Mysore
22
broken clouds

Social Media

ಬುಧವಾರ, 09 ಸೆಪ್ಟೆಂಬರ್ 2026
Light
Dark

ಮಂಜಿನ ನಡುವೆ ಕೇಸರಿ ರೈಲು; ಕಾಗಿನೆರೆ ದೃಶ್ಯ ವೈರಲ್

ಲಕ್ಷ್ಮೀಕಾಂತ್ ಕೊಮಾರಪ್ಪ

ಪ್ರಧಾನಿ ಮೋದಿ, ರೈಲ್ವೆ  ಸಚಿವ ಅಶ್ವಿನಿ ವೈಷ್ಣವ್ ಗಮನ ಸೆಳೆದ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ

ಸೋಮವಾರಪೇಟೆ: ಪಶ್ಚಿಮಘಟ್ಟದ ಮಡಿಲಲ್ಲಿರುವ ಸಕಲೇಶಪುರ ತಾಲ್ಲೂಕಿನ ಪ್ರಕೃತಿ ಸೌಂದರ್ಯ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಹೆತ್ತೂರು ಹೋಬಳಿಯ ಕೊಡಗು ಗಡಿ ಭಾಗದ ಕಾಗಿನೆರೆ ಗ್ರಾಮದಲ್ಲಿ ಮಂಜು ಮುಸುಕಿದ ಬೆಟ್ಟಗಳ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ರೈಲು ಸಾಗುವ ಮನಮೋಹಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರು ಮೂಲದ ಪ್ರವಾಸಿಗರ ತಂಡವೊಂದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಗಣ್ಯರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಕಾಗಿನೆರೆ ಗ್ರಾಮ ದೇಶದ ಪ್ರವಾಸಿಗರ ಗಮನ ಸೆಳೆಯುವಂತಾಗಿದೆ.

ಇತ್ತೀಚೆಗೆ ಬೆಂಗಳೂರು ಮೂಲದ ಪ್ರವಾಸಿಗರ ತಂಡ ಕಾಗಿನೆರೆ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಪಶ್ಚಿಮ ಘಟ್ಟದ ಬೆಟ್ಟಗಳು ದಟ್ಟ ಮಂಜಿನಿಂದ ಆವೃತವಾಗಿದ್ದವು. ಇದೇ ಸಂದರ್ಭದಲ್ಲಿ ಈ ಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿರುವ ಕೇಸರಿ ಬಣ್ಣದ ವಂದೇ ಭಾರತ್ ರೈಲು ಬೆಟ್ಟಗಳ ನಡುವೆ ಸಾಗುತ್ತಿತ್ತು. ಹಸಿರು ಕಾನನ, ಮಂಜಿನ ಹೊದಿಕೆ ಹಾಗೂ ಅದರ ನಡುವೆ ಸಾಗುವ ಕೇಸರಿ ರೈಲಿನ ಅಪರೂಪದ ದೃಶ್ಯವನ್ನು ಪ್ರವಾಸಿಗರು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಬಳಿಕ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದು ವೈರಲ್ ಆಗಿದೆ.

ಕಾಗಿನೆರೆ ಗ್ರಾಮದಿಂದ ಸುಮಾರು ೭೦೦ ಮೀಟರ್ ಎತ್ತರದಲ್ಲಿರುವ ವೀಕ್ಷಣಾ ಸ್ಥಳ ಪ್ರವಾಸಿಗರಿಗೆ ಪಶ್ಚಿಮ ಘಟ್ಟದ ಅದ್ಭುತ ನೋಟವನ್ನು ಒದಗಿಸುತ್ತದೆ. ಇಲ್ಲಿಂದ ಅರಮನೆ ಗುಡ್ಡ, ಶಿರಾಡಿಘಾಟ್‌ನ ರೋಚಕ ಗುಂಡ್ಯ ಡಬಲ್ಟರ್ನ್ ಹಾಗೂ ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿರುವ ಐತಿಹಾಸಿಕ ಎಡಕುಮೇರಿ ಗುಹೆಯಿಂದ ರೈಲು ಹೊರಬರುವ ದೃಶ್ಯವನ್ನು ವೀಕ್ಷಿಸಬಹು ದಾಗಿದೆ.

