Mysore
31
clear sky

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಪೆರುಂಕುಳಂ-ಕೇರಳದ ಪ್ರಪ್ರಥಮ ‘ಪುಸ್ತಕದ ಊರು’

ಪಂಜು ಗಂಗೊಳ್ಳಿ 

೧೯೪೮ರಲ್ಲಿ ಮತಾಂಧನೊಬ್ಬನಿಂದ ಮಹಾತ್ಮ ಗಾಂಧೀಜಿಯ ಕೊಲೆಯಾದಾಗ ಇಡೀ ದೇಶ ಶೋಕದ ಮಡುವಿನಲ್ಲಿ ಮುಳುಗಿತ್ತು. ಕೇರಳದ ಕೊಲ್ಲಂ ಜಿಲ್ಲೆಯ ಪೆರುಂಕುಳಂ ಎಂಬ ಗ್ರಾಮದ ಕೆಲವು ಯುವಕರು ಸೇರಿ ಶೋಕತಪ್ತ ತಮ್ಮ ಹಳ್ಳಿಯ ಜನರನ್ನು ಸಂತೈಸುವ ಉದ್ದೇಶದಿಂದ ಗಾಂಧೀಜಿಯ ನೆನಪಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಲು ಮುಂದಾಗುತ್ತಾರೆ. ಕೂಝೈಕಾಟುವೀಟಿಲ್ ಕೃಷ್ಣ ಪಿಳ್ಳೈ ಮತ್ತು ಅವರ ಕೆಲವು ಸ್ನೇಹಿತರು ಮನೆ ಮನೆಗಳಿಗೆ ಹೋಗಿ ನೂರಾರು ಪುಸ್ತಕಗಳನ್ನು ಸಂಗ್ರಹಿಸಿ ತಂದು, ತಮ್ಮ ಮನೆಯ ಒಂದು ಕೋಣೆಯಲ್ಲಿಟ್ಟು, ಜನರು ಒಂದೆಡೆ ಸೇರಿ ಓದುವ ಮೂಲಕ ಅವರ ದುಃಖ ಮರೆಯಿಸಲು ಪ್ರಯತ್ನಿಸುತ್ತಾರೆ. ಮುಂದೆ, ಈ ಗ್ರಂಥಾಲಯಕ್ಕೆ ‘ಬಾಪೂಜಿ ಸ್ಮಾರಕ ವಾಚನಾಲಯ’ ಎಂದು ನಾಮಕರಣವನ್ನೂ ಮಾಡಲಾಗುತ್ತದೆ.

