ಕೋರ್ಟ್ ಮೆಟ್ಟಿಲು ಏರಿ ವೈದ್ಯಕೀಯ ಸೀಟು ಪಡೆದ ಸಾಹಸಿ
ಗುಜರಾತಿನ ಭಾವನಗರದ ಗೋರ್ಕಿ ಗ್ರಾಮದ ಗಣೇಶ್ ಬರಯ್ಯ ಎಂಟು ಜನ ಮಕ್ಕಳಲ್ಲಿ ಒಬ್ಬರು. ಇವರ ಸಹೋದರ-ಸಹೋದರಿಯರು ದೈಹಿಕವಾಗಿ ಸಾಮಾನ್ಯರಾಗಿದ್ದರೆ ಇವರು ಮಾತ್ರ ಕುಳ್ಳು- ಮೂರು ಅಡಿಗೂ ಕಡಿಮೆ ಎತ್ತರ. ತೂಕ ಬರೀ ೨೦ ಕೆಜಿ. ಜೊತೆಯಲ್ಲಿ ೭೨% ‘ಲೋಕೋಮೋಟಾರ್ ನ್ಯೂನತೆ’ಯೂ ಇತ್ತು. ಈ ನ್ಯೂನತೆ ಇರುವವರಿಗೆ ನಡೆಯುವುದು, ಮೆಟ್ಟಲು ಹತ್ತುವುದು, ಬರೆಯುವುದು, ವಸ್ತುಗಳನ್ನು ಹಿಡಿದುಕೊಳ್ಳುವುದು ಮೊದಲಾದ ದಿನನಿತ್ಯದ ಸಾಮಾನ್ಯ ಚಟುವಟಕೆಗಳೂ ತ್ರಾಸದಾಯಕವಾಗಿರುತ್ತವೆ. ಆದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಣೇಶ್ ಏರಿದ ಎತ್ತರ ಮಾತ್ರ ಬಹಳ ದೊಡ್ಡದು.
ಗಣೇಶ್ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಇವರ ಕುಳ್ಳಗಿನ ದೇಹವನ್ನು ನೋಡಿ ಒಂದು ಸರ್ಕಸ್ ಕಂಪೆನಿ ಇವರ ಮನೆಗೆ ಬಂದು, ೫ ಲಕ್ಷ ರೂಪಾಯಿ ಕೊಟ್ಟು, ಇವರನ್ನು ತಮಗೆ ಮಾರಲು ಇವರ ತಂದೆಯನ್ನು ಕೇಳಿಕೊಂಡಿತು. ಕೃಷಿ ಮಾಡಿ ತನ್ನ ಎಂಟು ಜನ ಮಕ್ಕಳನ್ನು ಸಾಕಲು ಹರಸಾಹಸ ಪಡುತ್ತಿದ್ದ ಗಣೇಶರ ತಂದೆಗೆ ಅದು ಅವರ ಬದುಕನ್ನೇ ಬದಲಾಯಿಸವಂತಹ ಮೊತ್ತವಾಗಿತ್ತು. ಆದರೂ ಅವರೂ ಸರ್ಕಸ್ ಕಂಪೆನಿಯ ಪ್ರಸ್ತಾಪವನ್ನು ಖಡಾಖಂಡಿತವಾಗಿ ನಿರಾಕರಿಸಿ, ಮಗನ ಶಾಲಾ ಶಿಕ್ಷಣವನ್ನು ಮುಂದುವರಿಸಿದರು. ಅದು ಗಣೇಶ ಬರಯ್ಯರ ಬದುಕಿನಲ್ಲಿ ಅವರ ತಂದೆ ಕೈಗೊಂಡ ಅತ್ಯಂತ ಪ್ರಮುಖ ನಿರ್ಧಾರವಾಗಿತ್ತು. ಮತ್ತು ಗಣೇಶ್ ಕೂಡಾ ತಂದೆಯ ಆ ನಿರ್ಧಾರ ವ್ಯರ್ಥವಾಗದಂತೆ ನೋಡಿಕೊಂಡು ಒಬ್ಬ ವೈದ್ಯರಾಗಿ ಬೆಳೆದರು. ಆದರೆ, ವೈದ್ಯರಾಗಲು ಅವರು ನಡೆಸಿದ ಸಾಹಸಮಯ ಹೋರಾಟ ಎಂತಹವರಿಗೂ ಸೂರ್ತಿದಾಯಕವಾದುದು.
