ನನ್ನೊಂದಿಗೆ ಜೊತೆಯಾದರು.
ಅನ್ಯಾಯದ ವಿರುದ್ಧ ನಿರ್ಭೀತಿಯಿಂದ ಹೋರಾಡಿದ್ದಕ್ಕೆ ತಿಹಾರ್ ಜೈಲಿನಲ್ಲಿ ಸೆರೆವಾಸ ಆನುಭವಿಸುತ್ತಿರುವ ಉಮರರನ್ನು ಪ್ರತಿವಾರ ಅವರ ಸ್ನೇಹಿತರು ಭೇಟಿಯಾಗುತ್ತಾರೆ.
“ಈ ಬಿಡುವಿಲ್ಲದ ಜೀವನದಲ್ಲಿ ಪ್ರತಿವಾರ ಉಮರರನ್ನು ಭೇಟಿಯಾಗಲು ಹೇಗೆ ಸಮಯ ಮಾಡಿಕೊಳ್ಳುತ್ತೀರಿ? ” ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವನ ಸ್ನೇಹಿತರೊಬ್ಬರು ಕೊಟ್ಟ ಉತ್ತರ ಇದು.
“ಯಾವುದೋ ಒಂದು ಆಪಾದನೆಯ ಮೇಲೆ ಜೈಲುಪಾಲಾದ ಅಮೀರ್ ಎಂಬ ಯುವಕನನ್ನು ಭೇಟಿ ಮಾಡಲು ಮೊದಲ ಮೂರು ತಿಂಗಳು ಅವನ ಅಪ್ಪ, ಅಮ್ಮ, ಸ್ನೇಹಿತರು ಬರುತ್ತಿದ್ದರಂತೆ. ಆದರೆ ಬಡತನದ ಕಾರಣಗಳಿಂದ ಆ ನಂತರ ಅವರುಗಳು ಜೈಲಿಗೆ ಹೆಚ್ಚು ಬಂದು ನೋಡಿ ಹೋಗಲು ಆಗಲಿಲ್ಲವಂತೆ. ಆವರೆಗೆ ಆತ್ಮವಿಶ್ವಾಸದಿಂದ ಇದ್ದ ಅಮೀರ್ ಆ ನಂತರ ನಿಧಾನಕ್ಕೆ ಸ್ವಲ್ಪ ಸ್ವಲ್ಪವಾಗಿ ಆತ್ಮವಿಶ್ವಾಸ ಕಳೆದುಕೊಳ್ಳತೊಡಗಿದನಂತೆ. ಬಹಳ ಸುಲಭವಾಗಿ ಜಾಮೀನು ಪಡೆದುಕೊಳ್ಳಬಹುದಾಗಿದ್ದ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಅಮೀರ್ ಹತ್ತು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಕೊಳೆಯುವಂತಾಯಿತು. ತನ್ನವರಿಂದ ದೂರ ಮಾಡುವ ಸೆರೆಮನೆ ಮತ್ತು ಯಾವುದೇ ಸಹಾಯ-ಸಹಕಾರಗಳೂ ಕಾಣದ ಸಂದರ್ಭಗಳು ಮನುಷ್ಯರ ಆತ್ಮವಿಶ್ವಾಸವನ್ನು ಕುಂದಿಸುವುದಲ್ಲದೆ, ಅವರಲ್ಲಿ ಶೂನ್ಯಭಾವ ಉಂಟುಮಾಡುತ್ತದೆ.
ಅಮೀರನ ಅನುಭವಗಳು ಪ್ರತಿವಾರ ಭೇಟಿಯಾಗಲೇಬೇಕೆಂಬ ಉಮರನ ಸ್ನೇಹಿತರ ನಿರ್ಣಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಲ್ಲಿಂದಾಚೆಗೆ ಉಮರರ ಯಾರಾದರೂ ಒಬ್ಬ ಸ್ನೇಹಿತರು “ನಿನ್ನೊಂದಿಗೆ ನಾವಿದ್ದೇವೆ” ಎಂದು ಹೇಳಿ ಬರಲಾದರೂ ವಾರಕ್ಕೊಮ್ಮೆ ಕಡ್ಡಾಯವಾಗಿ ಭೇಟಿಯಾಗುತ್ತಿದ್ದೇವೆ ಎಂದು ಆ ಸ್ನೇಹಿತರು ನನಗೆ ಹೇಳಿದರು.
ಜನರಿಗಾಗಿ ಹೋರಾಡುವವರನ್ನು ಸರ್ಕಾರವು ಜೈಲಿಗೆ ಹಾಕಿ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತದೆ. ಈ ದೇಶಕ್ಕಾಗಿ ಹೋರಾಡಿ ಜೈಲು ಸೇರಿದ ತಮ್ಮ ಸ್ನೇಹಿತನನ್ನು ಯಾವ ಕಾರಣಕ್ಕೂ ಈ ಮಾನಸಿಕ ದಾಳಿಗೆ ಬಲಿಯಾಗದಂತೆ ರಕ್ಷಿಸಲು ಪ್ರಯತ್ನಿಸುತ್ತಿರುವ ಈ ಸ್ನೇಹಿತರ ಬಗ್ಗೆ ಹೆಮ್ಮೆಯೆನಿಸುತ್ತದೆ.