ಬಾಪೂಜಿ ಸ್ಮಾರಕ ವಾಚನಾಲಯವು ಮುಂದಿನ ವರ್ಷಗಳಲ್ಲಿ ಒಳ್ಳೆಯ ದಿನಗಳನ್ನೂ ಕಂಡರೂ ತೀರಾ ಕೆಟ್ಟ ದಿನಗಳನ್ನು ಕೂಡ ಕಾಣಬೇಕಾಗಿ ಬಂದಿತು. ಕೆಲವು ದಿನ ಗ್ರಂಥಾಲಯದ ತುಂಬ ಓದುಗರು ಜನರು ಸೇರಿದರೆ, ಕೆಲವೊಮ್ಮೆ ಯಾರೂ ಇರುತ್ತಿರಲಿಲ್ಲ. ಹಲವು ಬಾರಿ ಸ್ಥಳ ಬದಲಾಯಿಸಬೇಕಾಗಿ ಬಂದಿತು. ವ್ಯವಸ್ಥಿತವಾಗಿ ನಡೆಸಲು ಸಾಕಷ್ಟು ಹಣವಿಲ್ಲದೆ ಹಲವು ಬಾರಿ ಮುಚ್ಚಬೇಕಾಗಿಯೂ ಬಂದಿತ್ತು. ೨೦೧೬ರಲ್ಲಿ ಬಾಪೂಜಿ ಸ್ಮಾರಕ ವಾಚನಾಲಯವು ನವೀಕರಣಗೊಂಡ ನಂತರ ಅದರ ಸ್ಥಿತಿಗತಿ ಕೆಲಕಾಲ ಸುಧಾರಿಸಿತಾದರೂ, ಮುಂದಿನ ದಿನಗಳಲ್ಲಿ ಓದಲು ಬರುವ ಜನರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಯಿತು. ಮುಖ್ಯವಾಗಿ, ಯುವ ಜನಾಂಗ ಗ್ರಂಥಾಲಯದತ್ತ ತಲೆ ಹಾಕುತ್ತಿರಲಿಲ್ಲ. ಆಗ ಗ್ರಂಥಾಲಯವನ್ನು ನಿರ್ವಹಿಸುತ್ತಿರುವವರು ಜನರಲ್ಲಿ ಓದುವ ಅಭ್ಯಾಸವನ್ನು ಪುನಃ ಹುಟ್ಟುವಂತೆ ಮಾಡಲು ದಾರಿಗಳ ಬಗ್ಗೆ ಆಲೋಚಿಸುತ್ತಿದ್ದಾಗ, ಅವರಿಗೆ ದಾರಿ ತೋರಿಸಿದುದು ಭಾರತದ ಪ್ರಪ್ರಥಮ ‘ಪುಸ್ತಕಾಂಚೆ ಗಾಂವ್ (ಪುಸ್ತಕದ ಊರು)’ ಎಂದು ಖ್ಯಾತಿ ಪಡೆದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭಿಲಾರ್ ಎಂಬ ಹಳ್ಳಿ.

ಸತಾರಾ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಮತ್ತು ಪಂಚಗನಿ ಮಹಾರಾಷ್ಟ್ರದ ಎರಡು ಪ್ರಮುಖ ಹಿಲ್ ಸ್ಟೇಷನ್‌ಗಳು. ಈ ತಂಪು ಪ್ರದೇಶಗಳಿಗೆ ವರ್ಷವಿಡೀ ಪ್ರವಾಸಿಗರು ಬರುತ್ತಾರೆ. ಈ ಎರಡು ಹಿಲ್ ಸ್ಟೇಷನ್‌ಗಳ ನಡುವೆ ಇರುವುದೇ ಭಿಲಾರ್. ಸುಮಾರು ೩,೦೦೦ ಜನ ಸಂಖ್ಯೆಯ ಈ ಊರಲ್ಲಿ ೩೫ಕ್ಕೂ ಹೆಚ್ಚು ಮನೆಗಳು ಸಾರ್ವಜನಿಕ ಗ್ರಂಥಾಲಯಗಳಾಗಿ ಪ್ರವಾಸಿಗರಿಗೆ ಆಕರ್ಷಣೆಯ ಹಾಗೂ ಕುತೂಹಲದ ತಾಣಗಳಾಗಿಯೂ ಮಾರ್ಪಟ್ಟಿವೆ. ಪ್ರವಾಸಿಗರು ದಿನದ ಯಾವ ಹೊತ್ತಲ್ಲೂ ಈ ಪುಸ್ತಕ ಮನೆಗಳಿಗೆ ಭೇಟಿ ಕೊಟ್ಟು, ಉಚಿತವಾಗಿ ತಮ್ಮ ಇಷ್ಟದ ಪುಸ್ತಕಗಳನ್ನು ಓದಬಹುದು. ಪುಸ್ತಕದ ಮನೆಯವರು ಇಂತಹ ಓದುಗ-ಪ್ರವಾಸಿಗರನ್ನು ಆದರದಿಂದ ಬರ ಮಾಡಿಕೊಂಡು, ಅದು ಅವರ ಮನೆಯೇ ಎಂಬಂತಹ ವಾತಾವರಣವನ್ನು ನಿರ್ಮಿಸಿಕೊಡುತ್ತಾರೆ. ಪುಸ್ತಕದ ಮನೆಗಳನ್ನು ಹುಡುಕಿಕೊಂಡು ಬರುವ ಪ್ರವಾಸಿಗರಿಗೆ ಊರವರು ಸಂತೋಷದಿಂದ ದಾರಿ ತೋರಿಸುತ್ತಾರೆ.