ಗಣೇಶ್ ೧೨ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ೮೭% ಮಾರ್ಕುಗಳನ್ನು ಪಡೆದು, ಮುಂದೆ ೨೦೧೮ರ ನೀಟ್ ಪರೀಕ್ಷೆಯಲ್ಲಿ ೨೩೩ನೇ ರ‍್ಯಾಂಕ್ಗಳಿಸಿದರು. ಅದು ಅವರಿಗೆ ಯಾವುದಾದರೂ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಸಾಕಾಗಿತ್ತು. ಆದರೆ, ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಕಮಿಟಿ ಅವರ ದೈಹಿಕ ಕುಬ್ಜತೆ ಮತ್ತು ಲೋಕೊಮೋಟಾರ್ ನ್ಯೂನತೆಯ ಕಾರಣಕ್ಕೆ ತುರ್ತು ವೈದ್ಯಕೀಯ ಸನ್ನಿವೇಶಗಳನ್ನು ನಿಭಾಯಿಸಲು ಅವರಿಂದ ಸಾಧ್ಯ ವಾಗದು ಎಂಬ ಕಾರಣ ಮುಂದೊಡ್ಡಿ, ಅವರಿಗೆ ಸೀಟು ನೀಡಲು ನಿರಾಕರಿಸಿತು. ಗಣೇಶ್ ಸಹಜವಾಗಿಯೇ ತೀವ್ರ ನಿರಾಶೆಗೊಳಗಾದರು. ಆದರೆ, ಧೃತಿಗೆಡಲಿಲ್ಲ. ತನ್ನ ಇಷ್ಟು ವರ್ಷಗಳ ಪ್ರಯತ್ನವನ್ನು ತನ್ನೊಂದು ದೈಹಿಕ ನ್ಯೂನತೆ ತಿಂದು ಹಾಕಲು ಬಿಡಲು ಸಮ್ಮತಿಸದ ಗಣೇಶ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಆದೇಶದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರು.
ತಾನು ಕಲಿತ ತಲಜದ ನೀಲಕಾಂತ ವಿದ್ಯಾಪೀಠ ಕಾಲೇಜಿನ ಪ್ರಿನ್ಸಿಪಾಲರಾದ ದಳಪತ್ ಕಟಾರಿಯಾರ ಬೆಂಬಲ ಮತ್ತು ಆರ್ಥಿಕ ಸಹಕಾರ ಪಡೆದು, ಜಿಲ್ಲಾಧಿಕಾರಿ ಮತ್ತು ರಾಜ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಿ, ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ದ ತೀರ್ಮಾನದ ವಿರುದ್ಧ ಗುಜರಾತ್ ಹೈಕೋರ್ಟಿನ ಮೆಟ್ಟಿಲೇರಿದರು. ಆದರೆ, ಗುಜರಾತ್ ಹೈಕೋರ್ಟ್ ಕೂಡಾ ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ದ ಆದೇಶವನ್ನು ಎತ್ತಿ ಹಿಡಿಯಿತು.
ಆಗಲೂ ತನ್ನ ಹೋರಾಟದಿಂದ ಹಿಂದೆ ಸರಿಯದ ಗಣೇಶ್ ಸುಪ್ರೀಂ ಕೋರ್ಟಿಗೆ ಹೋದರು. ನಾಲ್ಕು ತಿಂಗಳ ವಿಚಾರಣೆಯ ನಂತರ ಸುಪ್ರೀಂ ಕೋರ್ಟು ೨೦೧೮ರ ಅಕ್ಟೋಬರ್ ೨೨ರಂದು, ಅಭ್ಯರ್ಥಿಯ ದೈಹಿಕ ಎತ್ತರದ ಕಾರಣಕ್ಕೆ ಆತನನ್ನು ವೈದ್ಯಕೀಯ ಶಿಕ್ಷಣ ಪಡೆಯುವುದರಿಂದ ಅನರ್ಹಗೊಳಿಸಲಾಗದೆಂದು ಗಣೇಶ್ ಪರವಾಗಿ ತೀರ್ಪು ನೀಡಿತು. ಆದರೆ, ಆ ವರ್ಷದ ಪ್ರವೇಶ ಪ್ರಕ್ರಿಯೆ ಅದಾಗಲೇ ಮುಗಿದಿರುವುದರಿಂದ ೨೦೧೯ರ ಬ್ಯಾಚಿನಲ್ಲಿ ಗಣೇಶ್‌ಗೆ ಸೀಟು ಕೊಡಬೇಕೆಂದು ಆದೇಶಿಸಿತು. ಅದರಂತೆ ಗಣೇಶ್ ೨೦೧೯ರಲ್ಲಿ ಭಾವನಗರ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದು, ಎಂಬಿಬಿಎಸ್ ಮುಗಿಸಿದರು. ೨೦೨೫ರ ನವೆಂಬರ್ ೨೭ ರಂದು, ಅಂದರೆ ಮೆಡಿಕಲ್ ಕೌನ್ಸಿಲ್ ಇಂಡಿಯಾ ತನ್ನನ್ನು ವೈದ್ಯರಾಗಲು ಅನರ್ಹ ಎಂದು ಘೋಷಿಸಿದ ಏಳು ವರ್ಷಗಳ ನಂತರ, ತಾನು ಕಲಿತ ಭಾವನಗರದ ಸರ್ ತಕ್ತ್‌ಸಿಂಹಜಿ ಸಿವಿಲ್ ಆಸ್ಪತ್ರೆಯಲ್ಲೇ ಗಣೇಶ್ ಬರಯ್ಯ ಕ್ಲಾಸ್ ೨, ಮೆಡಿಕಲ್ ಆಫೀಸರ್ ಆಗಿ ನಿಯುಕ್ತಿಗೊಂಡರು.