ಮಳೆಗಾಲ ಮತ್ತು ಚಳಿಗಾಲದಲ್ಲಿ ಮಂಜಿನಿಂದ ಆವೃತವಾಗುವ ಬೆಟ್ಟ-ಗುಡ್ಡಗಳ ಸೌಂದರ್ಯ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಿಂದ ಕಾಗಿನೆರೆ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆ ಮೂಡಿದೆ. ಪ್ರವಾಸಿಗರ ಪ್ರಯತ್ನದಿಂದ ಕಾಗಿನೆರೆ ಗ್ರಾಮಕ್ಕೆ ರಾಷ್ಟ್ರಮಟ್ಟದ ಮನ್ನಣೆ ದೊರೆತಿರುವುದು ಸಕಲೇಶಪುರದ ಪ್ರವಾಸೋದ್ಯಮಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಕಾಗಿನೆರೆ ಭಾಗದಲ್ಲಿ ರಸ್ತೆ, ವೀಕ್ಷಣಾ ಸ್ಥಳ, ಪಾರ್ಕಿಂಗ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಅಧಿಕೃತ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರು ಹಾಗೂ ಪ್ರವಾಸಿಪ್ರೇಮಿಗಳ ಒತ್ತಾಯವಾಗಿದೆ.

” ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಾಗಿನೆರೆ ಗ್ರಾಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ಕ್ಷಣ. ಈ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಿದರೆ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.”

-ಪವನ್, ಕಾಗಿನೆರೆ ಗ್ರಾಮಸ್ಥರು

ಪಟ್ಲಬೆಟ್ಟದ ಮಾದರಿಯಲ್ಲಿ ಖ್ಯಾತಿ?: 

ಸಕಲೇಶಪುರದ ಹಲವು ಪ್ರವಾಸಿ ತಾಣಗಳು ಪ್ರವಾಸಿಗರು ಸೆರೆಹಿಡಿದ ದೃಶ್ಯಗಳು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆದ ಬಳಿಕ ಜನಪ್ರಿಯತೆ ಗಳಿಸಿರುವುದು ವಿಶೇಷ. ಇದಕ್ಕೆ ಪಟ್ಲಬೆಟ್ಟ ಉತ್ತಮ ಉದಾಹರಣೆ ಯಾಗಿದೆ. ಸುಮಾರು ಒಂದು ದಶಕದ ಹಿಂದೆ ಪ್ರವಾಸಿಗರೊಬ್ಬರು ಪಟ್ಲಬೆಟ್ಟದ ಪ್ರಕೃತಿ ಸೌಂದರ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದರು. ಬಳಿಕ ಅದು ವೈರಲ್ ಆಗಿ ಪಟ್ಲಬೆಟ್ಟ ವೀಕ್ಷಣಾ ಸ್ಥಳ ಜನಪ್ರಿಯಗೊಂಡು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದೀಗ ಅದೇ ಮಾದರಿಯಲ್ಲಿ ಕಾಗಿನೆರೆ ಕೂಡ ಪ್ರವಾಸಿ ನಕ್ಷೆಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ

” ದೇಶದ ಭೂಪಟದಲ್ಲಿ ಹಾಸನ ಜಿಲ್ಲೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಇದೀಗ ಪಶ್ಚಿಮಘಟ್ಟದ ಕಾಗಿನೆರೆ ಗ್ರಾಮದ ವಿಡಿಯೋವನ್ನು ಕೇಂದ್ರ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ.”

-ಲತಾ ಕುಮಾರಿ, ಜಿಲ್ಲಾಧಿಕಾರಿ, ಹಾಸನ 

” ಪಶ್ಚಿಮಘಟ್ಟದ ಕಾಗಿನೆರೆ ಅರಣ್ಯ ಪ್ರದೇಶದ ಸುಂದರ ದೃಶ್ಯ ವ್ಯಾಪಕವಾಗಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವೀಕ್ಷಿಸಿರುವುದು ಕ್ಷೇತ್ರದ ಶಾಸಕನಾಗಿ ನನಗೆ ಸಂತಸ ತಂದಿದೆ.”

-ಸಿಮೆಂಟ್ ಮಂಜು, ಶಾಸಕ, ಸಕಲೇಶಪುರ ಕ್ಷೇತ್ರ 

Tags:
error: Content is protected !!