ಪ್ರಾರಂಭದಲ್ಲಿ ಭಿಲಾರಿನ ಮನೆಗಳು, ಸಾರ್ವಜನಿಕ ಸ್ಥಳಗಳು, ಮಂದಿರಗಳು, ಶಾಲೆಗಳು ಮೊದಲಾಗಿ ೨೫ ಸ್ಥಳಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲಾಯಿತು. ಮುಂದೆ, ಈ ಸಂಖ್ಯೆ ೩೫ಕ್ಕೆ ಏರಿತು. ಸರ್ಕಾರ ಸ್ಥಳೀಯಾಡಳಿತದ ಮೂಲಕ ಪುಸ್ತಕದ ಮನೆಗಳಿಗೆ ಬೇಕಾಗುವ ಪುಸ್ತಕ, ಕುರ್ಚಿ, ಮೇಜು, ಕಪಾಟು ಮೊದಲಾದವುಗಳನ್ನು ಒದಗಿಸುತ್ತದೆ. ಆಸಕ್ತ ಸ್ಥಳೀಯರು ತಮ್ಮ ಮನೆಯ ಯಾವುದಾದರೂ ಮೂಲೆ, ವರಾಂಡ, ಕೋಣೆ ಅಥವಾ ಮಾಳಿಗೆಯನ್ನು ಬಿಟ್ಟು ಕೊಟ್ಟು, ಗ್ರಂಥಾಲಯವನ್ನು ನಿರ್ಮಿಸಲಾಗುತ್ತದೆ. ಈ ೩೫ ಪುಸ್ತಕದ ಮನೆಗಳಲ್ಲಿ ಕನಿಷ್ಠವೆಂದರೆ ೩೫ ಸಾವಿರ ಪುಸ್ತಕಗಳಿವೆ. ಇವೆಲ್ಲವನ್ನೂ ತಜ್ಞರು ವಿವಿಧ ವಿಷಯಗಳನುಸಾರವಾಗಿ ವಿಭಾಗಿ ಸಿದ್ದು, ಪ್ರತಿಯೊಂದು ಪುಸ್ತಕದ ಮನೆಯಲ್ಲಿಯೂ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಇವೆ. ಯಾವ ಪುಸ್ತಕದ ಮನೆಯಲ್ಲಿ ಯಾವ ವಿಷಯದ ಬಗ್ಗೆ ಪುಸ್ತಕಗಳು ಲಭ್ಯ ಅನ್ನುವುದನ್ನು ಗೋಡೆ ಚಿತ್ರ, ಫಲಕಗಳಲ್ಲಿ ಸುಂದರವಾಗಿ ಗುರುತಿಸಲಾಗಿರುತ್ತದೆ. ಹಾಗೆಯೇ, ಭಿಲಾರೆಯ ಯಾವ ಪ್ರದೇಶದಲ್ಲಿ ಪುಸ್ತಕದ ಮನೆಗಳಿವೆ ಮತ್ತು ಯಾವ ಪುಸ್ತಕದ ಮನೆಯಲ್ಲಿ ಯಾವ ವಿಷಯದ ಪುಸ್ತಕಗಳು ಲಭ್ಯವಿದೆ ಎಂದು ತೋರಿಸುವ ನಕ್ಷೆಯೂ ಇದೆ. ಪುಸ್ತಕದ ಮನೆಯವರು ಪ್ರವಾಸಿಗರಿಂದ ತಮ್ಮ ದಿನನಿತ್ಯದ ಬದುಕಿಗೆ, ಮತ್ತು ತಮ್ಮ ದಿನನಿತ್ಯದ ಕೆಲಸಗಳಿಂದ ಪ್ರವಾಸಿಗರಿಗೆ ಯಾವುದೇ ಅಡಚಣೆಯಾಗದಂತೆ ನಗುಮೊಗದಿಂದ ಉಪಚರಿಸುತ್ತಾರೆ.