ಮೂರು ಅಡಿಗೂ ಕಡಿಮೆ ಎತ್ತರದ ಗಣೇಶ್ ಬರಯ್ಯ ಹೆಮ್ಮೆಯಿಂದ ಗುತ್ತಿಗೆಯಲ್ಲಿ ಸ್ಟೇತೋಸ್ಕೋಪ್ ನೇತು ಹಾಕಿಕೊಂಡು ಆಸ್ಪತ್ರೆಯಲ್ಲಿ ನಡೆದಾಡುತ್ತ ತನ್ನ ಬದುಕು ಪಡೆದ ತಿರುವುಗಳನ್ನು ಮೆಲುಕು ಹಾಕಿದಾಗ ಅವರ ಕಣ್ಣೆದುರು ಬರುವ ಮೊದಲ ರೂಪ ತಮ್ಮ ತಂದೆಯದು-ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಅವರು ಸರ್ಕಸ್ ಕಂಪೆನಿಯ ೫ ಲಕ್ಷ ರೂಪಾಯಿ ಆಮಿಷಕ್ಕೆ ಒಳಗಾಗದೆ ತನ್ನನ್ನು ವಿದ್ಯಾವಂತನನ್ನಾಗಿಸಿದರು. ಇಲ್ಲದಿರುತಿದ್ದಿದ್ದರೆ ತಾನಿಂದು ವೈದ್ಯನಾಗುವ ಬದಲು ಒಬ್ಬ ಸರ್ಕಸ್ ಜೋಕರ್ ಆಗಿ ಬದುಕು ನಡೆಸಬೇಕಾಗಿರುತ್ತಿತ್ತು.
ಈಗ ೨೬ ವರ್ಷ ಪ್ರಾಯವಾಗಿರುವ ಗಣೇಶ್ ಬರಯ್ಯರ ಮೊದಲ ಆದ್ಯತೆ ತನ್ನ ಕುಟುಂಬ ವಾಸ ಮಾಡುತ್ತಿರುವ ಗುಡಿಸಲನ್ನು ಕೆಡವಿ ಅದರ ಜಗದಲ್ಲಿ ಇಟ್ಟಿಗೆ ಗೋಡೆಯ ಒಂದು ಅನುಕೂಲಕರವಾದ ಮನೆಯನ್ನು ಕಟ್ಟಿಸುವುದು.ಹಾಗೆಯೇ, ತಾನು ವೈದ್ಯನಾಗಿರುವುದರಿಂದ ತನ್ನ ಕುಟುಂಬಕ್ಕೆ ಮಾತ್ರವಲ್ಲದೆ, ತನ್ನ ಹಳ್ಳಿಯ ಬಡಬಗ್ಗರಿಗೂ ಸುಲಭದಲ್ಲಿ ವೈದ್ಯಕೀಯ ಸೌಲಭ್ಯ ಲಭಿಸುವಂತೆ ಮಾಡುತ್ತೇನೆ ಎಂದು ಹೇಳುತ್ತಾರೆ. ಮತ್ತು, ತಮ್ಮ ದೈಹಿಕ ನ್ಯೂನತೆಗಳಿಂದಾಗಿ ಅವಕಾಶ ವಂಚಿತರಾಗುವವರಿಗೆ ಇತರರಿಗೆ ತನ್ನ ಹೋರಾಟ ಒಂದು ಸೂರ್ತಿಯ ನಿದರ್ಶನವಾಗಲಿ ಎಂದೂ ಅವರು ಆಶಿಸುತ್ತಾರೆ.
” ಹೋರಾಟದಿಂದ ಹಿಂದೆ ಸರಿಯದ ಗಣೇಶ್ ಸುಪ್ರೀಂಕೋರ್ಟಿಗೆ ಹೋದರು. ನಾಲ್ಕು ತಿಂಗಳ ವಿಚಾರಣೆಯ ನಂತರ ಸುಪ್ರೀಂ ಕೋರ್ಟು ೨೦೧೮ರ ಅಕ್ಟೋಬರ್ ೨೨ರಂದು, ಅಭ್ಯರ್ಥಿಯ ದೈಹಿಕ ಎತ್ತರದ ಕಾರಣಕ್ಕೆಆತನನ್ನು ವೈದ್ಯಕೀಯ ಶಿಕ್ಷಣ ಪಡೆಯುವುದರಿಂದ ಅನರ್ಹಗೊಳಿಸಲಾಗದೆಂದು ಗಣೇಶ್ ಪರವಾಗಿ ತೀರ್ಪು ನೀಡಿತು.”




