Mysore
27
light rain

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಓದುಗರ ಪತ್ರ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಇಂಟರ್ನಲ್ಸ್ ಅಂಕಗಳು

ಓದುಗರ ಪತ್ರ

ಮಕ್ಕಳು ಬೋರ್ಡ್ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆಯುವ ಅರ್ಹತೆ ಇದ್ದರೂ, ಇಂಟರ್ನಲ್ಸ್ ಮಾರ್ಕ್ಸ್(ಆಂತರಿಕ ಅಂಕ) ಎಂಬ ಭೂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಇದು ಬ್ಲಾಕ್‌ಮೇಲ್ ಹಂತಕ್ಕೆ ತಲುಪಿದೆ. ಇದರಿಂದ ಮಕ್ಕಳು ಹಾಗೂ ಪೋಷಕರು ಉಪಾಧ್ಯಾಯರ ಹತ್ತಿರವಾಗಲೀ ಪ್ರಾಂಶುಪಾಲರ ಹತ್ತಿರವಾಗಲೀ ಯಾವುದೇ ತೊಂದರೆ ಇದ್ದರೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಕಾರಣ ಇಷ್ಟೆ, ಎಲ್ಲಿ ನೋಟೆಡ್ ಆಗಿ ಬಿಡುತ್ತೇವೋ, ನನ್ನ ಮಗನಿಗೆ/ಮಗಳಿಗೆ ಅಂಕಗಳನ್ನು ಕೊಡುವುದಿಲ್ಲವೋ ಎಂಬ ಭಯ. ಇದಕ್ಕೆ ತಕ್ಕಂತೆ ಮಕ್ಕಳು ಕೂಡ ಹೆದರಿಕೆಯಿಂದಲೇ ಪಾಠ ಕೇಳುವ ಮನಸ್ಥಿತಿ, ಪರಿಸ್ಥಿತಿ ಎದುರಾಗಿದೆ.

ವಿಶ್ವವಿದ್ಯಾಲಯಗಳಲ್ಲಂತೂ ಪ್ರತಿ ವಿಷಯಕ್ಕೆ ೨೦ ಆಂತರಿಕ ಅಂಕಗಳಿದ್ದರೂ ಬಹುತೇಕ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ನೀಡುವುದು ಗರಿಷ್ಟ೧೩ರಿಂದ ೧೪ ಅಂಕಗಳು ಕನಿಷ್ಠ ೮ರಿಂದ ೯ ಅಂಕಗಳು ಮಾತ್ರ. ಉಳಿದ ವಿಷಯಗಳಲ್ಲಿ ಅದರಲ್ಲೂ ಭಾಷಾ ವಿಷಯದಲ್ಲಿ ೮೦ ಅಂಕಗಳಿಗೆ ೬೦ ಅಂಕಗಳು ದೊರೆತರೇ ಹೆಚ್ಚು. ಇದರಿಂದಾಗಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ತಾವು ಹೇಳಿದಂತೆ ಕೇಳದ ವಿದ್ಯಾರ್ಥಿನಿಯರಿಗೆ ಆಂತರಿಕ ಅಂಕ ಕಡಿಮೆ ನೀಡಿ ಅವರನ್ನು ಅನುತ್ತೀರ್ಣಗೊಳಿಸಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದರೂ ಸಂಬಂಧಪಟ್ಟವರು ಕಂಡೂ ಕಾಣದಂತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿಶ್ವವಿದ್ಯಾಲಯದವರು ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಇಂಟರ್ನಲ್ಸ್ ಅಂಕ ಪದ್ಧತಿಯನ್ನು ರದ್ದುಪಡಿಸುವ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡುವುದು ಅಗತ್ಯ.

– ಡಾ. ಎಂ.ಪಿ.ಪ್ರೀತಮ್, ಕುವೆಂಪುನಗರ, ಮೈಸೂರು

 

 

Tags:
error: Content is protected !!