‘ಪುಸ್ತಕದ ಊರು’ ಎಂಬುದು ಮೂಲತಃ ಲಂಡನ್ನಿನ ‘ಹೇ-ಆನ್-ವೈ’ ಎಂಬ ಒಂದು ಗ್ರಾಮದ ಮಾದರಿ. ಅಲ್ಲಿ ಪ್ರತಿವರ್ಷ ಮೇ ೨೫ರಿಂದ ನಡೆಯುವ ೧೦ ದಿನಗಳ ಸಾಹಿತ್ಯ ಜಾತ್ರೆಗೆ ದೇಶವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಮಹಾರಾಷ್ಟ್ರದ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ವಿನೋದ್ ತಾವ್ಡೆ ಎನ್ನುವವರು ಲಂಡನ್ನಿಗೆ ಭೇಟಿ ಕೊಟ್ಟಾಗ, ಹೇ ಆನ್ ವೈ ಗ್ರಾಮದಲ್ಲಿನ ಪ್ರತಿ ಮನೆಯಲ್ಲೂ ಸಾರ್ವಜನಿಕ ಗ್ರಂಥಾಲಯಗಳಿರುವುದನ್ನು ಕಂಡು, ಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲೇಕೆ ಪ್ರಯತ್ನಿಸಬಾರದು ಎಂದು ಯೋಚಿಸಿ, ಸರ್ಕಾರ ಮತ್ತು ಸ್ಥಳೀಯರ ಸಹಕಾರ ಪಡೆದು, ಭಿಲಾರ್‌ನಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಿದರು. ೨೦೧೭ರ ಮೇ ತಿಂಗಳಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನಾವಿಸ್ ಈ ಯೋಜನೆಯನ್ನು ಉದ್ಘಾಟಿಸುವ ಮೂಲಕ ಭಿಲಾರೆ ಗ್ರಾಮ ಭಾರತದ ಪ್ರಪ್ರಥಮ ಪುಸ್ತಕದ ಊರು ಎಂಬ ಖ್ಯಾತಿಯನ್ನು ಪಡೆಯಿತು.

ಪೆರುಂಕುಳಂ ಭಿಲಾರೆಗಿಂತ ಭಿನ್ನವಾದ ಕ್ರಮವನ್ನು ಅನುಸರಿಸುತ್ತಿದೆ. ಭಿಲಾರೆಯಲ್ಲಿ ಮನೆಗಳಲ್ಲಿ ಗ್ರಂಥಾಲಯಗಳು ನಡೆಯುತ್ತಿದ್ದರೆ, ಪೆರುಂಕುಳಂನಲ್ಲಿ ಬಸ್ಸು ನಿಲ್ದಾಣ, ಮಾರುಕಟ್ಟೆ, ಪೋಸ್ಟ್ ಆಫೀಸ್, ಪಾರ್ಕ್ ಮೊದಲಾದ ಜನರು ಗುಂಪುಗೂಡುವ ಪ್ರಮುಖ ಸ್ಥಳಗಳಲ್ಲಿ ‘ಪುಸ್ತಕದ ಗೂಡು’ಗಳನ್ನು ನಿರ್ಮಿಸಲಾಗಿದೆ. ಪುಸ್ತಕದ ಗೂಡು ಒಂದು ಗೂಟದ ಆಧಾರದ ಮೇಲೆ ಪೆಟ್ಟಿಗೆಯಾಕಾರದ ರಚನೆಯಾಗಿದ್ದು, ಅದರಲ್ಲಿ ೨೫-೫೦ ಪುಸ್ತಕಗಳಿರುತ್ತವೆ. ಮಳೆ ನೀರು ತಾಕದಂತೆ ಪೆಟ್ಟಿಗೆಯ ಮೇಲೆ ಮಾಡನ್ನು ಕಟ್ಟಲಾಗಿರುತ್ತದೆ. ಪೆರುಂಕುಳಂನಲ್ಲಿ ಮೊತ್ತ ಮೊದಲ ಪುಸ್ತಕದ ಗೂಡು ನೆಡಲ್ಪಟ್ಟದ್ದು ೨೦೧೯ರ ಜೂನ್ ೧೯ರಂದು. ಹೆಸರಾಂತ ಮಲಯಾಳಂ ಲೇಖಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಮ್.ಟಿ.ವಾಸುದೇವನ್ ನಾಯರ್ ಅಂದು ಅದನ್ನು ಉದ್ಘಾಟಿಸಿದರು. ಮೊದಲ ಪುಸ್ತಕದ ಗೂಡು ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದ ಕಾರಣ ನಂತರದ ದಿನಗಳಲ್ಲಿ ಹಲವು ಕಡೆ ಇನ್ನೂ ಹೆಚ್ಚಿನ ಸಂಖ್ಯೆಯ ಪುಸ್ತಕದ ಗೂಡುಗಳು ಹುಟ್ಟಿಕೊಂಡವು. ಕೋವಿಡ್ ದಿನಗ ಳಲ್ಲಂತೂ ಈ ಪುಸ್ತಕದ ಗೂಡುಗಳು ಜನರ ಅತ್ಯಂತ ನೆಚ್ಚಿನ ತಾಣಗಳಾಗಿದ್ದವು.