ಉಮರ್‌ನ ಮನೆ ತಲುಪಿದಾಗ ತಾಯಿ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾ, ತಂದೆ ವಕ್ಫ್ ಕಾಯಿದೆಯ ಬಗೆಗಿನ ಚರ್ಚೆಯೊಂದಕ್ಕೆ ಹೋಗಿದ್ದು, ಇನ್ನರ್ಧ ಗಂಟೆಯಲ್ಲಿ ಬರುತ್ತಾರೆಂದರು. ಈದ್ ಹಬ್ಬ ಮುಗಿದು ಕೆಲವು ದಿನಗಳಾಗಿತ್ತಷ್ಟೆ. . . ಸಿಹಿ ತಿನಿಸುಗಳನ್ನು ನಗುಮುಖದಿಂದ ತಾಯಿ ನಮ್ಮ ಮುಂದಿಡುತ್ತಿದ್ದರೂ ಹೆತ್ತ ಮಗನಿಂದ ದೂರವಾಗಿ ಅನುಭವಿಸುತ್ತಿರುವ ನೋವು ಕಂಗಳಲ್ಲಿ ಮನೆ ಮಾಡಿತ್ತು. “ನನ್ನ ಮಗ ಬೇಗ ಬಿಡುಗಡೆಯಾಗಿ ಖಂಡಿತಾ ಹೊರಬರುತ್ತಾನೆ. . . ನಮಗೆ ಇನ್ನೂ ನ್ಯಾಯಾಂಗದ ಬಗ್ಗೆ ವಿಶ್ವಾಸವಿದೆ” ಎಂದು ಆ ತಾಯಿ ನಮ್ಮನ್ನೇ ಸಂತೈಸುವ ಮಾತನಾಡಿದಾಗ, ನನ್ನ ಕಣ್ಣು ತುಂಬಿ ಬಂತು. ಅಷ್ಟರಲ್ಲಿ ತಂದೆ ಬಂದವರು ತಾವೇ ಎಲ್ಲರಿಗೂ ಚಹ ಮಾಡಿ ತಂದು ಮಾತಿಗೆ ಕುಳಿತರು. “ನಿಮ್ಮ ಮಗ ಒಂಟಿಯಲ್ಲ, ಆತನ ಜೊತೆ ನಾವಿದ್ದೇವೆ” ಎಂದೆ. “ಯಾವ ಅನ್ಯಾಯದ ವಿರುಧ್ಧ ಹೋರಾಡುತ್ತಾ ನನ್ನ ಮಗ ಜೈಲು ಸೇರಿದ್ದಾನೆಂದು ನಮಗೂ ಗೊತ್ತಿದೆ. ನಾವೂ ಅವನ ಜೊತೆಗಿದ್ದೇವೆ” ಎಂದರು. ನನ್ನ ಎದೆ ತುಂಬಿ ಬಂತು. ಮಾತಿನ ನಡುವೆ ಉಮರನ ಗೆಳೆಯ “ ಬಾಬಾ. . . ಜಾಮೀನು ಸಿಕ್ಕು , ಬಿಡುಗಡೆಯಾದ ಕೂಡಲೇ ಉಮರನನ್ನು ಪ್ರಕಾಶ್ ಸರ್ ಜೊತೆ ದಕ್ಷಿಣ ಭಾರತಕ್ಕೆ ಕಳುಹಿಸಿ ಬಿಡೋಣ ಸುರಕ್ಷಿತನಾಗಿರುತ್ತಾನೆ” ಎಂದದ್ದಕ್ಕೆ ಉಮರನ ತಂದೆ, ಆ ಗೆಳೆಯನನ್ನು ದಿಟ್ಟಿಸಿ ನೋಡುತ್ತ ಏನಂದರು ಗೊತ್ತೆ? “ಹೋರಾಟಕ್ಕೆ ಕಾರಣವಿರುವುದು. . . ಇಲ್ಲಿ. . . ದೆಹಲಿಯಲ್ಲಿ. ಇದನ್ನು ಬಿಟ್ಟು ಬೇರಲ್ಲಿಗೆ ಹೋಗಿ ಸುಮ್ಮನಿರಬೇಕೇ? ”
ಅಷ್ಟೇ ವಿಷಯ. . . ನಾವು ಹೋರಾಡುತ್ತೇವೆ ಎಂಬುದೇ ನಾವು ಬದುಕಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಹಕ್ಕುಗಳೊಂದಿಗೆ ಘನತೆಯಿಂದ ಬದುಕಲು ಹೋರಾಡಲೇಬೇಕು ಬದುಕುತ್ತಿರುವಾಗಲೇ ಸಾಯಬಾರದು. ಅಲ್ಲವೇ? ಉಮರ್ ಖಾಲಿದ್ ಮತ್ತು ಅವನನ್ನು ಹೆತ್ತವರು ಭಾರತದ ನಿಜವಾದ ದೇಶಪ್ರೇಮಿಗಳೆಂದು ಇತಿಹಾಸ ಖಂಡಿತ ಸಾಕ್ಷ್ಯ ಹೇಳುತ್ತದೆ.
ಈ ಸರ್ಕಾರ ಕಳೆದ ಐದು ವರ್ಷಗಳಿಂದ ಬಂಧಿಸಿಟ್ಟಿರುವುದು ಕೇವಲ ಉಮರ್ ಖಾಲಿದ್‌ರನ್ನಲ್ಲ.
ಬದಲಿಗೆ ಈ ದೇಶದ ಪ್ರತಿಯೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ. . . ಘನತೆಯಿಂದ ಬದುಕುವ ಹಕ್ಕನ್ನು. . . ಅದನ್ನು ಖಾತರಿಪಡಿಸಿರುವ ಸಂವಿಧಾನವನ್ನು ಎಂಬುದನ್ನು ನಾವು ಮರೆಯದಿರೋಣ.