ಮೈಸೂರು : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಪ್ರಯುಕ್ತ ‘ಮ್ಯೂಸಿಯಮ್ಸ್ ಆನ್ ವೀಲ್ಸ್’ ಶೀರ್ಷಿಕೆಯಡಿ ವಿಶೇಷಚೇತನ ಮಕ್ಕಳಿಗೆ ವಸ್ತು ಸಂಗ್ರಹಾಲಯ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಇರ್ವೀನ್ ರಸ್ತೆಯಲ್ಲಿರುವ ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯ ಕಲಾ ಗ್ಯಾಲರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭವನ್ನು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಉಸ್ತುವಾರಿ ಅಧಿಕಾರಿ ಅಶೋಕ್‌ವರ್ಧನ್ ಉದ್ಘಾಟಿಸಿದರು.
ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಕಾಲದಲ್ಲಿ ಬಳಸಲಾದ ನಾಣ್ಯಗಳು, ಐತಿಹಾಸಿಕ ಛಾಯಾಚಿತ್ರಗಳು, ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳು ಮತ್ತು ದಕ್ಷಿಣ ಭಾರತದ ಪ್ರಖ್ಯಾತ ರಾಜವಂಶಸ್ಥರಾದ ಶಾತವಾಹನರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ಬಹುಮನಿಗಳು, ಆದಿಲ್ ಷಾಹಿಗಳು ಮತ್ತು ನಿಜಾಮರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದು, ಗತಕಾಲದ ಹಲವಾರು ಸ್ಮಾರಕಗಳು ಹಾಗೂ ಪ್ರಾಚ್ಯ ವಸ್ತುಗಳು ವಿಶೇಷ ಮಕ್ಕಳ ಗಮನಸೆಳೆದವು.
ನಂತರ ವಿಶೇಷಚೇತನರ ಪ್ರವಾಸವೂ ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯದಿಂದ ಹೊರಟು ಪಯಣ(ಕಾರ್) ಮ್ಯೂಸಿಯಂ, ಪ್ರಾಕೃತಿಕ ಪ್ರಾದೇಶಿಕ ವಸ್ತುಸಂಗ್ರಹಾಲಯ ಹಾಗೂ ರೈಲ್ವೆ ಮ್ಯೂಸಿಯಂ ಮೂಲಕ ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯ ತಲುಪಿತು.