ಪುಸ್ತಕದ ಗೂಡಿನಲ್ಲಿ ಪುಸ್ತಕಗಳ ಜೊತೆಯಲ್ಲಿ ದಿನಪತ್ರಿಕೆಗಳು ಮತ್ತು ಇತರ ನಿಯತಕಾಲಿಕಗಳೂ ಇರುತ್ತವೆ. ಜನ ಪುಸ್ತಕದ ಗೂಡಿನಲ್ಲಿ ತನಗಿಷ್ಟವಾದ ಪುಸ್ತಕವನ್ನು ಉಚಿತವಾಗಿ ಓದಿ, ವಾಪಸ್ ಅಲ್ಲೇ ಇಡಬಹುದು. ಅಥವಾ, ಒಂದು ಪುಸ್ತಕವನ್ನು ತೆಗೆದುಕೊಂಡು ಅದರ ಬದಲಿಗೆ ಬೇರೊಂದು ಪುಸ್ತಕವನ್ನು ತಂದಿಡಬಹುದು. ಪುಸ್ತಕ ಗೂಡುಗಳ ಹತ್ತಿರ ಆಗಾಗ್ಗೆ ಕತೆ ಹೇಳುವ ಕಾರ್ಯಕ್ರಮಗಳು ನಡೆಯುತ್ತವೆ. ಪುಸ್ತಕ ಗೂಡುಗಳಿಂದಾಗಿ ಪೆರುಂಕುಳಂ ಈಗ ಒಂದು ಪ್ರವಾಸಿ ತಾಣವಾಗಿ ಬದಲಾಗಿದೆ. ಪ್ರವಾಸಿ ತಾಣವಾಗಿ ಬದಲಾಗಿರುವುದರಿಂದ ಪೆರುಂಕುಳಂನ ಆರ್ಥಿಕ ಬೆಳವಣಿಗೆಯೂ ಹೆಚ್ಚಿದೆ. ಪೆರುಂಕುಳಂನಲ್ಲಿ ಆಗಾಗ್ಗೆ ಸಾಹಿತ್ಯ ಕಾರ್ಯಕ್ರಮಗಳು, ವರ್ಕ್‌ಶಾಪ್, ಪುಸ್ತಕ ಮೇಳಗಳು ನಡೆದು ವೈಚಾರಿಕ ವಿನಿಮಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯೂ ಹೆಚ್ಚುತ್ತಿದೆ.

