Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಪವರ್ ಸೆಂಟರ್ ರಾಜಕಾರಣ; ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ

Power Center Politics; Turmoil in State Congress

ಬೆಂಗಳೂರು ಡೈರಿ

ಆರ್.ಟಿ.ವಿಠ್ಠಲಮೂರ್ತಿ

ಕಳೆದ ಶುಕ್ರವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಾಡಿದ ಮಾತು ಕೈ ಪಾಳೆಯದಲ್ಲಿ ಸಂಚಲನ ಮೂಡಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ಅಧಿಕಾರ ಹಿಡಿದಾಗ ಹೇಗಿದ್ದರೋ ಈಗ ಹಾಗಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ರಾಜಣ್ಣ ಅವರು ಇದಕ್ಕೆ ಪಕ್ಷದಲ್ಲೀಗ ಪವರ್ ಸೆಂಟರ್‌ಗಳು ಜಾಸ್ತಿ ಇರುವುದೇ ಕಾರಣ ಎಂದರು.

ಅರ್ಥಾತ್, ಈ ಹಿಂದೆ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಆದರೆ ಈಗ ಮೂರು ಮೂರು ಪವರ್ ಸೆಂಟರ್‌ಗಳಿವೆ ಎಂಬುದು ಅವರ ಹೇಳಿಕೆಯ ಸಾರಾಂಶ. ಈ ಹೇಳಿಕೆಯನ್ನು ಅರ್ಥೈಸಿಕೊಳ್ಳಲು ತುಂಬ ಪ್ರಯಾಸ ಪಡಬೇಕಿಲ್ಲ, ಯಾಕೆಂದರೆ ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಗೆ ಒಂದು ಪವರ್ ಸೆಂಟರೋ ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಾ ಮತ್ತೊಂದು ಪವರ್ ಸೆಂಟರ್. ಉಳಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಮಗದೊಂದು ಪವರ್ ಸೆಂಟರ್.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರದ ಅವಧಿಯನ್ನು ಕಣ್ಣ ಮುಂದಿಟ್ಟುಕೊಂಡರೆ ಈ ಮೂರು ಪವರ್ ಸೆಂಟರ್ ಗಳು ಯಾವ್ಯಾವ ಕಾಲಘಟ್ಟದಲ್ಲಿ ಹೇಗ್ಹೇಗೆ ಹೆಜ್ಜೆ ಇಡುತ್ತಾ ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಒಬ್ಬರು ಇಟ್ಟ ಹೆಜ್ಜೆಯನ್ನು ಮತ್ತೊಬ್ಬರು ಹೇಗೆ ನಿಯಂತ್ರಿಸುತ್ತಿದ್ದಾರೆ ಎಂಬುದು ಅರ್ಥ ವಾಗುತ್ತದೆ. ವಸ್ತುಸ್ಥಿತಿ ಎಂದರೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನವರಿಗೆ ತಮ್ಮ ಪಕ್ಕ ಮತ್ತೊಂದು ಪವರ್ ಸೆಂಟರ್ ಮೇಲೆದ್ದು ನಿಲ್ಲುವುದು ಬೇಕಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಮತ್ತೊಂದು ಪವರ್ ಸೆಂಟರ್ ಆಗದೆ ವಿಧಿಯಿಲ್ಲ. ಹೀಗಾಗಿ ಶುರುವಿನಿಂದಲೇ ಈ ಇಬ್ಬರ ನಡುವೆ ಪವರ್ ಸೆಂಟರ್ ಹೋರಾಟ ನಡೆಯುತ್ತಾ ಬಂತು. ಈ ಪೈಕಿ ಸಿದ್ದರಾಮಯ್ಯ ಪಡೆ, ರಾಜ್ಯದಲ್ಲಿ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಎಂದರೆ, ಇಂತಹ ಮಾತುಗಳಿಂದ ಪದೇಪದೇ ಸಿಟ್ಟಿಗೆದ್ದ ಡಿ.ಕೆ.  ಶಿವಕುಮಾರ್ ದಿಲ್ಲಿಗೆ ಹೋಗಿ ಇಂತಹ ಮಾತನಾಡುವವರ ಬಾಯಿ ಮುಚ್ಚಿಸುತ್ತಾ ಬಂದರು.

ಹೀಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಾ ಬಂದ ಪವರ್ ಸೆಂಟರ್ ಹೋರಾಟ ದಿಲ್ಲಿಯ ಮುಖ ನೋಡುತ್ತಿದ್ದಂತೆ ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಂದು ಪವರ್ ಸೆಂಟರ್ ಆಗಿ ಮೇಲೆದ್ದು ಕುಂತರು. ಎಐಸಿಸಿ ಅಧ್ಯಕ್ಷರಾಗಿ ಅವರಿಗೆ ಒಂದು ಶಕ್ತಿ ಇದೆಯಾದರೂ ಕರ್ನಾಟಕದ ವಿಷಯ ಬಂದಾಗ ತಾವು ಪವರ್ ಸೆಂಟರ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಖರ್ಗೆಯವರಿಗೂ ಇದೆ. ಏಕೆಂದರೆ ತಾವು ಪವರ್ ಸೆಂಟರ್ ಆಗದೆ ಹೋದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಂಘರ್ಷವನ್ನು ನಿಯಂತ್ರಣದಲ್ಲಿಡುವುದು ಹೇಗೆ? ಎಲ್ಲಕ್ಕಿಂತ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದ ರಾಜಕಾರಣದಲ್ಲಿ ಸುಮಾರು ಅರ್ಧ ಶತಮಾನದಷ್ಟು ಅವಧಿಯನ್ನು ಕಳೆದವರು. ಒಂದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ತವಕಿಸಿದವರು. ಆದರೆ ಯಾವಾಗ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದೊಳಗೆ ಬಂದರೋ ಇದಾದ ನಂತರ ಕಾಂಗ್ರೆಸ್ ವರಿಷ್ಠರು ರಾಜ್ಯ ರಾಜಕಾರಣದಿಂದ ಖರ್ಗೆಯವರನ್ನು ಒಕ್ಕಲೆಬ್ಬಿಸಿದರು.

ಹೀಗೆ ರಾಜ್ಯದಿಂದ ಒಕ್ಕಲೆದ್ದು ದಿಲ್ಲಿಗೆ ಹೋದ ಮಲ್ಲಿಕಾರ್ಜುನ ಖರ್ಗೆ ಅವರು ದಿಲ್ಲಿಯಲ್ಲೇನೂ ನೆಮ್ಮದಿಯಿಂದಿಲ್ಲ. ಏಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿ ಗದ್ದುಗೆಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ವಿಫಲವಾದ ನಂತರ ಖರ್ಗೆಯವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮಾಡಲು ತುಂಬಾ ಕೆಲಸಗಳಿಲ್ಲ.

ಹೀಗಾಗಿ ಅವರಿಗೆ ಒಂದು ಬಾರಿ ಕರ್ನಾಟಕಕ್ಕೆ ಮರಳಿ ಇಲ್ಲಿ ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷೆ ಉಳಿದುಕೊಂಡೇ ಇದೆ. ಹೀಗಾಗಿ ದಿನ ಕಳೆದಂತೆ ಅವರು ಕೂಡಾ ರಾಜ್ಯ ಕಾಂಗ್ರೆಸ್ ಪಾಲಿಗೆ ಮತ್ತೊಂದು ಪವರ್ ಸೆಂಟರ್ ಆಗಿ ಕುಳಿತುಕೊಂಡಿದ್ದಾರೆ. ಹೀಗೆ ಬೆಳೆದು ನಿಂತಿರುವ ಮೂರು ಪವರ್ ಸೆಂಟರ್‌ಗಳು ತಮ್ಮತಮ್ಮ ಲೆಕ್ಕಾಚಾರದೊಂದಿಗೆ ದಾಳ ಉರುಳಿಸುತ್ತಿರುವುದರಿಂದ ಆಗಾಗ ಅವು ಪರಸ್ಪರ ಘಟ್ಟಿಸುತ್ತವೆ. ಹೀಗೆ ಘಟ್ಟಿಸುತ್ತಿರುವುದು ಅತಿಯಾದ ಪರಿಣಾಮವಾಗಿ ಏನಾಗಿದೆ ಎಂದರೆ, ನಿರ್ಣಾಯಕ ಹೋರಾಟಕ್ಕೆ ಮೂರೂ ಪವರ್ ಸೆಂಟರ್‌ಗಳು ಸಜ್ಜಾಗುವಂತೆ ಆಗಿದೆ.

ಈ ಪೈಕಿ ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಲೇಬೇಕು ಎಂಬ ಹಟವಿದ್ದರೆ, ಪಕ್ಷ ನನ್ನಿಂದ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಯಾವ ಕಾರಣಕ್ಕೂ ಮುಖ್ಯಮಂತ್ರಿ ಪಟ್ಟ ಬಿಡಬಾರದು ಎಂಬುದು ಸಿದ್ದರಾಮಯ್ಯ ಅವರ ಪಟ್ಟು. ಹೀಗಾಗಿ ಒಬ್ಬರ ಪಟ್ಟು ಮತ್ತೊಬ್ಬರ ಹಟ ಘಟ್ಟಿಸಿ ಏನಾಗಿದೆ ಎಂದರೆ, ಈ ಸರ್ಕಾರ ಇರುತ್ತದೋ ಉರುಳುತ್ತದೋ ಎಂಬ ಅನು ಮಾನ ಕಾಂಗ್ರೆಸ್‌ನ ಹಲವು ಸಚಿವರು, ಶಾಸಕರಲ್ಲಿ ಕಾಣಿಸಿಕೊಂಡಿದೆ.

ಇಂತಹ ಸ್ಥಿತಿಯಲ್ಲಿ ತಮ್ಮ ಕೈ ಮೇಲಿದೆ ಎಂದು ಮೂರೂ ಪವರ್ ಸೆಂಟರ್ ಗಳು ತೋರಿಸಬೇಕಲ್ಲ? ಹೀಗಾಗಿ ಈ ದಿಸೆಯಲ್ಲಿ ಹೆಚ್ಚು ಅಗ್ರೆಸಿವ್ ಆಗುತ್ತಿರುವ ಸಿದ್ದರಾಮಯ್ಯ ಮೊನ್ನೆ ದಿಲ್ಲಿಗೆ ಹೋಗಿ ಮೂರು ಅಂಶ ಗಳನ್ನು ಮುಂದಿಟ್ಟು, ಈ ಕೆಲಸ ಆಗಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿ ಬಂದಿದ್ದಾರೆ.

ಮೂಲಗಳ ಪ್ರಕಾರ, ವಿಧಾನಪರಿಷತ್ತಿಗೆ ತಾವು ಸೂಚಿಸಿದ ನಾಲ್ಕು ಮಂದಿಯ ಹೆಸರನ್ನು ಅಂತಿಮಗೊಳಿಸಬೇಕು ಎಂಬುದು ಒಂದಾದರೆ, ಕೆಪಿಸಿಸಿ ಅಧ್ಯಕ್ಷ ಪಟ್ಟದಿಂದ ಡಿಕೆಶಿ ಅವರನ್ನು ಕೆಳಗಿಳಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಇಲ್ಲವೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಅವರನ್ನು ಕೂರಿಸಬೇಕು ಎಂಬುದು ಎರಡನೆಯದು. ಉಳಿದಂತೆ ಮೂರನೆಯದಾಗಿ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅನುಮತಿ ನೀಡ ಬೇಕು ಎಂಬುದು ಮತ್ತೊಂದು.

ಆದರೆ ಹೀಗೆ ಸಿದ್ದರಾಮಯ್ಯ ವರಿಷ್ಠರ ಮೇಲೆ ಒತ್ತಡ ಹೇರಿ ಬಂದಿದ್ದರೆ, ಡಿಸಿಎಂ ಡಿಕೆಶಿ ಕೂಡಾ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿರುವ ನಾಲ್ಕು ಹೆಸರುಗಳ ಪೈಕಿ ಎರಡು ಹೆಸರುಗಳಿಗೆ ಅಡ್ಡಗಾಲು ಹಾಕಿದ್ದಾರೆ. ಇದೇ ರೀತಿ ಬಿ.ಕೆ.ಹರಿಪ್ರಸಾದ್ ಅವರನ್ನು ಮಂತ್ರಿ ಮಾಡಲು ಸದ್ಯಕ್ಕೆ ಸಂಪುಟ ವಿಸ್ತರಣೆಯ ಹುತ್ತಕ್ಕೆ ಕೈ ಹಾಕುವುದು ಬೇಡ ಎಂಬುದು ಎರಡನೆಯದಾದರೆ, ಕೆಪಿಸಿಸಿ ಪಟ್ಟದಲ್ಲಿ ಉಳಿದುಕೊಳ್ಳಬೇಕು ಎಂಬುದು ಮೂರನೆಯದು.

ಕುತೂಹಲದ ಸಂಗತಿ ಎಂದರೆ ರಾಜ್ಯದ ಎರಡು ಪವರ್ ಸೆಂಟರ್‌ಗಳ ಮಧ್ಯೆ ನಡೆಯುತ್ತಿರುವ ಕದನವನ್ನು ನೋಡುತ್ತಿರುವ ಮೂರನೆ ಪವರ್ ಸೆಂಟರ್ ಮಲ್ಲಿಕಾರ್ಜನ ಖರ್ಗೆ ಅವರು ಇಬ್ಬರನ್ನೂ ನಿಯಂತ್ರಿಸಿ ತಮ್ಮ ಪವರ್ ಸೆಂಟರ್‌ನ ಪ್ರಾಬಲ್ಯ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮೂರು ಪವರ್ ಸೆಂಟರ್‌ಗಳ ನಡುವೆ  ಓಲಾಡುತ್ತಾ ಹೋಗುತ್ತಿದೆಯಲ್ಲದೆ ಈ ವರ್ಷದ ಅಂತ್ಯದ ವೇಳೆಗೆ ಸರ್ಕಾರ ಒಮ್ಮೆ ಅಲುಗಾಡುವುದು ಪಕ್ಕಾ ಎಂಬ ಭಾವನೆ ಮೂಡಿಸುತ್ತಿದೆ. ಮುಂದೇನು ಕತೆಯೋ? ಕಾದು ನೋಡಬೇಕು.

” ವಸ್ತುಸ್ಥಿತಿ ಎಂದರೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರಿಗೆ ತಮ್ಮ ಪಕ್ಕ ಮತ್ತೊಂದು ಪವರ್ ಸೆಂಟರ್ ಮೇಲೆದ್ದು ನಿಲ್ಲುವುದು ಬೇಕಿರಲಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ತಾವು ಮತ್ತೊಂದು ಪವರ್ ಸೆಂಟರ್ ಆಗದೆ ವಿಧಿಯಿಲ್ಲ.”

Tags:
error: Content is protected !!