ಬಾಪೂಜಿ ಸ್ಮಾರಕ ವಾಚನಾಲಯವು ಈಗ ‘ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್’ನ ಅಂಗಸಂಸ್ಥೆಯಾಗಿದ್ದು, ಅದರ ಮೂಲಕ ಪುಸ್ತಕಗಳನ್ನು ಖರೀದಿಸಲು ಧನಸಹಾಯವನ್ನು ಪಡೆಯುತ್ತದೆ. ಅದೇ ಧನಸಹಾಯದಿಂದ ಪುಸ್ತಕದ ಗೂಡುಗಳೂ ಕಾರ್ಯ ನಿರ್ವಹಿಸುತ್ತವೆ. ಬಾಪೂಜಿ ಸ್ಮಾರಕ ವಾಚನಾಲಯದಲ್ಲಿ ಇನ್ನೂ ಒಂದು ಸ್ವಾರಸ್ಯಕರವಾದ ಸಾಹಿತ್ಯಕ ಚಟುವಟಿಕೆ ನಡೆಯುತ್ತದೆ. ಎಮ್. ಮುಕುಂದನ್ ಮಲಯಾಳಂನ ಒಬ್ಬ ಪ್ರಮುಖ ಸಾಹಿತಿ. ಈಗ ೮೩ ವರ್ಷ ಪ್ರಾಯವಾಗಿರುವ ಅವರಿಗೆ ‘ಎಮ್.ಮುಕುಂದನ್ ಆರಾಧನಾ ಕೂಟಂ’ ಎಂಬ ಒಂದು ಅಭಿಮಾನಿಗಳ ಸಂಘವಿದೆ. ಆ ಕೂಟವು ಬಾಪೂಜಿ ಸ್ಮಾರಕ ವಾಚನಾಲಯದಲ್ಲಿ ನಿಯಮಿತವಾಗಿ ಮುಕುಂದನ್‌ರ ಕೃತಿಗಳ ಓದು ಮತ್ತು ಸಂವಾದಗಳನ್ನು ನಡೆಸುತ್ತದೆ. ಬಹುಶಃ ಚಿತ್ರನಟರಂತೆ ಸಾಹಿತಿಯೊಬ್ಬರಿಗೆ ಹೀಗೆ ಅಭಿಮಾನಿ ಸಂಘವಿರುವುದು ಮಲಯಾಳಂನಲ್ಲಿ ಮಾತ್ರವೇ ಇರಬೇಕು

” ‘ಪುಸ್ತಕದ ಊರು’ ಎಂಬುದು ಮೂಲತಃ ಲಂಡನ್ನಿನ ‘ಹೇ-ಆನ್-ವೈ’ ಎಂಬ ಒಂದು ಗ್ರಾಮದ ಮಾದರಿ. ಅಲ್ಲಿ ಪ್ರತಿವರ್ಷ ಮೇ ೨೫ರಿಂದ ನಡೆಯುವ ೧೦ ದಿನಗಳ ಸಾಹಿತ್ಯ ಜಾತ್ರೆಗೆ ದೇಶವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಮಹಾರಾಷ್ಟ್ರದ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ವಿನೋದ್ ತಾವ್ಡೆ ಎನ್ನುವವರು ಲಂಡನ್ನಿಗೆ ಭೇಟಿ ಕೊಟ್ಟಾಗ, ಹೇ ಆನ್ ವೈ ಗ್ರಾಮದಲ್ಲಿನ ಪ್ರತಿ ಮನೆಯಲ್ಲೂ ಸಾರ್ವಜನಿಕ ಗ್ರಂಥಾಲಯಗಳಿರುವುದನ್ನು ಕಂಡು, ಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲೇಕೆ ಪ್ರಯತ್ನಿಸಬಾರದು ಎಂದು ಯೋಚಿಸಿ, ಸರ್ಕಾರ ಮತ್ತು ಸ್ಥಳೀಯರ ಸಹಕಾರ ಪಡೆದು, ಭಿಲಾರ್‌ನಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಿದರು”

Tags: